ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್
ವಾರ್ತಾಜಾಲ,ಶಿಡ್ಲಘಟ್ಟ : ಆಧುನಿಕ ಭಾರತದ ನಿರ್ಮಾತೃ, ಶಿಕ್ಷಣ ನೀತಿಯ ನಿರ್ಮಾಪಕ, ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ಹರಿಕಾರ, ಶಿಕ್ಷಣ ಪ್ರೇಮಿ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರ ಜನ್ಮದಿನ ಇಂದು. ಇದರ ಸವಿನೆನಪಿಗಾಗಿಯೇ ಮಕ್ಕಳ ದಿನಾಚರಣೆ ಆಚರಿಸುತ್ತೇವೆ ಎಂದು ಮುಖ್ಯೋಪಾಧ್ಯಾಯಿನಿ ಬಿ.ರಾಜೇಶ್ವರಿ ತಿಳಿಸಿದರು.
ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಯ ಕೊಂಡಪ್ಪಗಾರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
1889 ರಲ್ಲಿ ಜನಿಸಿದ ಜವಹರಲಾಲ್ ನೆಹರೂ ಅವರನ್ನು ಮಕ್ಕಳು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯುತ್ತಿದ್ದರು. ಮಕ್ಕಳ ಮೇಲೆ ಅವರಿಗೆ ವಿಶೇಷವಾದ ಪ್ರೀತಿ, ಕಾಳಜಿ ಇತ್ತು. ಮಕ್ಕಳಿಗಾಗಿಯೇ ಸ್ಥಳೀಯ ಸಿನಿಮಾ ಮಾಡಲು ಮತ್ತು ಪ್ರತಿ ಮಕ್ಕಳ ಮನರಂಜನೆಯ ಹಕ್ಕನ್ನು ಉತ್ತೇಜಿಸಲು ನೆಹರು 1955 ರಲ್ಲಿ ಚಿಲ್ಡ್ರನ್ಸ್ ಫಿಲ್ಮ್ ಸೊಸೈಟಿ ಆಫ್ ಇಂಡಿಯಾವನ್ನು ಸ್ಥಾಪಿಸಿದರು.
ಮಕ್ಕಳ ಮೇಲಿನ ಅವರ ಪ್ರೀತಿಯ ಜೊತೆಗೆ, ರಾಷ್ಟ್ರವನ್ನು ನಿರ್ಮಿಸಲು ಅವರು ನೀಡಿದ ಕೊಡುಗೆಗಾಗಿ ನೆಹರೂ ಅವರನ್ನು ಗೌರವಿಸಲು ಅವರ ಜನ್ಮ ವಾರ್ಷಿಕೋತ್ಸವದ ದಿನವನ್ನು ಸಹ ಈ ದಿನ ಆಚರಿಸಲಾಗುತ್ತದೆ. ಮಕ್ಕಳು ನಮ್ಮ ಉಜ್ವಲ ನಾಳೆಯ ಭರವಸೆಗಳನ್ನು ಮತ್ತು ನಮ್ಮ ಸಂತೋಷದ ಭವಿಷ್ಯದ ಕನಸುಗಳನ್ನು ಹೊತ್ತಿದ್ದಾರೆ ಶುಭವಾಗಲಿ ಎಂದು ಶುಭ ಕೋರಿದರು.
ಸಹ ಶಿಕ್ಷಕರಾದ ಸುಬ್ಬರಾಮ್ ಮಕ್ಕಳಿಗೆ ಮ್ಯೂಜಿಕಲ್ ಚೇರ್,ಗೋಣಿ ಚೀಲ, ಮಡಿಕೆ ಹೊಡೆಯುವುದು ಇನ್ನಿತರೆ ಕ್ರೀಡಾ ಚಟುವಟಿಕೆಗಳನ್ನು ಆಡಿಸಿ ಮಕ್ಕಳನ್ನು ಮನರಂಜಿಸಿದರು. ನಂತರ ಮಕ್ಕಳಿಗೆ ಹಾಗೂ ಪೋಷಕರಿಗೆ ಸಿಹಿ ಊಟದ ವ್ಯವಸ್ಥೆ ಮಾಡಿದರು.
ಮಕ್ಕಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸರ್ಕಾರಿ ಶಾಲೆಗಳು ಉಳಿಯಬೇಕೆಂದು ಗ್ರಾಮಪಂಚಾಯಿತಿ ಸದಸ್ಯರಾದ ಶ್ರೀರಂಗಪ್ಪ ಮಾತನಾಡಿದರು. ಶ್ರೀರಂಗಪ್ಪ, ಆವಲರೆಡ್ಡಿ ಮತ್ತು ಪೋಷಕರು ನಲಿ ಕಲಿ ಮಕ್ಕಳಿಗಾಗಿ 20 ಚೇರ್ಸ್, 5 ಟೇಬಲ್ ಮತ್ತು ಸಮವಸ್ತ್ರವನ್ನು ಉಚಿತವಾಗಿ ವಿತರಿಸಿ ಶುಭಹಾರೈಸಿದರು.