ಬೆಂಗಳೂರು, ಸೆಪ್ಟಂಬರ್ 18:ಪಠ್ಯಕ್ಕಿಂತಕೂ ಅನುಭವದ ಮೂಲಕ ಕಲಿಯುವುದು ಸಾಕಷ್ಟಿದೆ. ಸೃಷ್ಟಿಕರ್ತನನ್ನು ಹೊರತುಪಡಿಸಿ ನೋವನ್ನು ಕಡಿಮೆ ಮಾಡುವ ಶಕ್ತಿ ಇರುವುದು ವೈದ್ಯರಿಗೆ ಮಾತ್ರ. ಆದ್ದರಿಂದ ವೈದ್ಯರಿಗೆ ಮಾನವೀಯ ಗುಣ ಬಹಳ ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಆಕಾಶ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಂಡ್ ರಿಸರ್ಚ್ ಸೆಂಟರ್ನ ವತಿಯಿಂದ ಆಯೋಜಿಸಿದ್ದ 2016-17ರ ಪ್ರಥಮ ಎಂಬಿಬಿಎಸ್ ಬ್ಯಾಚ್ನ ಮೊದಲನೆ ಘಟಿಕೋತ್ಸವ ಸಮಾರಂಭ - 2022ರಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಯಾವುದನ್ನಾದರೂ ಪ್ರಥಮ ಬಾರಿಗೆ ಮಾಡಿದಾಗ ಅದು ಎಂದೆಂದಿಗೂ ನೆನಪಿನಲ್ಲಿ ಇರುತ್ತದೆ ಎಂದು ನುಡಿದ ಮುಖ್ಯಮಂತ್ರಿಗಳು 5 ವರ್ಷಗಳ ಕಾಲ ಮೆಡಿಕಲ್ ಓದಿದ ಮೇಲೆ ನಮ್ಮ ಭವಿಷ್ಯ ನಮಗೆ ಗೊತ್ತಿರಬೇಕು. ಒಮ್ಮೆ ವಿದ್ಯಾರ್ಥಿ ಆದವನು ಜೀವನ ಪರ್ಯಂತ ವಿದ್ಯಾರ್ಥಿಯಾಗೇ ಇರುತ್ತಾನೆ. ಇವತ್ತು ಸರ್ಟಿಫಿಕೇಟ್ ತೆಗೆದುಕೊಂಡ ಕೂಡಲೇ ಎಲ್ಲವೂ ಮುಗಿಯಿತು ಎಂದಲ್ಲ. ಕಾಲೇಜಿನಲ್ಲಿ ಪಠ್ಯ ಓದಿ ಪರೀಕ್ಷೆ ಬರೆಯುತ್ತೇವೆ. ಆದರೆ ಜೀವನದಲ್ಲಿ ಪರೀಕ್ಷೆ ಗಳ ಮೂಲಕ ನಾವು ಕಲಿಯುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವೈದ್ಯರಾಗಿ ನಿಮಗೆ ಸಹಾನುಭೂತಿ ಇರಬೇಕು. ಯಾಕೆಂದರೆ ಎಷ್ಟೋ ಜನ ಬಡವರು ಚಿಕಿತ್ಸೆಗೆಂದು ಬರುತ್ತಾರೆ. ಅವರೊಂದಿಗೆ ಬೆರೆತು ಅವರ ಕಾಯಿಲೆಗೆ ಚಿಕಿತ್ಸೆ ನೀಡಬೇಕು. ಆಗಲೇ ನೀವು ಕಲಿತ ವಿದ್ಯೆ ನಿಮ್ಮ ಕೈ ಹಿಡಿಯುತ್ತದೆ ಎಂದು ತಿಳಿಸಿದರು.
*ವೈದ್ಯಕೀಯ ವಿದ್ಯಾರ್ಥಿಗಳು ಕೋವಿಡ್ ಸಮಯದಲ್ಲಿ ಕೈ ಹಿಡಿದರು*:
ಕೋವಿಡ್ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಚಲ ನಿರ್ಧಾರದಿಂದ ಭಾರತ ಇಂದು ಆಪತ್ತನ್ನು ಮೀರಿ ನಿಂತಿದೆ. 130 ಕೋಟಿ ಜನಸಂಖ್ಯೆಯ ರಾಷ್ಟ್ರಕ್ಕೆ ಕೋವಿಡ್ ಎದುರಿಸೋದು ಸುಲಭವಲ್ಲ ಎಂದು ಇಡೀ ಪ್ರಪಂಚ ಮಾತನಾಡಿಕೊಳ್ಳುತ್ತಿದ್ದಾಗ ನಮ್ಮ ವೈದ್ಯರು ಪ್ರಾಣದ ಹಂಗು ತೊರೆದು ಹೋರಾಡಿ ಜನರ ಪ್ರಾಣ ಉಳಿಸಿದರು. ಅಲ್ಲದೇ ನಾವೇ ವ್ಯಾಕ್ಸಿನೇಷನ್ ಉತ್ಪಾದನೆ ಮಾಡಿ 200 ಕೋಟಿಗೂ ಹೆಚ್ಚು ವ್ಯಾಕ್ಸಿನೇಷನ್ ಕೊಡಲು ಸಾಧ್ಯವಾಯ್ತು. ಈ ಪ್ರಕ್ರಿಯೆಯಲ್ಲಿ ಎಂಬಿಬಿಎಸ್ ಕಲಿಯುತ್ತಿದ್ದ ವಿದ್ಯಾರ್ಥಿಗಳೂ ಸೇವೆ ಸಲ್ಲಿಸಿ ದೇಶವನ್ನು ದೊಡ್ಡ ಪಿಡುಗಿನಿಂದ ಉಳಿಸಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೈದ್ಯರ ಗುಣಗಾನ ಮಾಡಿದರು.
ಕೋವಿಡ್ ನ ಅತ್ಯಂತ ಕಠಿಣ ಸಮಯದಲ್ಲಿ ಮುನಿರಾಜು ಅವರು ಆಕಾಶ್ ಆಸ್ಪತ್ರೆಯ ತಮ್ಮ 100% ನಷ್ಟು ಬೆಡ್ ಗಳನ್ನು ನೀಡಿ ಮಾನವೀಯತೆ ಮೆರೆದರು. ವಿದೇಶದಿಂದ ಬಂದವರಿಗೆ ಕಲ್ಪಿಸಿದ ಸೌಲಭ್ಯಕ್ಕೆ ಸರ್ಕಾರ ನಿಮಗೆ ಧನ್ಯವಾದ ಅರ್ಪಿಸುತ್ತದೆ. ಮುನಿರಾಜು ಅವರ ಉದ್ದೇಶ ಮತ್ತು ತತ್ವ ಬಹಳ ಉನ್ನತ ಮಟ್ಟದ್ದು ಆಗಿದೆ. ಆದ್ದರಿಂದ ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಉಪಕುಲಪತಿಗಳಾದ ಎಂಕೆ ರಮೇಶ್, ಏಮ್ಸ್
ಕಾಲೇಜು ಚೇರ್ ಮೆನ್ ಮುನಿರಾಜು, ಪುಷ್ಪ ಮುನಿರಾಜು, ಡಾ ಶಿವಪ್ರಕಾಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.