ಬೆಂಗಳೂರು, ನವೆಂಬರ್ 26: ಗಡಿ ಭಾಗದ ಕನ್ನಡ ಶಾಲೆಗಳ ಅಭಿವೃದ್ದಿಯ ಜೊತೆಗೆ ಬೇರೆ ರಾಜ್ಯಗಳಲ್ಲಿರುವ ಕನ್ನಡ ಶಾಲೆಗಳನ್ನು ಬಲಗೊಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ನ್ಯೂಸ್ 18 ವಾಹಿನಿ ಹಮ್ಮಿಕೊಂಡಿದ್ದ ಕರುನಾಡ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
*ಕನ್ನಡಿಗರ ಅಸ್ಮಿತೆ ಉಳಿಸಬೇಕು*
ಭಾರತದಲ್ಲಿ ಕನ್ನಡಿಗರೂ ಎಲ್ಲಿಯೇ ಹೋದರೂ, ಕನ್ನಡಿಗರು ಅಂತ ಗುರುತಿಸುತ್ತಾರೆ. ಕನ್ನಡ ನಮ್ಮ ಅಸ್ಮಿತೆ ನಾವು ಅದನ್ನು ಉಳಿಸಿಕೊಂಡು ಹೋಗಬೇಕು.
ನಮ್ಮ ನಾಡು ಅತ್ಯಂತ ವಿಶಿಷ್ಟ ವಾಗಿದೆ. ಕರ್ನಾಟಕಕ್ಕೆ 'ಗಾಡ್ಸ್ ಲಿವಿಂಗ್ ಕಂಟ್ರಿ ಎನ್ನುವುದು ನಮ್ಮ ರಾಜ್ಯಕ್ಕೆ ನೀಡಿರುವ ಹೊಸ ಟ್ಯಾಗ್ ಲೈನ್ ಎಂದರು.
*ಸಮೃದ್ಧ ಕರ್ನಾಟಕ*
ನಮ್ಮ ರಾಜ್ಯದಲ್ಲಿ ಹುಟ್ಟುವ ನದಿಗಳು ಪೂರ್ವಾಭಿಮುಖವಾಗಿ ಹರಿದು ನಮ್ಮ ನಾಡನ್ನು ರಕ್ಷಿಸಿವೆ.
ಈ ನಾಡಿನಲ್ಲಿ ಹತ್ತು ಕೃಷಿ ವಲಯಗಳಿವೆ. ವರ್ಷದ ಮುನ್ನೂರು ದಿನ ಸೂರ್ಯನ ಬೆಳಕು ಬೀಳುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ 8 ಜನ ಜ್ಞಾನ ಪೀಠ ಪ್ರಶಸ್ತಿ ಪಡೆದಿದ್ದಾರೆ. ಯಾವ ರಾಜ್ಯದಲ್ಲಿಯೂ ಅಷ್ಟು ಪ್ರಶಸ್ತಿ ಪಡೆದಿಲ್ಲ. ಮೊದಲು ಪಶ್ಚಿಮ ಬಂಗಾಳದಲ್ಲಿ ಸಾಹಿತಿಗಳು ಹೆಚ್ಚಿದ್ದಾರೆ ಎಂಬ ಮಾತಿತ್ತು. ಬಂಗಾಳ ಇಂದು ಯೋಚಿಸುವುದನ್ನು ದೇಶ ನಾಳೆ ಯೋಚಿಸುತ್ತದೆ ಅಂತ ಮಾತಿತ್ತು. ಈಗ ಬೆಂಗಳೂರು ಇಂದು ಯೋಚಿಸುವುದನ್ನು ದೇಶ ನಾಳೆ ಯೋಚಿಸುತ್ತದೆ ಎಂದಾಗಿದೆ ಎಂದು ತಿಳಿಸಿದರು.
*ಕನ್ನಡಿಗರು ಒಂದಾಗಿರಬೇಕು*
ಕನ್ನಡ ನಾಡಿನ ಅಸ್ಮಿತೆಯ ಬಗ್ಗೆ ಅಕ್ಕ ಪಕ್ಕದ ರಾಜ್ಯಗಳು ಮಾಡುತ್ತಿವೆ. ಈ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿರಬೇಕು ಎಂದರು.
*ಮುಂದಿನ ಜನ್ಮದಲ್ಲೂ ಕನ್ನಡನಾದಲ್ಲೇ ಹುಟ್ಟುವೆ*
ನಾನು ಕನ್ನಡ ನಾಡಿನಲ್ಲಿ ಹುಟ್ಟಿದ ಪುಣ್ಯವಂತ. ಕನ್ನಡಿಗರ ಋಣ ತೀರಿಸಲು ನಾನು ಇನ್ನೊಂದು ಜನ್ಮದಲ್ಲಿ ಇಲ್ಲಿಯೇ ಹುಟ್ಟುತ್ತೇನೆ.
ಕರ್ನಾಟಕ ಏಕೀಕರಣಕ್ಕೆ ನಮ್ಮ ತಂದೆ ಹೋರಾಟ ಮಾಡಿದ್ದರು. ಸ್ವಾತಂತ್ರ್ಯ ಹೋರಾಟ, ಗೋವಾ ವಿಮೋಚನೆ, ಗೋಕಾಕ ಚಳುವಳಿಯಲ್ಲಿ ನಮ್ಮ ತಂದೆ ಹೋರಾಟ ಮಾಡಿದ್ದರು ಎಂದು ಸ್ಮರಿಸಿದರು.
*ಸಾಹಿತ್ಯ ಸಮ್ಮೇಳನ*
ಹಾವೇರಿ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಅದನ್ನು ಯಶಸ್ವಿಗೊಳಿಸುವ ಕೆಲಸ ಮಾಡುತ್ತೇವೆ ಎಂದರು.