1969 ಸೆಪ್ಟೆಂಬರ್ 24 ರಂದು ಕೇಂದ್ರ ಸರಕಾರ ಚಾಲನೆ ನೀಡಿದ ರಾಷ್ಟ್ರೀಯ ಸೇವಾ ಯೋಜನೆಗೆ ಈಗ 53 ರ ಹರೆಯ.
1974 ರಲ್ಲಿ ಮೈಸೂರು ವಿಶ್ವ ವಿದ್ಯಾಲಯದ ಎನ್. ಎಸ್ ಎಸ್. ವಿಭಾಗ ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಅದನ್ನು ಉದ್ಘಾಟಿಸಿ ಮಾತನಾಡಿದ ನೆರೆಯ ಕೇರಳ ವಿಶ್ವ ವಿದ್ಯಾಲಯದ ಕುಲಪತಿಗಳು ಉದ್ಘಾಟನೆ ಮಾಡಿ ನುಡಿದ ಮಾತುಗಳನ್ನು ವರದಿ ಮಾಡಿದ ಪತ್ರಿಕೆಗಳು ' ಬೆಳ್ಳಿ ಕಂಡರೂ ದಿಕ್ಕು ಕಾಣದ ಎನ್. ಎಸ್. ಎಸ್.' ಅನ್ನುವ ಶೀರ್ಷಿಕೆಯಲ್ಲಿ ಪ್ರಕಟಿಸಿದಾಗ ಕೆಲವರ ಹುಬ್ಬೇರಿತು !
ಈಗ ಅರ್ಧ ಶತಮಾನವನ್ನು ದಾಟಿ ಮುನ್ನುಗ್ಗುತ್ತಿರುವ ಸಂದರ್ಭದಲ್ಲೂ ಈ ಯೋಜನೆ ತನ್ನ ಸಾಮರ್ಥ್ಯದ ಹೊರತಾಗಿಯೂ, ಸಮಸ್ಯೆ ಮತ್ತು ಇತಿ ಮಿತಿ ಗಳ ಸುಳಿಯಲ್ಲೇ ಸಿಲುಕಿದೆ.
ಎಲ್ಲಕ್ಕಿಂತ ಮೊದಲು ಈ ಯೋಜನೆಯಲ್ಲಿನ ಆಂತರಿಕ ಪರಿಕಲ್ಪನಾತ್ಮಕ ದ್ವಂದ್ವ ಗಳನ್ನು ಅರ್ಥ ಮಾಡಿಕೊಂಡು ಹೆಜ್ಜೆ ಇಡಬೇಕಾಗಿದೆ. ಮೊದಲ ದ್ವಂದ್ವ ಅಂದರೆ ಸ್ವಯಂ ಪ್ರೇರಣೆಯ ಈ ಸೇವಾ ಕಾರ್ಯಕ್ರಮವನ್ನು ಸರಕಾರ ಅಧಿಕಾರಶಾಹಿ ನಿರ್ದಿಷ್ಟ ಗುರಿ, ಆಯ- ವ್ಯಯ, ಮತ್ತು ನಿಯಂತ್ರಣ ಗಳ ಮೂಲಕ ಕಡಿವಾಣ ಹಾಕುವುದು. ಸ್ವಯಂ ಆಯ್ಕೆಯ ಈ ಯೋಜನೆಯನ್ನು ಕಡ್ಡಾಯವಾಗಿ ವಿದ್ಯಾರ್ಥಿಗಳ ಮೇಲೆ ಹೇರುವುದು.
ಎರಡನೆಯದಾಗಿ ಪಠ್ಯಕ್ಕೆ, ಪರೀಕ್ಷೆಗೆ, ತರಗತಿಗೆ ಹಾಗೂ ತರಗತಿಯ ವೇಳಾಪಟ್ಟಿಗೆ ಹೊರತಾಗಿರ ಬೇಕಾಗಿರುವ ಯೋಜನೆಯನ್ನು ಮತ್ತೆ ಸಿಲಬಸ್ ಗೇ ತುರುಕಿ ಪ್ರಶ್ನ ಪತ್ರಿಕೆ ರಚಿಸುವುದು. ಅಂಕಗಳನ್ನು ನೀಡುವುದು.
ಎನ್. ಎಸ್.ಎಸ್. ಅಂಕ ಶಿಕ್ಷಣವಲ್ಲದ ಅನುಭವ ಕಲಿಕಾ ಪದ್ಧತಿ. ಇಲ್ಲಿ ಮಾಡಿ ಕಲಿ, ನೋಡಿ ಕಲಿ ಗೇ ಪ್ರಾಧಾನ್ಯ. ಇದನ್ನು ಗಮನಿಸಬೇಕು.
ಮೂರನೆಯದಾಗಿ ಈ ಯೋಜನೆ ಒಂದು ಶೈಕ್ಷಣಿಕ ಪ್ರಯೋಗವಾಗಿದೆ ಹಾಗೂ ಶಾಲಾ ಕಾಲೇಜು ಗಳೇ ಯೋಜಿಸಿ ತನ್ನ ಅಧ್ಯಾಪಕರ ಮೂಲಕವೇ ಶೈಕ್ಷಣಿಕ ಕ್ಯಾಲೆಂಡರ್ ಗೆ ಅನುಗುಣವಾಗಿ ಅನುಷ್ಟಾನ ಗೊಳಿಸಬೇಕಾಗಿದೆ. ನೀತಿ ನಿರೂಪಣೆ,ಸಮನ್ವಯ, ಆಡಳಿತ ನಿಯಂತ್ರಣದ ದೃಷ್ಟಿ ಯಿಂದಲೂ ಶಿಕ್ಷಣ ಇಲಾಖೆಯಲ್ಲಿ ಇರಬೇಕಾದ ಈ ಯೋಜನೆಯನ್ನು ಯುವ ಕಾರ್ಯ ಮತ್ತು ಕ್ರೀಡಾ ಇಲಾಖೆಯ ಸುಪರ್ದಿಗೆ ಕೊಟ್ಟಿರುವುದು - ಇತ್ಯಾದಿ ಅಂಶಗಳನ್ನು ಇದರ ಹೊಣೆ ಹೊತ್ತ ಎಲ್ಲರೂ ಗಮನಿಸ ಬೇಕಿದೆ.
ಹಣಕಾಸು: ಎನ್ನೆಸ್ಸೆಸ್ ನಲ್ಲಿ ವಿಶೇಷ ಶಿಬಿರಗಳಿಗೆ ಮಹತ್ವ ವಿದೆ. ಅರವತ್ತೊಂಭತ್ತರಲ್ಲಿ ದಿನ ಒಂದಕ್ಕೆ ಶಿಬಿರಾರ್ಥಿಗಳ ಊಟ, ಉಪಹಾರ, ಪ್ರಯಾಣ ಮತ್ತು ಶಿಬಿರದ ವ್ಯವಸ್ಥೆಯ ಖರ್ಚೂ ಸೇರಿ ನೀಡುತ್ತಿದ್ದ ತಲಾ ಅರು ರೂ. ಗಳು ನೂರು ರೂ.ತಲುಪಲು 52 ವರ್ಷ ಕಾಯಬೇಕಾಯಿತು. ಈಗಲೂ ಶಿಬಿರ ಆಯೋಜಿಸಲು ಗ್ರಾಮಸ್ಥರ ಉದಾರತೆಯನ್ನು ಅವಲಂಬಿಸಬೇಕಾಗಿದೆ.
ಶಿಬಿರವನ್ನು ಹೊರತು ಪಡಿಸಿ ಸ್ವಯಂ ಸೇವಕರನ್ನು ವಾರ್ಷಿಕ 120 ಘಂಟೆ ಸಮುದಾಯದ ಸೇವೆಯಲ್ಲಿ ತೊಡಗಿಸಲು ಕೊಡುವ ಅನುದಾನ ಘಂಟೆಗೆ ಎರಡು ರೂ. ನೂರು ವಿದ್ಯಾರ್ಥಿ ಗಳನ್ನು ಎನ್ನೆಸ್ಸೆಸ್ ನಲ್ಲಿ ತೊಡಗಿಸಿ ಕೊಂಡು ಬೋಧನೆಯ ಜೊತೆ ಪ್ರಭಾರಿ ಕಾರ್ಯ ನಿರ್ವಹಿಸುವ ಉಪನ್ಯಾಸಕರಿಗೆ ಮಾಸಿಕ ಆರು ನೂರು ಭತ್ಯ. ಹೀಗಾಗಿ ಎನ್ನೆಸ್ಸೆಸ್ ಗೆ ಕೊರತೆ, ಜೀವನ ವಿಧಾನವೇ ಆಗಿ ಹೋಗಿದೆ.
ರಾಜ್ಯದಲ್ಲಿ ಮೂರು ಸಾವಿರಕ್ಕೂ ಅಧಿಕ ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿಗಳು ಇದ್ದಾರೆ. ಇವರು ಮೂರು. ವರ್ಷಕೊಮ್ಮೆ ಬದಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಇವರಿಗೆ ಅಗತ್ಯವಾದ ತರಬೇತಿ ಕೊಡಲು ಸಾಧ್ಯವಾಗುತ್ತಿಲ್ಲ. ನೂತನ ಶಿಕ್ಷಣ ನೀತಿಯಲ್ಲಿ ಒಂದು ಸೆಮಿಸ್ಟರ್ ಗೆ ತತ್ಸಮಾನ 'ಸಮುದಾಯ ಸೇವೆ ' ಶೈಕ್ಷಣಿಕ ಅಗತ್ಯ ಎಂದು ಪರಿಭಾವಿಸಿದ್ದರೂ, ಎನ್ನೆಸ್ಸೆಸ್ ಇದಕ್ಕೆ ತಕ್ಕ ಸಿದ್ಧತೆ ಮಾಡಿ ಕೊಂಡಂತೆ ಕಾಣುವುದಿಲ್ಲ.
ವಿದ್ಯಾರ್ಥಿಗಳು ಎನ್ನೆಸ್ಸೆಸ್ ಸೇರಲು ಉತ್ಸುಕರಾಗಿದ್ದರೂ , ಅಧ್ಯಾಪಕರು ಹೊಣೆ ಹೋರಲು ಮುಂದಾಗದಿರುವುದು. ಇದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಿಸಿದೆ. ಸೆಮಿಸ್ಟರ್ ಪದ್ದತಿ ಯಿಂದಾಗಿ ಯಾವುದೇ ಪಠ್ಯ ಪೂರಕ ಚಟುವಟಿಕೆಗಳನ್ನೂ ನಡೆಸುವುದು ಕಷ್ಟ ಸಾಧ್ಯವಾಗಿದೆ.
ಇಷ್ಟೆಲ್ಲ ಸಮಸ್ಯೆ ಗಳ ನಡುವೆಯೂ ಎನ್ನೆಸ್ಸೆಸ್ ನಲ್ಲಿ ಸ್ವಯಂ ಸೇವಕರ ಕೊಡುಗೆಯನ್ನು ಅಲ್ಲಗಳೆಯುವಂತಿಲ್ಲ. ಅವರು ತಮಗೂ, ತಮ್ಮ ಸಂಸ್ಥೆಗೂ ಸಮುದಾಯದ ಮಾನ್ಯತೆಯನ್ನೂ ಗಳಿಸಿ ಕೊಂಡಿದ್ದಾರೆ. ಶಿಕ್ಷಣದ ಉದ್ದೇಶಗಳಲ್ಲಿ ವ್ಯಕ್ತಿತ್ವ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಯೇ ಪ್ರಧಾನವಾಗಿದ್ದು ಎನ್ನೆಸ್ಸೆಸ್ ಸಹ ತನ್ನ ಪಾಲಿನ ಕೊಡುಗೆ ನೀಡುತ್ತಿದೆ ಅನ್ನುವುದು ಸಮಾಧಾನದ ಸಂಗತಿ.
ಡಾ. ಹೆಚ್ .ಎಸ್. ಸುರೇಶ್. ಎನ್ನೆಸ್ಸೆಸ್ ನಿವೃತ್ತ ರಾಜ್ಯ ಸಲಹೆಗಾರ.
9448027400