ರಾಜ್ಯದ 1.62 ಲಕ್ಷ ವಿದ್ಯಾರ್ಥಿಗಳು ಈ ವರ್ಷ ಸರ್ಕಾರಿ ಶಾಲೆಯನ್ನು ತ್ಯಜಿಸಿ ಖಾಸಗಿ ಶಾಲೆ ಸೇರಿರುವುದಕ್ಕೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಶಿಕ್ಷಣ ಕ್ಷೇತ್ರದ ಮೇಲಿರುವ ನಿರ್ಲಕ್ಷ್ಯ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ರವರ ಅಸಮರ್ಥತೆ ಕಾರಣ ಎಂದು ಆಮ್ ಆದ್ಮಿ ಪಾರ್ಟಿ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್ ದಾಸರಿ, “ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಲಕ್ಷಕ್ಕೂ ಅಧಿಕ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಬಿಡಿಸಿ, ಸರ್ಕಾರಿ ಶಾಲೆಗೆ ಸೇರಿಸಿದ್ದರು. ಆದರೆ ಈಗ ಸರ್ಕಾರಿ ಶಾಲೆಗಳ ದುಸ್ಥಿತಿಯಿಂದ ಬೇಸತ್ತು ಅವರು ತಮ್ಮ ಮಕ್ಕಳನ್ನು ಪುನಃ ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ. ಪರಿಣಾಮವಾಗಿ, ಒಂದರಿಂದ ಹತ್ತನೇ ತರಗತಿವರೆಗಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ 1.62 ಲಕ್ಷ ಕುಸಿದಿದೆ” ಎಂದು ಹೇಳಿದರು.
“ಕರ್ನಾಟಕದಲ್ಲಿರುವ 47,585 ಸರ್ಕಾರಿ ಶಾಲೆಗಳ ಪೈಕಿ 6,529 ಶಾಲೆಗಳಲ್ಲಿ ಕೇವಲ ಒಬ್ಬರೇ ಶಿಕ್ಷಕರಿದ್ದಾರೆ. ಬಹುತೇಕ ಶಾಲೆಗಳಲ್ಲಿ ಮೂಲಸೌಕರ್ಯಗಳು ಹಾಗೂ ಶಿಕ್ಷಕರ ಕೊರತೆಯಿದೆ. ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಕೋಮು ರಾಜಕೀಯಕ್ಕೆ ನೀಡುವ ಆದ್ಯತೆಯನ್ನು ಅಭಿವೃದ್ಧಿಗೆ ನೀಡದಿರುವುದು ದುರಂತ. ದೆಹಲಿಯ ಆಮ್ ಆದ್ಮಿ ಪಾರ್ಟಿ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಅಳವಡಿಸಿದ್ದು, ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿದೆ. ಕರ್ನಾಟಕದಲ್ಲೂ ಅಂತಹ ಶೈಕ್ಷಣಿಕ ಕ್ರಾಂತಿಗಾಗಿ ಆಮ್ ಆದ್ಮಿ ಪಾರ್ಟಿ ಸರ್ಕಾರ ಅಧಿಕಾರಕ್ಕೆ ಬರಬೇಕು” ಎಂದು ಮೋಹನ್ ದಾಸರಿ ಹೇಳಿದರು.
*ಬಿಜೆಪಿಯ ಹೇಡಿತನ ಬಟಾಬಯಲು:*
ಮೀಸಲಾತಿ ನಿಗದಿಗೆ ಮೂರು ತಿಂಗಳು ಸಮಯ ಬೇಕೆಂದು ರಾಜ್ಯ ಸರ್ಕಾರವು ಕೋರ್ಟ್‌ಗೆ ಮನವಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಮೋಹನ್ ದಾಸರಿ, “2020ರಲ್ಲಿ ನಡೆಯಬೇಕಾಗಿದ್ದ ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು, ಕೋರ್ಟ್ ಛೀಮಾರಿ ಹಾಕಿದ ನಂತರವೂ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿರುವುದು ಬಿಜೆಪಿಯ ಹೇಡಿತನಕ್ಕೆ ಸಾಕ್ಷಿ. ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಬೆಂಗಳೂರು ಶಾಸಕರು ಕೂಡ ಬಿಬಿಎಂಪಿ ಚುನಾವಣೆಗೆ ಒತ್ತಾಯಿಸುತ್ತಿಲ್ಲ. ಮೂರೂ ಪಕ್ಷಗಳಿಗೆ ಸೋಲುವ ಭಯ ಕಾಡುತ್ತಿದ್ದು, ಆದ್ದರಿಂದಲೇ ಚುನಾವಣೆ ಮುಂದೂಡುವುದರಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಿವೆ” ಎಂದು ಹೇಳಿದರು.
ಬಿಬಿಎಂಪಿ ಚುನಾವಣೆಯಲ್ಲಿನ ಮುಖಭಂಗವು ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ಬಿಜೆಪಿಗೆ ತಿಳಿದಿದೆ. ಆದ್ದರಿಂದ ವಿಧಾನಸಭಾ ಚುನಾವಣೆಯ ಜೊತೆಗೆ ಅಥವಾ ಅದರ ನಂತರದಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಪಿತೂರಿ ನಡೆಸುತ್ತಿದೆ. ಆದರೆ ಬೆಂಗಳೂರು ಹಾಗೂ ರಾಜ್ಯಾದ್ಯಂತ ಆಮ್ ಆದ್ಮಿ ಪಾರ್ಟಿಗೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿದ್ದು, ಯಾವುದೇ ಸಮಯದಲ್ಲಿ ಬಿಬಿಎಂಪಿ ಹಾಗೂ ವಿಧಾನಸಭೆ ಚುನಾವಣೆ ನಡೆದರೂ ನಮಗೆ ಬಹುಮತ ದೊರೆಯಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.