ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್
ವಾರ್ತಾಜಾಲ,ಶಿಡ್ಲಘಟ್ಟ: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮಕ್ಕಳು ದೇಶದ ಆಸ್ತಿ, ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಗುರ್ತಿಸುವ ಕೆಲಸವಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಶ್ವತ್ಥಮ್ಮ ಹೇಳಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸೊಸೈಟಿ ವತಿಯಿಂದ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವನ್ನು ನೀಡುವುದು, ಮಕ್ಕಳ ಆರೋಗ್ಯವನ್ನು ಉತ್ತಮಪಡಿಸುವುದು ಹಾಗೂ ಮಕ್ಕಳನ್ನು ಮಾನಸಿಕವಾಗಿ ದೈಹಿಕವಾಗಿ ಸದೃಢಪಡಿಸುವುದು ಇಲಾಖೆಯ ಮುಖ್ಯ ಜವಾಬ್ದಾರಿಯಾಗಿದೆ. ಆದ್ದರಿಂದ ಪ್ರತಿಯೊಂದು ಮಗುವು ದೇಶದ ಆಸ್ತಿ ಎಂದು ಅಭಿಪ್ರಾಯ ಪಟ್ಟರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಮುನಿರಾಜು ಮಾತನಾಡಿ ಸಮಾಜದಲ್ಲಿ ಮಕ್ಕಳ ಬೌದ್ಧಿಕ ಹಾಗೂ ದೈಹಿಕ ಬೆಳವಣಿಗೆಯಲ್ಲಿ ಅಂಗನವಾಡಿ ಶಿಕ್ಷಕಿಯರ ಪಾತ್ರ ತುಂಬಾ ಪ್ರಮುಖವಾಗಿದೆ. ಬಾಲ್ಯದಲ್ಲಿ ನಾನು ಸಹ ಅಂಗನವಾಡಿಯಲ್ಲಿ ಬೆಳೆದ ವ್ಯಕ್ತಿ. ಆದ್ದರಿಂದ ಪ್ರತಿಯೊಂದು ಮಗುವನ್ನು ರಕ್ಷಿಸಿ ಪೋಷಿಸುವುದು ಪ್ರತಿಯೊಬ್ಬರ ಆಶಯವಾಗಬೇಕೆಂದು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ ಮಾತನಾಡಿ ಮಕ್ಕಳು ದೇಶದ ಸಂಪತ್ತು, ಮಗು ಬೆಳವಣಿಗೆಗೆ ತೊಂದರೆಯಾದರೆ ಸಮಾಜದ ಮೇಲೆ ಪರಿಣಾಮವಾಗುತ್ತದೆ. ಮಕ್ಕಳನ್ನು ನಿರ್ಲಕ್ಷಿಸದೆ ರಕ್ಷಣೆ- ಪೋಷಣೆ ಆಹಾರ ವೈದ್ಯಕೀಯ ಸೌಲಭ್ಯ ಕೊಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ನವೀನತೆ ತಾರ್ಕಿಕ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಜಿಲ್ಲಾ ಮಟ್ಟದ ಆಸದಾರಣ ಮಕ್ಕಳಿಗೆ ಪ್ರಶಸ್ತಿಯೊಂದಿಗೆ ಸನ್ಮಾನಿಸಿ ಗೌರವ ಗೌರವಿಸಲಾಯಿತು. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ಕನ್ನಡ ಗೀತೆ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಸಂದರ್ಭದಲ್ಲಿ ನಾರಾಯಣಪ್ಪ,ಜಗದೀಶ್, ಸಿ ಡಿ ಪಿ ಓ ನೌತಾಜ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್, ಆರೋಗ್ಯ ನಿರೀಕ್ಷಕ ದೇವರಾಜ್, ಲೋಕೇಶ್, ಕಾರ್ಯಕ್ರಮ ಸಂಯೋಜಕರಾದ ಮಂಜುನಾಥ್, ವಿಜಯ್ ಹಾಗೂ ಪೋಷಕರು ಮತ್ತಿತರು ಹಾಜರಿದ್ದರು.