ಬೆಂಗಳೂರು ಸಮುದ್ರ ಮಟ್ಟದಿಂದ ಸುಮಾರು ಮೂರು ಸಾವಿರ ಅಡಿಗಳಷ್ಟು ಎತ್ತರವಿದೆ. ಹಾಗಾಗಿ ಎಂತಹಾ ಮಳೆ ಬಂದರೂ ಮಳೆ ನೀರನ್ನು ತಡೆಯದಿದ್ದರೆ ನೀರು ಸಹಜವಾಗಿ ವೃಷಭಾವತಿ, ಕೋರಮಂಗಲ -ಚಲಘಟ್ಟ ಹಾಗೂ ಹೆಬ್ಬಾಳದ ಕಣಿವೆಗಳ ಮುಖಾಂತರ ಹರಿದು ಕೆಳಗಿಳಿದು ಹೋಗುತ್ತಿತ್ತು. ಹಿರಿಯ ಕೆಂಪೇಗೌಡರು 1537 ರಲ್ಲಿ ಬೆಂಗಳೂರು ನಿರ್ಮಾಣಕ್ಕೆ ಬುನಾದಿ ಹಾಕಿದಾಗ ಈ ವಿಷಯವನ್ನು ಬಹಳ ಚೆನ್ನಾಗಿ ಅರ್ಥೈಸಿಕೊಂಡಿದ್ದರು, ಹಾಗಾಗಿ ಅಂದಿನ ಎತ್ತರದ ಸ್ಥಳದಲ್ಲಿ ಧರ್ಮಾಂಬುಧಿ ಎನ್ನುವ ಕೆರೆಯನ್ನು ನಿರ್ಮಿಸಿದರು. ನಂತರ ಬಂದ ಇಮ್ಮಡಿ ಕೆಂಪೇಗೌಡ ಮತ್ತು ಮುಮ್ಮಡಿ ಕೆಂಪೇಗೌಡರು ನೂರಾರು ಕೆರೆಗಳನ್ನು ಮಳೆಯ ನೀರನ್ನು ತಡೆಹಿಡಿಯಲು ವಿವಿಧ ಮಟ್ಟದಲ್ಲಿ ಕೆರೆಗಳನ್ನು ನಿರ್ಮಿಸಿ ಅವುಗಳ ನಡುವೆ ರಾಜಕಾಲುವೆಗಳನ್ನು ನಿರ್ಮಿಸಿದರು.
ಹೀಗೇ ಊಹಿಸಿ…ಬೆಂಗಳೂರಿನಲ್ಲಿ ಈಗ ಬರುತ್ತಿರುವ ಮಳೆ ಇಮ್ಮಡಿ ಕೆಂಪೇಗೌಡರ ಕಾಲದಲ್ಲಿ ಬಂದಿದ್ದರೆ ಹೇಗಿರುತ್ತಿತ್ತು ಅಂತಾ. ಚಿಕ್ಕಪೇಟೆ, ದೊಡ್ಡಪೇಟೆ ಹತ್ತಿರದ ಧರ್ಮಾಂಬುಧಿ ಕೆರೆ ತುಂಬಿಕೊಂಡು ಹೆಚ್ಚುವರಿ ನೀರು ರಾಜಕಾಲುವೆ ಮುಖಾಂತರ ದೂರದ ಕಾರಂಜಿ ಕೆರೆ, ಕೆಂಪಾಂಬುಧಿ, ಸಂಪಂಗಿ ಕೆರೆ ಮತ್ತು ಬೆಳ್ಳಂದೂರು ಕೆರೆಗೆ ಹರಿದು ಹೋಗುತ್ತಿತ್ತು. ಆ ಕೆರೆಗಳೂ ತುಂಬಿಕೊಂಡು ನಂತರ ಹೆಚ್ಚುವರಿ ನೀರು ರಾಜಕಾಲುವೆ ಮುಖಾಂತರ ದೊಮ್ಮಲೂರು ಕೆರೆಗೆ ಹೋಗುತ್ತಿತ್ತು. ಹೀಗೆ ಕೋರಮಂಗಲದ, ಚಲ್ಲಘಟ್ಟದ, ಹೆಬ್ಬಾಳ ಮತ್ತು ವೃಷಭಾವತಿ ಕಣಿವೆಯ ಹಲವಾರು ಕೆರೆಗಳು ತುಂಬಿಕೊಂಡು ಹಬ್ಬದ ವಾತಾವರಣ ಸೃಷ್ಟಿಯಾಗಿ ಆಯಾ ಕೆರೆಗಳ ದೇವಿ ದೇವತೆಗಳ ಜಾತ್ರೆ, ತೆಪ್ಪೋತ್ಸವ ನಡೆಯುತ್ತಿತ್ತು. ರೈತರು, ಮೀನುಗಾರರು, ಅಗಸರು, ಅಂಬಿಗರು ಪ್ರಕೃತಿಯ ಈ ಸಮೃದ್ಧ ವರದಾನಕ್ಕೆ, ವರುಣನ ಕೃಪೆಗೆ ಶಿರಸಾವಹಿಸಿ ವಂದಿಸುತ್ತಿದ್ದರು. ಊರಿನ ಹಿರಿಯರು, ನೀರುಗಂಟಿಗಳು ಈಗ ತುಂಬಿರುವ ಕೆರೆಯ ನೀರನ್ನು ಕಿರುಕಾಲುವೆಗಳ ಮುಖಾಂತರ ಜನವಸತಿ ಪ್ರದೇಶಗಳಿಗೆ ನಿಯಮಿತವಾಗಿ ಸೇರಿಸುವುದರ, ಬಳಸುವುದರ ಬಗ್ಗೆ ಚರ್ಚೆ ನಡೆಸುತ್ತಿದ್ದರು.
ಈಗ ವಾಸ್ತವಕ್ಕೆ ಬರೋಣ. ಇದೇ ಮಳೆಗೆ ಈಗ ಅರ್ಧ ಬೆಂಗಳೂರು ಜಲಾವೃತಗೊಂಡಿದೆ. ಈ ಎರಡೂ ಚಿತ್ರಗಳಲ್ಲಿ ಎಷ್ಟು ವ್ಯತ್ಯಾಸವಿದೆಯಲ್ಲವೇ… ಏಕೆ ಹೀಗೆ?
ಯಾಕೆಂದರೆ ಅಂದು ಸಮೃದ್ಧವಾದ ಧರ್ಮಾಂಬುಧಿ ಕೆರೆ ಈಗ ಮೆಜೆಸ್ಟಿಕ್ ಬಸ್ ನಿಲ್ದಾಣವಾಗಿದೆ, ಸಂಪಂಗಿ ಕೆರೆ ಈಗ ಸ್ಟೇಡಿಯಂ ಆಗಿದೆ, ಚಲ್ಲಘಟ್ಟದ ಕೆರೆ ಈಗ ಗಾಲ್ಫ್ ಕೋರ್ಸ್ ಆಗಿ ರೂಪಾಂತರಗೊಂಡಿದೆ. ರಾಜಕಾಲುವೆಗಳಿಗೆ ಕಸಕಡ್ಡಿಗಳನ್ನು ತುಂಬಿ ಕೆರೆಗಳ ನಡುವಿನ ಸಂಪರ್ಕವನ್ನು ಕಡಿದು ಹಾಕಲಾಗಿದೆ ಮತ್ತು ಅವುಗಳ ಮೇಲೆ ಅಕ್ರಮ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಪರಿಸ್ಥಿತಿ ಹೀಗಿರುವಾಗ ಮತ್ತೆ ಆಕಾಶದಿಂದ ಧರೆಗಿಳಿದ ಗಂಗೆ ಎಲ್ಲಿ ಹರಿಯಬೇಕು? ಇದು ನಮಗೆ ತಟ್ಟಿದ ಶಾಪ ಎಂದು ವರುಣನನ್ನೇ ಶಪಿಸುತ್ತಾರೆ.
ವಿಜಯನಗರದ ಅರಸರ ಮಾದರಿಯನ್ನು ಅನುಸರಿಸಿ ಕೆಂಪೇಗೌಡರ ಮೂರು ತಲೆಮಾರುಗಳು ನಿರ್ಮಿಸಿದ ಈ ಅದ್ಭುತವಾದ ನಗರಿ ಹೀಗೆ ಜಲಾವೃತವಾಗಲು ಕಾರಣವೇನು? ಅವೈಜ್ಞಾನಿಕವಾಗಿ ಅವ್ಯಾಹತವಾಗಿ ನಡೆಯುತ್ತಿರುವ ನಗರ ನಿರ್ಮಾಣವೇ? ಭ್ರಷ್ಟಾಚಾರದ ಗೂಡಾಗಿರುವ ಸರ್ಕಾರಗಳೇ? ದುರಾಸೆಯ ಬಿಲ್ಡರುಗಳೇ? ಬೆಂಗಳೂರಿಗೆ ಆಕರ್ಷಿತರಾಗಿ ಹಿಂಡು ಗಟ್ಟಲೇ ಆಗಮಿಸುತ್ತಿರುವ ಜನಸಾಗರವೇ? ನಿಯಂತ್ರಣವಿಲ್ಲದೆ ದಶ ದಿಕ್ಕುಗಳಲ್ಲೂ ಹಿಗ್ಗುತ್ತಿರುವ ನಗರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಲಾರದ ಸರ್ಕಾರದ ಅಸಮರ್ಥತೆಯೇ?
ಇದು ಎಲ್ಲರೂ ಸಕ್ರೀಯವಾಗಿ ಆಲೋಚಿಸಬೇಕಾಗಿರುವ ವಿಷಯ.