ಬೆಂಗಳೂರು, ಅಕ್ಟೋಬರ್ 17,2022: ಶ್ರೀ ವಿ. ಸೋಮಣ್ಣರವರು ಕರ್ನಾಟಕ ರಾಜಕಾರಣದಲ್ಲಿ ಕಳೆದ ನಾಲ್ಕು ದಶಕಗಳಿಂದ ತಮ್ಮದೇ ಆದ ಮಾದರಿಯನ್ನು ಮೂಡಿಸಿದವರು. ಶ್ರೀ ವಿ. ಸೋಮಣ್ಣನವರ ವ್ಯಕ್ತಿತ್ವ, ರಾಜಕೀಯದ ಅನುಭವ, ಸೇವಾ ಮನೋಭಾವ, ಸಂಘಟನಾ ಸಾಮರ್ಥ್ಯ ಕುರಿತು ದಾಖಲಿಸಬೇಕೆಂಬ ಸದುದ್ದೇಶದಿಂದ ಅವರ ಹಿತೈಷಿಗಳು, ಹತ್ತಿರದಿಂದ ಬಲ್ಲ ನಾಡಿನ ವಿವಿಧ ಕ್ಷೇತ್ರಗಳ ಗಣ್ಯಮಾನ್ಯರು ಬರೆದಿರುವ ಲೇಖನಗಳನ್ನು ಒಳಗೊಂಡಿರುವ, ಶ್ರೀ ವಿ. ಸೋಮಣ್ಣ ಪ್ರತಿಷ್ಠಾನದ ವತಿಯಿಂದ ಪ್ರಕಾಶನಗೊಂಡಿರುವ 'ವಿಜಯ ಪಥ' ಗ್ರಂಥದ ಲೋಕಾರ್ಪಣೆ ಸಮಾರಂಭ ಇದೇ ಅಕ್ಟೋಬರ್ 20 ರಂದು ಗುರುವಾರ ಸಂಜೆ 5ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಪೂಜ್ಯ ಜಗದ್ಗುರು 'ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ (ಶ್ರೀ ಜಗದ್ಗುರು ವೀರಸಿಂಹಾಸನ ಸಂಸ್ಥಾನಮಠ ಸುತ್ತೂರು ಶ್ರೀಕ್ಷೇತ್ರ) ಹಾಗೂ ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಯವರ (ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠ ಶ್ರೀ ಆದಿಚುಂಚನಗಿರಿ ಶ್ರೀಕ್ಷೇತ್ರ) ದಿವ್ಯ ಸಾನ್ನಿಧ್ಯದಲ್ಲಿ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಗಣಿ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿಗಳಾದ ಬಸವರಾಜ ಎಸ್. ಬೊಮ್ಮಾಯಿ ಅವರು ‘ವಿಜಯ ಪಥ’ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಇನ್ನು ಶಾಸಕರು ಮತ್ತು ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ, ಕಂದಾಯ ಸಚಿವ ಆರ್ ಅಶೋಕ್, ಶ್ರೀ.ವಿ.ಸೋಮಣ್ಣ ಪ್ರತಿಷ್ಠಾನ ಶೈಲಜ ಸೋಮಣ್ಣ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಖ್ಯಾತ ವಿಮರ್ಶಕರಾದ ಡಾ. ಬೈರಮಂಗಲ ರಾಮೇಗೌಡರು ‘ವಿಜಯ ಪಥ’ಗ್ರಂಥದ ಕುರಿತು ಮಾತನಾಡಲಿದ್ದಾರೆ.
ಇನ್ನು ವಿ. ಸೋಮಣ್ಣ ಅವರು ಈಗಿನ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮರಳವಾಡಿ ಗ್ರಾಮದ ಕೃಷಿ ಕುಟುಂಬದ ಶ್ರೀಮತಿ ಶ್ರೀ ವೀರಣ್ಣರವರ ಪುತ್ರರಾಗಿ ಜನಿಸಿ, ಸ್ವಗ್ರಾಮದಲ್ಲಿ ಪ್ರಾಥಮಿಕ, ಕನಕಪುರದಲ್ಲಿ ಪ್ರೌಢ ಶಿಕ್ಷಣ, ಬೆಂಗಳೂರಿನಲ್ಲಿ ಪದವಿ ಮುಗಿಸಿ ತಮ್ಮ ವೃತ್ತಿ ಬದುಕಿನೊಂದಿಗೆ ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಯಾವುದೇ ರಾಜಕೀಯ ಪ್ರಭಾವ ಇಲ್ಲದೆ ಸ್ವಸಾಮರ್ಥ್ಯ ಮತ್ತು ಶ್ರಮದಿಂದಲೇ ಬೆಳೆಯುವುದರ ಮೂಲಕ ಇಂದು ಜನನಾಯಕರಾಗಿದ್ದಾರೆ. ಸೇವೆ, ಜನಪರವಾದ ಕಾಳಜಿ, ಸಾಧಿಸುವ ಛಲ, ತಮ್ಮ ಸಂಘಟನಾ ಚಾತುರ್ಯ ರಾಜಧಾನಿ ಬೆಂಗಳೂರು ನಗರ ಪಾಲಿಕೆ ಸದಸ್ಯರಾ ರಾಜಕೀಯವಾಗಿ ಗುರುತಿಸಿಕೊಂಡು, ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಜಿ.ಹೆಚ್ ಪಟೇಲ್ , ಶ್ರೀ ಬಿ.ಎಸ್.ಯಡಿಯೂರಪ್ಪ, ಶ್ರೀ ಡಿ.ವಿ.ಸದಾನಂದಗೌಡ, ಶ್ರೀ ಜಗದೀಶ್ ಶೆಟ್ಟರ್ ಅವರುಗಳ ಸಂಪುಟಗಳಲ್ಲಿ ಸಚಿವರಾಗಿ, ಪ್ರಸ್ತುತ ಶ್ರೀ ಬಸವರಾಜ ಬೊಮ್ಮಾಯಿರವರ ಸಂಘಟದಲ್ಲಿ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾಗಿದ್ದಾರೆ. ಯಾವುದೇ ಇಲಾಖೆಯ ಸಚಿವರಾಗಿದ್ದರೂ ತಮ್ಮ ಕಾರ್ಯವೈಖರಿಯ ಮೂಲಕ ಆ ಇಲಾಖೆಗಳಿಗೆ ಗೌರವ ತಂದಿದ್ದಾರೆ, ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರುಗಳಿಗೆ ತಲುಪಿಸುವಲ್ಲಿ ಸಫಲರಾಗಿದ್ದಾರೆ.