ಬೆಂಗಳೂರು, ನವೆಂಬರ್ 11 (ಕರ್ನಾಟಕ ವಾರ್ತೆ) : ನಾಡಪ್ರಭು ಕೆಂಪೇಗೌಡ ಅವರ ಅಧ್ಭುತ ಹಾಗೂ ಅದ್ವಿತೀಯ ಕಲ್ಪನೆಯಂತೆಯೇ ಬೆಂಗಳೂರು ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ಪ್ರಕಟಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಾಣಿಜ್ಯ, ಸಂಸ್ಕøತಿ ಹಾಗೂ ಸವಲತ್ತುಗಳ ಕ್ಷೇತ್ರಗಳಲ್ಲಿ ಕೆಂಪೇಗೌಡರ ದೂರದೃಷ್ಠಿಯ ಲಾಭವನ್ನು ಬೆಂಗಳೂರು ಪಡೆದಿದೆ ಎಂದು ಇಲ್ಲಿ ಇಂದು ಬಣ್ಣಿಸಿದರು.
ನಗರದ ಸಮೀಪದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಉದ್ಘಾಟಿಸಿ, ವಿಶ್ವದ ಅತೀ ಎತ್ತರದ ಪ್ರಗತಿ ಪ್ರತಿಮೆ ಹೆಸರಿನಲ್ಲಿ ಸ್ಥಾಪಿಸಿರುವ ನಾಡಪ್ರಭು ಕೆಂಪೇಗೌಡ ಅವರ 108 ಅಡಿಯ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿ, ನಾಡ ಪ್ರಭು ಕೆಂಪೇಗೌಡ, ಸಂತ ಶ್ರೇಷ್ಠ ಕನಕದಾಸ ಹಾಗೂ ವೀರ ವನಿತೆ ಒನಕೆ ಓಬವ್ವ ಅವರ ಭಾವಚಿತ್ರಗಳಿಗೆ ಪುಷ್ಟ ನಮನ ಸಲ್ಲಿಸಿ ಸಾರ್ವಜನಿಕ ಸಭೆಯನ್ನುಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕೋವಿಡ್-19 ರ ಸಂದರ್ಭದಲ್ಲೂ ಕರ್ನಾಟಕದಲ್ಲಿ ನಾಲ್ಕು ಲಕ್ಷ ಕೋಟಿ ರೂ ಹೂಡಿಕೆಯಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತೆರದಲ್ಲಿ ಮಾತ್ರವಲ್ಲ, ಜೈವಿಕ ತಂತ್ರಜ್ಞಾನ, ರಕ್ಷಣಾ ಉಪಕರಣಗಳ ತಯಾರಿಕೆ, ವೈಮಾನಿಕ ಹಾಗೂ ಅಂತರಿಕ್ಷ ಕೈಗಾರಿಕಾ ಕ್ಷೇತ್ರಗಳು ಒಳಗೊಂಡಂತೆ ಎಲ್ಲಾ ಕ್ಷೇತ್ರಗಳಲ್ಲಿ ಶೇಕಡಾ 25 ರಷ್ಟು ಕೊಡುಗೆ ಕರ್ನಾಟಕದ್ದಾಗಿದೆ.
ವಾಣಿಜ್ಯ ಕ್ಷೇತ್ರದಲ್ಲಿ ಬೆಂಗಳೂರು ಎಷ್ಟು ಮುಂದಿದೆ ಎಂದರೆ ನವೋದ್ಯಮದ ತವರಾಗಿ ರೂಪಿತರಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ನಕ್ಷೆಯಲ್ಲಿ ನವ ಭಾರತದ ಹೊಸ ಅಸ್ಮಿತೆಯೇ ಆಗಿದೆ.
ದೇಶದಲ್ಲಿಯೇ ಅತೀ ಹೆಚ್ಚು ವಿದೇಶೀ ನೇರ ಬಂಡವಾಳದ ಹೂಡಿಕೆ ಕರ್ನಾಟಕದಲ್ಲಾಗಿದೆ. ರಾಷ್ಟ್ರದ ರಕ್ಷಣಾ ಕ್ಷೇತ್ರದಲ್ಲಿ ಶೇಕಡಾ 70 ರಷ್ಟು ಕೊಡುಗೆ ಕರ್ನಾಟಕದ್ದೇ ಆಗಿದೆ.
ಫಾರ್ಚೂನ್ – 500 ಕಂಪನಿಗಳ ಪಟ್ಟಿಯಲ್ಲಿರುವ 400 ಕ್ಕೂ ಹೆಚ್ಚು ಕಂಪನಿಗಳು ಕರ್ನಾಟಕದಲ್ಲಿವೆ. ವಿದ್ಯುತ್ ವಾಹನಗಳ ತಯಾರಿಕಾ ಕ್ಷೇತ್ರದಲ್ಲಿಯೂ ಕರ್ನಾಟಕವು ಮುಂಚೂಣಿಯಲ್ಲಿದೆ ಇದು ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತವಿರುವ ಡಬಲ್ ಎಂಜಿನ್ ಸರ್ಕಾರದ ತಾಕತ್ತಾಗಿದೆ.
ಸ್ವದೇಶಿ ನಿರ್ಮಿತ ಪರಿಕಲ್ಪನೆಯ ಅಭಿವೃದ್ಧಿ ಸೂತ್ರ ಆತ್ಮ ನಿರ್ಭರ ಭಾರತದ ಮೇಡ್ ಇನ್ ಇಂಡಿಯಾ ಬೆಂಗಳೂರಿನ ಯುವ ಜನತೆ ಹಾಗೂ ವೃತ್ತಿಪರರಿಗೆ ವಿಪುಲ ಉದ್ಯೋಗಾವಕಾಶಗಳನ್ನು ದೊರಕಿಸಿಕೊಟ್ಟಿದೆ. ಸದಾ ಹಳೆಯ ಯೋಚಜೆ ಮತ್ತು ಹಳೆಯ ಯೋಜನೆಗಳಲ್ಲೆ ಹೆಜ್ಜೆ ಇಡುತ್ತಿದ್ದ ಹಿಂದಿನ ಸರ್ಕಾರಗಳಿಗೆ ಹೊಸ ಆಲೋಚನೆಗಳೇ ಹೊಳೆಯುತ್ತಿರಲಿಲ್ಲ. ಆದರೆ, ತಮ್ಮ ಸರ್ಕಾರದ ಆಡಳಿತ ನಿರ್ವಹಣೆಯಲ್ಲಿ ಭೌತಿಕ ಮೂಲಭೂತ ಸೌಲಭ್ಯ ಹಾಗೂ ಅಂಕಿತ ಪಾವತಿ ( ಡಿಜಿಟಲ್ ಪೇಮೇಂಟ್ ) ಯಂತಹ ಯೋಜನೆಗಳು ಅನುಷ್ಠಾನಗೊಂಡು ಅಭಿವೃದ್ಧಿಯ ವೇಗ ಹೆಚ್ಚಾಗಿದೆ. ಅಂತೆಯೇ, ಬಹು ಮಾದರಿ ಸಂಪರ್ಕಕ್ಕೆ ಪ್ರಗತಿಯ ವೇಗ ಭಾರತದ ಶಕ್ತಿ ಎಂಬ ಧ್ಯೇಯ ಹೊತ್ತ ಪ್ರಧಾನ ಯೋಜನೆ ಪ್ರಧಾನ ಮಂತ್ರಿ ರಾಷ್ಟ್ರೀಯ ಯೋಜನೆ ( ಪ್ರೈ ಮಿನಿಸ್ಟರ್ಸ್ ನ್ಯಾಷನಲ್ ಮಾಸ್ಟರ್ ಪ್ಲಾನ್ ಫಾರ್ ಮಲ್ಟಿ ಮಾಡೆಲ್ ಕನೆಕ್ಟಿವಿಟಿ) ರಾಷ್ಟ್ರೀಯ ಸಾಗಣಾ ನೀತಿ ( ನ್ಯಾಷನಲ್ ಲಾಜಿಸ್ಟಿಕ್ಸ್ ಪಾಲಿಸಿ ) ಯಲ್ಲಿನ ನವನವೀನ ಅಂಶಗಳು ದೇಶವನ್ನು ಪ್ರಗತಿ ಪಥದಲ್ಲಿ ಕೊಂಡೊತ್ತಯತ್ತಿದೆ ಎಂದು ಪ್ರಧಾನಿ ವಿವರಿಸಿದರು.
ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ ನಿರ್ಮಿಸಿರುವ 35 ಕೋಟಿ ಮನೆಗಳ ಪೈಕಿ ಎಂಟು ಲಕ್ಷ ಮನೆಗಳನ್ನು ಕರ್ನಾಟಕದಲ್ಲಿಯೇ ನಿರ್ಮಿಸಲಾಗಿದೆ. ಕೊಳವೆ ನೀರು ಸರಬರಾಜು ಯೋಜನೆಯಲ್ಲಿ ಏಳು ಕೋಟಿ ಸಂಪರ್ಕಗಳಿಗೆ ಪ್ರತಿಯಾಗಿ 30 ಲಕ್ಷ ಂಪರ್ಕಗಳು ಕರ್ನಾಟಕದ್ದಾಗಿದೆ. ಆಯುಷ್ಮಾನ್ ಭಾರತ್ ಆರೋಜ್ಯ ವಿಮಾ ಯೋಜನೆಯಲ್ಲಿ ದೇಶದ ನಾಲ್ಕು ಕೋಟಿ ಫಲಾನುಭವಿಗಳ ಪೈಕಿ 30 ಲಕ್ಷ ಫಲಾನುಭವಿಗಳು ಕರ್ನಾಟಕದವರೇ ಆಗಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 10 ಕೋಟಿ ರೈತರಿಗೆ ಪ್ರತಿಯಾಗಿ 2.25 ಲಕ್ಷ ಫಲಾನುಭವಿಗಳು ಕರ್ನಾಟಕದವರಾಗಿದ್ದಾರೆ ಎಂದು ಪ್ರಧಾನ ಮಂತ್ರಿ ಅಂಕಿ-ಅಂಶಗಳನ್ನು ಹಂಚಿಕೊಂಡರು.
ಸಾಮಾಜಿಕ ಜಾಲತಾಣದ ತಮ್ಮ ್ಲ ಟ್ವೀಟ್‍ನಲ್ಲಿ ತಾವು ಹಂಚಿಕೊಂಡ ಚಿತ್ರಕ್ಕಿಂತಲೂ ನೈಜವಾಗಿ ನೋಡಿದಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಅತ್ಯಂತ ಸುಂದರ ಮತ್ತು ಆಧುನಿಕವಾಗಿದೆ ಎಂದು ಮೋದಿ ಅವರು ಹರ್ಷ ವ್ಯಕ್ತಪಡಿಸಿದರು.
ರಾಷ್ಟ್ರದಲ್ಲಿ ವಾಯು ಯಾನ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ. ವಿಶ್ವದ ಹಲವು ದೇಶಗಳ ಪೈಕಿ ಭಾರತದಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಅತ್ಯಧಿಕ ಏರಿಕೆಯಾಗಿದೆ, ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿನ ಗಣನೀಯ ಏರಿಕೆ ಹಾಗೂ ಪ್ರಯಾಣ ಮಾರುಕಟ್ಟೆ ವಿಸ್ತಾರಗೊಂಡಿರುವುದನ್ನು ಗಮನಿಸಿ ಈ ನಿಟ್ಟಿನಲ್ಲಿ ತಮ್ಮ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ವಾಯುಯಾನ ಸಂಪರ್ಕದ ಕುರಿತು ಹೇಳಬೇಕಾದರೆ ಕಳೆದ ಎಂಟು ವರ್ಷಗಳ ಹಿಂದೆ ಅಂದರೆ 2014 ರಲ್ಲಿ ದೇಶದಲ್ಲಿ 70 ವಿಮಾನ ನಿಲ್ದಾಣಗಳಿದ್ದವು. ಇದೀಗ ದೇಶದಲ್ಲಿ ದುಪ್ಪಟ್ಟು ಅಂದರೆ 140 ವಿಮಾನ ನಿಲ್ದಾಣಗಳಿವೆ. ಹೊಸ ಟರ್ಮಿನಲ್‍ಗಳು ಹೊಸ ಸೌಲಭ್ಯಗಳು ಹೀಗೆ ಹಳೆಯ ವಿಮಾನ ನಿಲ್ದಾಣಗಳನ್ನೂ ಮೇಲ್ದರ್ಜೇಗೇರಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಜಾತಿ-ಜಾತಿಗಳ ನಡುವೆ ಸಂಘರ್ಷ ಬೇಡ ಎಂಬ ಸಂದೇಶ ಹೊತ್ತ ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂಬ ಸಂತ ಶ್ರೇಷ್ಠ ಕನಕದಾಸರ ಸತ್ವಭರಿತ ತತ್ವ ಪದವನ್ನು ಸ್ಮರಿಸಿದ ನರೇಂದ್ರ ಮೋದಿ ಅವರು ಮನಷ್ಯ-ಮನುಷ್ಯರನ್ನು ಒಂದುಗೂಡಿಸುವ ಭಗವತ್ ಭಕ್ತಿ ಹಾಗೂ ಸಾಮಾಜಿಕ ಶಕ್ತಿಗೆ ಕನಕದಾಸರು ಪ್ರೇರಣೆಯಾಗಿದ್ದರು ಎಂದು ಬಣ್ಣಿಸಿದರು.
ಅದೇ ರೀತಿ ರೈಲು ಸಂಪರ್ಕ ಕ್ಷೇತ್ರದಲ್ಲೂ ಕ್ರಾಂತಿಕಾಂತಿ ಬೆಳವಣಿಗಳಾಗಿವೆ. ಎಲ್ಲಾ ನಿಲ್ದಾಣಗಳಲ್ಲೂ ನಿಲುಗಡೆ ಮಾಡಿ ತೆರಳುತ್ತಿದ್ದ ರೈಲುಗಳ ವೇಗ ಹೆಚ್ಚಿಸಲಾಗಿದೆ. ದೇಶಾದ್ಯಂತ ವಂದೇ ಭಾರತ್ ಮತ್ತು ವಿಸ್ಟೋಡೋಮ್ ನ 400 ಕ್ಕೂ ಹೆಚ್ಚು ರೈಲುಗಳು ಸಧ್ಯದಲ್ಲಿಯೇ ಸಂಚರಿಸಲಿವೆ.. ಚನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್ ಎಕ್ಸಪ್ರೆಸ್ ಹಾಗೂ ಬೆಂಗಳೂರು ಮತ್ತು ವಾರಣಾಸಿ ನಡುವೆ ಸಂಚರಿಸಲಿರುವ ಭಾರತ್ ಗೌರವ್ ಎಕ್ಸ್‍ಪ್ರೆಸ್ ರೈಲುಗಳಿಗೆ ಇಂದು ಹಸಿರು ನಿಶಾನೆ ತೋರಿ ರಾಜ್ಯದ ಜನತೆಗೆ ಕೊಡುಗೆಯಾಗಿ ನೀಡಲಾಗಿದೆ. ವಾರಣಾಸಿಯಲ್ಲಿ ಕಾಶಿ ವಿಶ್ವನಾಥನ ದರ್ಶನ, ಪ್ರಯಾಗ್ ರಾಜ್ ( ಅಲಹಾಬಾದ್ ) ನಲ್ಲಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಹಾಗೂ ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿಯ ಕಣ್ತುಂಬಿಕೊಳ್ಳಲು ಭಾರತ್ ಗೌರವ್ ಎಕ್ಸ್‍ಪ್ರಸ್ ರಿಯಾಯಿತಿ ದರದಲ್ಲಿ ವಿಶೇಷ ಅವಕಾಶ ದೊರಕಿಸಿಕೊಡಲಿದೆ ಎಂದು ನರೇಂದ್ರ ಮೋದಿ ಅವರು ತಿಳಿಸಿದರು.
ಬೆಂಗಳೂರಿನಲ್ಲಿನ ಸರ್ ಎಂ ವಿಶ್ವೇಶ್ವರಯ್ಯ ಸಂಪೂರ್ಣ ಹವಾನಿಯಂತ್ರಿತ ರೈಲು ನಿಲ್ದಾಣ ಹೊಸ ಅನುಭವವನ್ನೇ ನೀಡುತ್ತದೆ ಎಂದು ಹೇಳಿದ ಮೋದಿ ಅವರು ಬೆಂಗಳೂರಿನ ಕಂಟೋನ್ ಮೇಂಟ್ ಮತ್ತು ಯಶವಂತಪುರ ರೈಲು ನಿಲ್ದಾಣಗಳಿಗೂ ಕಾಯಕಲ್ಪ ನೀಡಲಾಗಿದೆ ಎಂದು ಹೇಳಿದರು.
ಹದಿನೈದನೇ ಶತಮಾನದಲ್ಲಿಯೇ ತಮ್ಮ ರಾಮಧಾನ್ಯ ಚರಿತೆಯಲ್ಲಿ ಕನಕದಾಸರು ಸಿರಿಧಾನ್ಯದ ಮಹತ್ವವನ್ನು ಉಲ್ಲೇಖಿಸಿದ್ದುದ್ದನ್ನು ಪ್ರಧಾನ ಮಂತ್ರಿ ನೆನಪಿಸಿಕೊಂಡರು. ಸಿರಿಧಾನ್ಯಗಳಲ್ಲೊಂದಾದ ರಾಗಿ ಕರ್ನಾಟಕದ ಬಹುಜನರ ಜನಪ್ರಯ ಆಹಾರವಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಂಪೇಗೌಡ ಅವರು ತೊಡುತ್ತಿದ್ದ ಶೈಲಿಯ ಪೇಟವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ತೊಡಿಸಿದರು. ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಮೋದಿ ಅವರಿಗೆ ಕೇಂಪೇಗೌಡ ಅವರ ಪ್ರತಿಕೃತಿಯ ಸ್ಮರಣಿಕೆ ನೀಡಿದರು. ಕಂದಾಯ ಸಚಿವ ಆರ್ ಅಶೋಕ್ ಅವರು ಪ್ರಧಾನಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ ನಾರಾಯಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್, ನಿಕಟ ಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಶ್ರೀ ಗುರುಗುಂಡ ಬ್ರಹ್ಮೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಅವರೂ ಸೇರಿದಂತೆ ಹಲವು ಗಣ್ಯರು ಈ ಗೌರವ ಸಪರ್ಮಣೆಯ ವೇಳೆ ಸಾಕ್ಷಿಯಾಗಿದರು.
ಈ ಮುನ್ನ, ಕರ್ನಾಟಕದ ಜನತೆಗೆ ಕೋಟಿ ಕೋಟಿ ನಮಸ್ಕಾರಗಳು ಎಂದು ಭಾಷಣ ಪ್ರಾರಂಭಿದಾಗ ಜನಸ್ತೋಮದಲ್ಲಿನ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಇದೇ ಸಂದರ್ಭದಲ್ಲಿ ನಾಡ ಪ್ರಭು ಕೆಂಪೇಗೌಡರ ಸಾಕ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಲಕ್ಷೋಪಲಕ್ಷ ಜನ ಈ ಕಾರ್ಯಕ್ರಮವನ್ನು ಕಣ್ತುಂಬಿಕೊಂಡದ್ದು ವಿಶೇಷವಾಗಿತ್ತು.