ಅರವತ್ತು ವರ್ಷಗಳ ಹಿಂದೆ ಬೆಂಗಳೂರು ಇಷ್ಟು ದೊಡ್ಡದಾಗಿರಲಿಲ್ಲ. ಆಗ ಎರಡು ಬೆಂಗಳೂರು ಇತ್ತು. ಅತ್ತ ಕಡೆ ದಂಡು ಪ್ರದೇಶದ ಭಾಗ ಮತ್ತು ಇತ್ತ ಕಡೆ ನಗರ ಪ್ರದೇಶದ ಭಾಗ. ನಾವೆಲ್ಲ ನಗರದಲ್ಲಿ ಓಡಾಡುತ್ತಿದ್ದೆವೇ ಹೊರತು ದಂಡು ಪ್ರದೇಶದ ಕಡೆಗೆ ಹೋಗುತ್ತಿರಲಿಲ್ಲ.
Prof. G Venkatasubbaiahನಾನು ಹುಟ್ಟಿದ್ದು, ಬೆಳೆದಿದ್ದು ವಿದ್ಯಾಭ್ಯಾಸ ಮಾಡಿದ್ದೆಲ್ಲ ಮೈಸೂರಿನಲ್ಲಿ. 1940ರ ವೇಳೆಗೆ ಬೆಂಗಳೂರಿಗೆ ಬಂದೆ. ವಿಜಯಾ ಕಾಲೇಜಿನಲ್ಲಿ ಕೆಲಸ ಸಿಕ್ಕ ನಂತರ ಬೆಂಗಳೂರು ಕಾಯಂ ವಾಸಸ್ಥಳವಾಯಿತು.
ಬೆಂಗಳೂರಿಗೆ ಬಂದ ಹೊಸತರಲ್ಲಿ ವಾಸ ಮಾಡುತ್ತಿದ್ದದ್ದು ವಿಶ್ವೇಶ್ವರಪುರದಲ್ಲಿ. ಆಗ ವಿಶ್ವೇಶ್ವರಪುರ ಬೆಂಗಳೂರಿನ ಕೇಂದ್ರ ಪ್ರದೇಶವಾಗಿತ್ತು. ತುಂಬಾ ಸೊಗಸಾದ ಜಾಗವದು. ಈಗ ಅದನ್ನು ನೆನಪು ಮಾಡಿಕೊಳ್ಳುವುದಕ್ಕೆ ಆಗುವುದೇ ಇಲ್ಲ.
ವಿಶ್ವೇಶ್ವರಪುರದ ವೃತ್ತ ಇದೆ ನೋಡಿ, ಅಲ್ಲಿ ಸುಂದರವಾದ ಹುಲ್ಲುಗಾವಲಿತ್ತು. ಸಾಯಂಕಾಲದ ಹೊತ್ತು ಹೆಂಗಸರೆಲ್ಲ ತಮ್ಮ ಮಕ್ಕಳೊಂದಿಗೆ ಅಲ್ಲಿ ಬಂದು ಕುಳಿತುಕೊಳ್ಳುತ್ತಿದ್ದರು.
ವೈಶ್ಯ ಸಮುದಾಯದವರು ಹೆಚ್ಚಾಗಿದ್ದ ಪ್ರದೇಶವದು. ಈಗ ಅಲ್ಲಿ ವೈಶ್ಯರು ಇಲ್ಲವೇ ಇಲ್ಲ. ಜೈನ ಸಮುದಾಯದವರು ಸೇರಿಕೊಂಡಿದ್ದಾರೆ. ದೇವಸ್ಥಾನ ಕೂಡ ಕಟ್ಟಿಕೊಂಡಿದ್ದಾರೆ.
ಅಂದಿನ ದಿನಗಳಲ್ಲಿ ಬೆಂಗಳೂರು ಎಂದರೆ ಮಲ್ಲೇಶ್ವರ, ಮಾರ್ಕೆಟ್, ಶಂಕರಪುರ, ಚಾಮರಾಜಪೇಟೆ, ಬಸವನಗುಡಿ, ಹನುಮಂತನಗರ, ವಿಶ್ವೇಶ್ವರಪುರ... ಅಲ್ಲಿ ನಾಗಸಂದ್ರ ಅಂತ ಒಂದು ಹಳ್ಳಿ ಇತ್ತು... ಡಿಸ್ಟ್ರಿಕ್ಟ್ ಆಫೀಸ್ ಕಡೆಗೊಂದಿಷ್ಟು ಬೆಳೆದಿತ್ತು. ಇಷ್ಟೇ ಬೆಂಗಳೂರು ಇದ್ದಿದ್ದು.
ರಾಗಿ ಪೈರಿನ ಸಮೃದ್ಧಿ
ವಿಲ್ಸನ್ ಗಾರ್ಡನ್ ಅನ್ನುವುದು ಕೂಡ ಹೊಸದು. ಜಯನಗರವೂ ಹೊಸದು. ನಿಟ್ಟೂರು ಶ್ರೀನಿವಾಸರಾಯರ ಮನೆ ಇದೆ ನೋಡಿ, ಅಲ್ಲಿ ಸೌತ್ ಎಂಡ್ ರಸ್ತೆ ಇದ್ಯಲ್ಲ, ಅದು ನಿಜವಾಗಿಯೂ ಬೆಂಗಳೂರಿನ ಕೊನೆ ಆಗಿತ್ತು. ಅಲ್ಲಿಂದ ಆಚೆಗೆಲ್ಲ ರಾಗಿ ಹೊಲಗಳು. ರಾಗಿಗುಡ್ಡ ಬೇರೆ ಇದೆ ಅಲ್ಲಿ. ನಿಟ್ಟೂರು ಶ್ರೀನಿವಾಸರಾಯರ ಮನೆ ಎದುರು ನಿಂತುಕೊಂಡರೆ ರಾಗಿ ಪೈರು ಕಾಣುತ್ತಿತ್ತು.
ಆಮೇಲೆ ಜಯನಗರ ಅಂತ ದೊಡ್ಡ ಬಡಾವಣೆ ಆರಂಭಿಸಿದರು. ಸೊಗಸಾದ ಮುಖ್ಯರಸ್ತೆ– ಅಡ್ಡರಸ್ತೆಗಳನ್ನು ಮಾಡಿದರು. ಈಗ ಆ ಪ್ರದೇಶವೇ ನಗರದ ಕೇಂದ್ರವಾಗಿದೆ. ಆಗ ನಮಗೆ ಬೆಂಗಳೂರು ಇಷ್ಟೊಂದು ಬೆಳೆಯುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ.
ವಿಶ್ವೇಶ್ವರಪುರದಲ್ಲಿದ್ದಾಗ ವಾಯುವಿಹಾರಕ್ಕಾಗಿ ಲಾಲ್‌ಬಾಗ್‌ಗೆ ಹೋಗುತ್ತಿದ್ದೆ. ಲಾಲ್‌ಬಾಗ್‌ಗೆ ಒಂದು ಸುತ್ತು ಹಾಕಿ ಮನೆಗೆ ಬಂದರೆ ದೇಹಕ್ಕೆ ವ್ಯಾಯಾಮವಾಗಿ ಮನಸ್ಸು ಉಲ್ಲಸಿತವಾಗುತ್ತಿತ್ತು. ಅದಿಲ್ಲದೆ ಹೋದರೆ ಬಸವನಗುಡಿ ಗುಡ್ಡ ಇದ್ಯಲ್ಲ, ಅಲ್ಲಿಗೆ ಹೋಗ್ತಾ ಇದ್ದೆ. ಬಸವನಗುಡಿಯಲ್ಲಿನ ಬಸವನ ವಿಗ್ರಹ ನೋಡಿ ನಮಸ್ಕಾರ ಮಾಡಿ ಬರುತ್ತಿದ್ದೆ. ನರಹರಿರಾಯನ ಗುಡ್ಡದಲ್ಲಿಯೂ ಒಂದು ದೇವಸ್ಥಾನ ಇದೆ. ಅಲ್ಲಿಗೂ ಸುತ್ತಾಡಲು ಹೋಗುತ್ತಿದ್ದೆ.
ಮಾರ್ಕೆಟ್‌ನ ಬೆರಕೆ ಸೊಪ್ಪು
ತರಕಾರಿ ತೆಗೆದುಕೊಳ್ಳಬೇಕು ಎಂದರೆ ವಿಶ್ವೇಶ್ವರಪುರದಿಂದ ಮಾರ್ಕೆಟ್‌ಗೆ ಹೋಗಬೇಕಾಗಿತ್ತು. ಮಾರ್ಕೆಟ್‌ನಲ್ಲಿ ಒಂದು ಕಡೆ ಬೆರಕೆ ಸೊಪ್ಪು ಅಂತ ಮಾರುತ್ತಿದ್ರು. ಯಾವ್ಯಾವುದೋ ಸೊಪ್ಪುಗಳನ್ನು ಸೇರಿಸಿ ಕೂಡಿಸಿ ಗುಡ್ಡೆ ಮಾಡಿ ಇಟ್ಟಿರುತ್ತಿದ್ದರು. ಎರಡಾಣೆಗೆ ಒಂದು ಗುಡ್ಡೆ ಸಿಗುತ್ತಿತ್ತು. ಒಂದು ಗುಡ್ಡೆ ತಗೊಂಡ್ರೆ ಒಂದು ಸಣ್ಣ ಕುಟುಂಬಕ್ಕೆ ಸಾಕಾಗುವಷ್ಟು ಹುಳಿ ಮಾಡಬಹುದಿತ್ತು.
ಅದು ಬಿಟ್ಟರೆ ಗಾಂಧಿ ಬಜಾರ್‌ನಲ್ಲಿಯೂ ತರಕಾರಿ ಸಿಗುತ್ತಿತ್ತು. ಈ ಎರಡು ಜಾಗಗಳನ್ನು ಬಿಟ್ಟರೆ, ಈಗಿನ ಹಾಗೆ ಗಾಡಿಯಲ್ಲಿ ತುಂಬಿಕೊಂಡು ಬೀದಿ ಬೀದಿಗೆ ಬರುತ್ತಾರಲ್ಲಾ, ಹಾಗೆ ಯಾರೂ ಬರುತ್ತಿರಲಿಲ್ಲ.
ಆಗ ಹೋಟೆಲ್‌ಗಳ ಸಂಖ್ಯೆಯೂ ಕಡಿಮೆ ಇತ್ತು. ಹೋಟೆಲ್‌ಗೆ ಹೋಗಿ ತಿಂಡಿ ತಿನ್ನುವ ಪದ್ಧತಿ ಅಷ್ಟಾಗಿ ಇರಲಿಲ್ಲ. ಈಗ ಬೀದಿಗೊಂದು ಹೋಟೆಲ್ ಇದೆ. ವಿಶ್ವೇಶ್ವರಪುರದಿಂದ ಮಲ್ಲೇಶ್ವರಕ್ಕೆ ಸ್ನೇಹಿತರನ್ನು ನೋಡಲು ನಾನು ನಡೆದುಕೊಂಡು ಹೋಗುತ್ತಿದ್ದೆ. ಅಲ್ಲಿನ ನನ್ನ ಸ್ನೇಹಿತರೂ ಇಲ್ಲಿಗೆ ಬರುತ್ತಿದ್ದರು.
ಪರ್ವತವಾಣಿ ಅಂತ ನನ್ನ ಸ್ನೇಹಿತರಿದ್ದರು. ಆರ್. ಗುರುರಾಜಲು ಅವರೂ ಸ್ನೇಹಿತರಾಗಿದ್ದರು. ನಾವೆಲ್ಲ ಸೇರಿ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಮಾತನಾಡುತ್ತಾ ಕಾಲ ಕಳೆಯುತ್ತಿದ್ದೆವು. ವಿಶ್ವಾಸದ ಮಾತು, ಸಾಹಿತ್ಯದ ಚರ್ಚೆ, ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳನ್ನು ಮಾತನಾಡುತ್ತಿದ್ದೆವು. ಹೊಸದಾಗಿ ಬಂದ ಪುಸ್ತಕಗಳ ಬಗ್ಗೆ ಚರ್ಚಿಸುತ್ತಿದ್ದೆವು. ಆ ಚರ್ಚೆಯೇ ಒಳ್ಳೆಯ ವಿಮರ್ಶೆಯಾಗಿರುತ್ತಿತ್ತು.
ಆಗಿನ ಕಾಲದಲ್ಲಿ ಸಿನಿಮಾ ನೋಡುವುದು ಒಂದು ಹುಚ್ಚು. ‘ಒಪೆರಾ’ದಲ್ಲಿ ಇಂಗ್ಲಿಷ್ ಚಿತ್ರಗಳು ಬರುತ್ತಿದ್ದವು. ಅದನ್ನು ನೋಡಲು ಶನಿವಾರ, ಭಾನುವಾರ ಸ್ನೇಹಿತರ ಜೊತೆಗೆ ಹೋಗುತ್ತಿದ್ದೆ.
ಡಿವಿಜಿ ಅವರಿಂದ ಭಗವದ್ಗೀತೆ ಪಾಠ
ಬಸವನಗುಡಿ ಪೊಲೀಸ್ ಸ್ಟೇಷನ್ ವೃತ್ತದ ಸನಿಹ ಡಿ.ವಿ.ಗುಂಡಪ್ಪನವರು ಒಂದು ಬಾಡಿಗೆ ಮನೆಯಲ್ಲಿ ‘ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ’ ಆರಂಭಿಸಿದ್ದರು. ಅಲ್ಲಿ ನಿತ್ಯ ಸಂಜೆ ಯಾವುದಾದರೂ ವಿಚಾರ ಇಟ್ಟುಕೊಂಡು ಚರ್ಚೆ ಮಾಡುತ್ತಿದ್ದರು.
ಅಲ್ಲಿ ಭಗವದ್ಗೀತೆಯನ್ನು ಮೊದಲಿನಿಂದಲೂ ಕೊನೆಯವರೆಗೆ ಎರಡು ಸಲ ಪಾಠ ಮಾಡಿದ್ದರು. ಸಾಯಂಕಾಲ ಆರರಿಂದ ಏಳೂವರೆ ತನಕ ಭಗವದ್ಗೀತೆ ಶ್ಲೋಕ ಓದಿ ಅರ್ಥ ವ್ಯಾಖ್ಯಾನ ಮಾಡುತ್ತಿದ್ದರು. ನಾವೆಲ್ಲ ಅವರ ಮಾತನ್ನು ಕೇಳಲಿಕ್ಕೆ ಹೋಗುತ್ತಿದ್ದೆವು.
ಅವರು ಪಾಠ ಮಾಡಿದ್ದನ್ನೆಲ್ಲ ಅವರ ಶಿಷ್ಯ ಎಸ್.ಆರ್.ರಾಮಸ್ವಾಮಿ ಸಂಗ್ರಹಿಸಿ ‘ಪ್ರಜಾಮತ’ ಪತ್ರಿಕೆಗೆ ಬರೆಯುತ್ತಿದ್ದರು. ಆ ಬರಹಗಳೆಲ್ಲ ಸೇರಿ ‘ಜೀವನ ಧರ್ಮ ಯೋಗ’ ಎಂಬ ಒಂದು ಪುಸ್ತಕವೂ ಬಂದಿದೆ.
ಆ ಪುಸ್ತಕಕ್ಕೆ 1964ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. ಆಗ ನಾನು ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿದ್ದೆ. ಅಕಾಡೆಮಿಯಿಂದ ಫೋನ್ ಮಾಡಿ ನನಗೆ ವಿಷಯ ತಿಳಿಸಿದರು. ನಾನು ಹೋಗಿ ಗುಂಡಪ್ಪನವರಿಗೆ, ‘ಸರ್ ನಿಮ್ಮ ಪುಸ್ತಕಕ್ಕೆ ಪ್ರಶಸ್ತಿ ಬಂದಿದೆ’ ಎಂದು ಹೇಳಿದೆ. ‘ನನಗೆ ಬಹುಮಾನ ಬಂದಿದೆಯೇ? ಗೋಖಲೆ ಇನ್‌ಸ್ಟಿಟ್ಯೂಟ್‌ಗೆ ಒಂದಿಷ್ಟು ದುಡ್ಡು ಬಂತು’ ಎಂದು ಪ್ರತಿಕ್ರಿಯಿಸಿದ್ದರು.
ಅವರ ಮನಸ್ಸಿನಲ್ಲಿ ಗೋಖಲೆ ಇನ್‌ಸ್ಟಿಟ್ಯೂಟ್ ಬೆಳೆಯಬೇಕು ಎಂಬ ಆಸೆ ಬಹಳವಾಗಿತ್ತು. ಅವರು ತುಂಬಾ ಬಡತನದಲ್ಲಿಯೇ ಬದುಕಿದವರು. ಅವರು ನನ್ನ ಮೇಲೆ ಬೀರಿದ ಪ್ರಭಾವ ಅಪಾರ.
ಆ ದಿನಗಳಲ್ಲಿ ಶಂಕರಪುರದ ಶಂಕರ ಮಠದಲ್ಲಿಯೂ ಶೃಂಗೇರಿಯಿಂದ ಬಂದ ಕೆಲವು ವಿದ್ವಾಂಸರು ಭಗವದ್ಗೀತೆ ಪಾಠ ಮಾಡುತ್ತಿದ್ದರು.
ಪು.ತಿ.ನರಸಿಂಹಾಚಾರ್, ಕತೆಗಾರ ಕೆ. ಗೋಪಾಲಕೃಷ್ಣರಾವ್ ಅವರ ಮನೆಗೆಲ್ಲ ಹೋಗಿ, ಕುಳಿತು ಸಾಹಿತ್ಯ ಕುರಿತು ಚರ್ಚಿಸುತ್ತಿದ್ದೆವು. ಗೋಪಾಲಕೃಷ್ಣರಾವ್ ಮಗಳು ಜಾನಕಿ ನನ್ನ ವಿದ್ಯಾರ್ಥಿನಿಯಾಗಿದ್ದಳು.
ಆಗ ಶಾಲೆಗಳು ಅಷ್ಟಾಗಿ ಇರಲಿಲ್ಲ. ನ್ಯಾಷನಲ್ ಹೈಸ್ಕೂಲ್ ಮುಖ್ಯವಾದದ್ದು. ಫೋರ್ಟ್ ಹೈಸ್ಕೂಲ್ ಕೂಡ ಜನಪ್ರಿಯ ಶಾಲೆಯಾಗಿತ್ತು. ಆರ್.ಕೆ.ನಾರಾಯಣ್ ಅವರ ತಂದೆ ಕೃಷ್ಣಸ್ವಾಮಿ ಅಯ್ಯರ್ ಆ ಶಾಲೆಗೆ ಮುಖ್ಯೋಪಾಧ್ಯಾಯರಾಗಿದ್ದರು.
ದೊಡ್ಡಪೇಟೆ ಮತ್ತು ಚಿಕ್ಕಪೇಟೆ ವ್ಯಾಪಾರಿ ಕೇಂದ್ರವಾಗಿದ್ದವು. ಅಲ್ಲಿ ಯಾವಾಗಲೂ ಜನಸಂದಣಿ ಇರುತ್ತಿತ್ತು. ಪುಟ್ಟಣ್ಣ ಚೆಟ್ಟಿ ಕಟ್ಟಡವೇ ದೊಡ್ಡ ಕಟ್ಟಡವಾಗಿತ್ತು. ಈಗ ಇದ್ಯಲ್ಲಾ, ಜಯಚಾಮರಾಜೇಂದ್ರ ರಸ್ತೆ ಆಗ ಇರಲೇ ಇಲ್ಲ. ಈಚೆಗೆ ಬಂದಿದ್ದು ಅದು. ಅಲ್ಲೆಲ್ಲ ಸ್ಮಶಾನ ಇತ್ತು. ಅಲ್ಲಿ ಈಗ ಸೊಗಸಾದ ರಸ್ತೆ ಬಂದಿದೆ.
ಸಾರ್ವಜನಿಕ ಕಾರ್ಯಕ್ರಮ ಮಾಡುವ ಜಾಗಗಳೂ ಸಾಕಷ್ಟು ಇರಲಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಒಂದು ಸಣ್ಣ ಹಾಲ್ ಇತ್ತು. ಆಮೇಲೆ ರವೀಂದ್ರ ಕಲಾಕ್ಷೇತ್ರ ಕಟ್ಟಿದರು. ಅದರ ಎದುರು ಎ.ಡಿ.ಎ. ರಂಗಮಂದಿರ ಇದೆಯಲ್ಲಾ, ಅಲ್ಲಿ ಚಪ್ಪರ ಹಾಕಿಕೊಂಡು ನಾಟಕ ಮಾಡುತ್ತಿದ್ದರು. ಮಾಸ್ಟರ್ ಹಿರಣ್ಣಯ್ಯ ಅವರ ತಂದೆಯೂ ನಾಟಕ ಮಾಡುತ್ತಿದ್ದರು ಅಲ್ಲಿ. ಸುಬ್ಬಯ್ಯ ನಾಯ್ಡು ಅವರೂ ನಾಟಕ ಮಾಡುತ್ತಿದ್ದರು.
ಆಗಿನ ಕಾಲದಲ್ಲಿ ‘ತಾಯಿನಾಡು’, ‘ದೇಶಬಂಧು’, ‘ವೀರಕೇಸರಿ’, ‘ವಿಶ್ವ ಕರ್ನಾಟಕ’ ಜನಪ್ರಿಯ ಪತ್ರಿಕೆಗಳು. ನಂತರ ಬಂದ ‘ಪ್ರಜಾವಾಣಿ’ ಕನ್ನಡದ ಬೆಳವಣಿಗೆಗೆ ತುಂಬಾ ಸಹಾಯ ಮಾಡಿತು. ಕನ್ನಡದ ಕಥೆ–ಕಾದಂಬರಿಗಳ ಸ್ಪರ್ಧೆ ಆಯೋಜಿಸಿ ದೊಡ್ಡ ಮೊತ್ತದ ಬಹುಮಾನ ನೀಡಿ ಪ್ರೋತ್ಸಾಹಿಸಿತು.
‘ಇಗೋ ಕನ್ನಡ’ದ ಜನಪ್ರಿಯತೆ
ನಾನು ‘ಪ್ರಜಾವಾಣಿ’ಯಲ್ಲಿ ಬರೆದ ‘ಇಗೋ ಕನ್ನಡ’ ಅಂಕಣ ನನಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ಪ್ರತೀ ವಾರ ಹತ್ತು–ಹನ್ನೆರಡು ಪ್ರಶ್ನೆಗಳಿಗೆ ಉತ್ತರ ಬರೆಯುತ್ತಿದ್ದೆ. ಲಂಡನ್, ಕೆನಡಾ, ಗುವಾಹಟಿಗಳಿಂದೆಲ್ಲ ಪ್ರಶ್ನೆಗಳು ಬರುತ್ತಿದ್ದವು.
ಅಂಕಣವನ್ನು ನಿರಂತರವಾಗಿ ಹದಿನೆಂಟು ವರ್ಷ ಬರೆದೆ. ಐದೈದು ವರ್ಷಗಳಿಗೆ ಒಮ್ಮೆ ನವ ಕರ್ನಾಟಕದವರು ಪುಸ್ತಕಗಳನ್ನು ಮಾಡಿದರು. ಅದನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ನಂತರ ಅವೆಲ್ಲವನ್ನೂ ಸೇರಿಸಿ ಒಂದು ಸಂಯುಕ್ತ ಸಂಪುಟವನ್ನೂ ತಂದಿದ್ದಾರೆ.
ನಾನು ಮೊದಲಿನಿಂದಲೂ ಗ್ರಂಥಾಲಯಗಳಿಗೆ ಹೋಗುತ್ತಿದ್ದೆ. ಕಬ್ಬನ್ ಪಾರ್ಕ್‌ನಲ್ಲಿನ ಸೆಂಟ್ರಲ್ ಲೈಬ್ರರಿಯಲ್ಲಿ ಒಳ್ಳೆಯ ಪುಸ್ತಕಗಳು ದೊರೆಯುತ್ತಿದ್ದವು. ಗೋಖಲೆ ವಿಚಾರ ಸಂಸ್ಥೆಯ ಲೈಬ್ರರಿಗೂ ಹೋಗುತ್ತಿದ್ದೆ.
ಕಾಲೇಜಿನಲ್ಲಿ ಪ್ರತೀ ವರ್ಷ ನವರಾತ್ರಿಯ ಸಂದರ್ಭದಲ್ಲಿ ‘ಕನ್ನಡದ ಹಬ್ಬ’ ಅಂತ ಎರಡು ದಿನಗಳ ಕಾರ್ಯಕ್ರಮ ಆಯೋಜಿಸುತ್ತಿದ್ದೆ. ಅಲ್ಲಿಗೆ ವಿದ್ವಾಂಸರನ್ನು ಕರೆಸಿ ಉಪನ್ಯಾಸ ಏರ್ಪಡಿಸುತ್ತಿದ್ದೆ. ಹಾಗೆಯೇ ಪ್ರತೀ ವರ್ಷ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಂದ ನಾಟಕ ಮಾಡಿಸುತ್ತಿದ್ದೆ. ನಾನೂ ಅದರಲ್ಲಿ ಪಾತ್ರ ಮಾಡುತ್ತಿದ್ದೆ. ಆಗ ಜಯನಗರದ ಜನರೆಲ್ಲ ವಿಜಯಾ ಕಾಲೇಜಿನಲ್ಲಿ ಸೇರುತ್ತಿದ್ದರು.
ಮನೆ ಕಟ್ಟಿದ ಕಥೆ
ವಿಶ್ವೇಶ್ವರಪುರದಲ್ಲಿದ್ದಾಗಲೇ ನಾನು ಜಯನಗರದಲ್ಲಿ ಒಂದು ಸೈಟ್ ಕೊಂಡುಕೊಂಡಿದ್ದೆ. ಸಿ. ನರಸಿಂಗ್ ರಾವ್ ಆಗ ಸಿಟಿ ಇಂಪ್ರೂವ್‌ಮೆಂಟ್ ಟ್ರಸ್‌್ಟ ಬೋರ್ಡ್ (ಸಿಐಟಿಬಿ) ಅಧ್ಯಕ್ಷರಾಗಿದ್ದರು. ಅವರ ಮಗ ನನ್ನ ವಿದ್ಯಾರ್ಥಿಯಾಗಿದ್ದ. ‘ನಿಮ್ಮ ಮೇಷ್ಟ್ರಿಗೆ ಒಂದು ಸೈಟ್ ಕೊಂಡುಕೊಳ್ಳೋಕೆ ಹೇಳೋ’ ಎಂದು ಹೇಳಿ ಕಳಿಸಿದ್ದರು.
‘ನನಗ್ಯಾಕೆ ಸೈಟು. ನಾನೇನು ಮನೆ ಕಟ್ಟಲು ಸಾಧ್ಯವೇ’ ಎಂದಿದ್ದೆ. ಅವರೇ ಒತ್ತಾಯ ಮಾಡಿ ಕೊಡಿಸಿದರು. ಆಗ ಈ ಮನೆಯ ಜಾಗಕ್ಕೆ ಸಾವಿರದ ಇನ್ನೂರು ರೂಪಾಯಿ ಕೊಟ್ಟಿದ್ದೆ. ತಿಂಗಳಿಗೆ ಹದಿನೈದು ರೂಪಾಯಿ ಕಟ್ಟುತ್ತಾ ಸಾಲ ತೀರಿಸಿದೆ.
ಈ ಸೈಟು ಹಾಗೇ ಬಿದ್ದಿತ್ತು. 1960ರ ಸುಮಾರಿನಲ್ಲಿ ವೆಂಕಟರಾಮ್ ಅವರು ‘ಹೌಸಿಂಗ್ ಬೋರ್ಡ್’ ಅಧ್ಯಕ್ಷರಾಗಿದ್ದರು. ಅವರು ಬಂದು ‘ಸೈಟ್ ಇದ್ಯಲ್ರೀ... ಒಂದು ಪ್ಲ್ಯಾನ್ ಮಾಡಿ ಕೊಡ್ತೇನೆ. ಮನೆ ಕಟ್ಟಿಬಿಡಿ’ ಎಂದರು.
‘ನನ್ನ ಬಳಿ ದುಡ್ಡೆಲ್ಲಿದೆ’ ಎಂದು ಕೇಳಿದೆ. ಬೋರ್ಡ್‌ನಿಂದ ಎಂಟೂವರೆ ಸಾವಿರ ರೂಪಾಯಿ ಸಾಲ ಕೊಡಿಸಿದರು. ಅವರೇ ನಿಂತುಕೊಂಡು ಮನೆ ಕಟ್ಟಿಸಿಕೊಟ್ಟರು. ಆಮೇಲೆ ನಾವು ಸ್ವಲ್ಪ ವಿಸ್ತರಿಸಿಕೊಂಡೆವು. ಈ ಬೀದಿಯೊಳಗೆ ಮಹಡಿ ಇಲ್ಲದಿರುವ ಮನೆ ನಮ್ಮದೊಂದೆ.
ಆಗ ಬೆಂಗಳೂರಿನ ಜನಸಂಖ್ಯೆ ಇಷ್ಟಿರಲಿಲ್ಲ. ಆದರೆ ಈಗ ಅದೆಷ್ಟು ಲಕ್ಷ ಜನ ಇದ್ದಾರೋ ಯಾರಿಗೆ ಗೊತ್ತು? ಅಷ್ಟು ಬೆಳೆದುಬಿಟ್ಟಿದೆ. ಈಗ ನನ್ನ ಮಗನ ಕಾರಿನಲ್ಲಿ ಕೂತು ಅಡ್ಡಾಡುವಾಗ ಯಾವ ಬೀದಿಯೆಂದು ಗೊತ್ತಾಗುವುದೇ ಇಲ್ಲ. ಅಷ್ಟು ಬದಲಾಗಿದೆ. ಮೊದಲಿನ ಸೌಮ್ಯತೆ, ಸಮಾಧಾನ ಗುಣದ ಬೆಂಗಳೂರು ಈಗ ಇಲ್ಲ. ವ್ಯಾವಹಾರಿಕ ವಾತಾವರಣ ರಾರಾಜಿಸುತ್ತಿದೆ.
ನನ್ನ ಈ ವೃದ್ಧಾಪ್ಯದಲ್ಲಿಯೂ ವಿದ್ಯಾರ್ಥಿಗಳು ಬಂದು ವಿಚಾರಿಸಿಕೊಂಡು ಹೋಗುತ್ತಾರೆ. ಇತ್ತೀಚೆಗೆ ಮೂರು ಬೇರೆ ಬೇರೆ ಪೀಳಿಗೆಯ ಹಳೇ ವಿದ್ಯಾರ್ಥಿಗಳು ತಮ್ಮ ಕುಟುಂಬದೊಂದಿಗೆ ಬಂದು ನನ್ನಿಂದ ಉಪನ್ಯಾಸ ಮಾಡಿಸಿಕೊಂಡು ಹೋದರು.
ಇಂಥ ಕಾರಣಗಳಿಂದಲೇ ಎಷ್ಟೆಲ್ಲ ಬದಲಾವಣೆಯಾಗಿಯೂ ಬೆಂಗಳೂರು ನನ್ನ ಪ್ರಿಯ ಊರಾಗಿಯೇ ಉಳಿದಿದೆ.
ಅಪಘಾತದ ಕಹಿನೆನಪು
ಮನೆ ಕಟ್ಟುವಾಗ ನಾನು ವಿಶ್ವೇಶ್ವರಪುರದಿಂದ ಜಯನಗರಕ್ಕೆ ಸೈಕಲ್‌ನಲ್ಲಿ ಓಡಾಡುತ್ತಿದ್ದೆ. ಒಂದು ದಿನ ನಮ್ಮ ಮನೆ ಸಮೀಪ ಬರ್ತಿದ್ದಾಗ ಪಕ್ಕದ ರಸ್ತೆಯಿಂದ ಒಂದು ಕಾರು ಬಂದು ನನಗೆ ಡಿಕ್ಕಿ ಹೊಡೆದುಬಿಟ್ಟಿತು.
ರಸ್ತೆ ಬದಿ ಕಲ್ಲಿನ ರಾಶಿ, ಮತ್ತೊಂದು ಕಡೆ ಮರಳಿನ ರಾಶಿ– ಎರಡೂ ಇತ್ತು. ನನ್ನ ಅದೃಷ್ಟಕ್ಕೆ ಮರಳಿನ ರಾಶಿಯ ಮೇಲೆ ಬಿದ್ದೆ. ಬೆನ್ನಿನ ಆರು ಮೂಳೆಗಳು ಮುರಿದು ಹೋಗಿದ್ದವು. ನಾನು ಅಲ್ಲಿಯೇ ಮೂರ್ಛೆ ಹೋಗಿ ಬಿಟ್ಟೆ. ನನಗೆ ಡಿಕ್ಕಿ ಹೊಡೆದವನೇ ತನ್ನ ಕಾರಿನಲ್ಲಿ ಕೂಡಿಸಿಕೊಂಡು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದ. ಅಲ್ಲಿ ನನ್ನ ವಿದ್ಯಾರ್ಥಿಯೊಬ್ಬರು ಇದ್ದರು. ಅವರು ಮುತುವರ್ಜಿ ವಹಿಸಿ ತಕ್ಷಣ ಚಿಕಿತ್ಸೆ ಕೊಡಿಸಿದರು.
ಕೆ. ಶ್ರೀನಿವಾಸಮೂರ್ತಿ ಅಂತ ಮೂಳೆ ತಜ್ಞರು ನನ್ನ ಸ್ನೇಹಿತರಾಗಿದ್ದರು. ಅವರು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದರು. ಒಂದು ತಿಂಗಳ ನಂತರ ಸರಿಯಾದೆ.
ನನಗೆ ಆ್ಯಕ್ಸಿಡೆಂಟ್ ಆಗಿದೆ ಎಂದಾಗ ನನ್ನ ವಿದ್ಯಾರ್ಥಿಗಳು ತರಗತಿಗಳಿಗೂ ಹೋಗಿರಲಿಲ್ಲ. ಅಂಥ ಗೌರವ ನನ್ನ ಮೇಲೆ. ಒಂದು ತಿಂಗಳಾದ ಮೇಲೆ ನಾನು ಕಾಲೇಜಿಗೆ ಹೋದಾಗ ತುಂಬ ಆಪ್ತವಾಗಿ ಸ್ವಾಗತಿಸಿದರು.
ಅದೇ ನನ್ನ ಜೀವನದಲ್ಲಿ ನಡೆದ ಮೊದಲ ಮತ್ತು ಕೊನೆಯ ಆ್ಯಕ್ಸಿಡೆಂಟ್. ಆಮೇಲೆ ಕಾರು ಕೊಂಡು ಮೂವತ್ತು ವರ್ಷ ಓಡಿಸಿದರೂ ಪುಣ್ಯಕ್ಕೆ ಯಾವ ಆ್ಯಕ್ಸಿಡೆಂಟ್ ಆಗಲಿಲ್ಲ.
ಪೇಪರ್ ಚೇಸಿಂಗ್ ಮತ್ತು ಪೋಕಿಮಾನ್!
ವಿಜಯಾ ಕಾಲೇಜಿನಲ್ಲಿದ್ದಾಗ ನಾವು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹುಣ್ಣಿಮೆ ರಾತ್ರಿ ‘ಪೇಪರ್ ಚೇಸ್’ ಅಂತ ಆಟ ಆಡುತ್ತಿದ್ದೆವು. ಎರಡು ತಂಡ ಮಾಡಿಕೊಳ್ಳುತ್ತಿದ್ದೆವು.
ಒಂದು ತಂಡ ರಸ್ತೆಗಳಲ್ಲಿ ಅಡಗಿಕೊಳ್ಳುತ್ತಿತ್ತು. ಇನ್ನೊಂದು ತಂಡ ಅವರನ್ನು ಹುಡುಕಬೇಕು. ಹೀಗೆ ಅಡಗಿಕೊಳ್ಳಲು ಹೋದವರು ತಾವು ಈ ದಿಕ್ಕಿಗೆ ಹೋಗಿದ್ದೇವೆ ಎಂಬುದರ ಸೂಚನೆಗಾಗಿ ಹಳೇ ಪತ್ರಿಕೆಗಳ ತುಣುಕುಗಳನ್ನು ಚೆಲ್ಲಿ ಹೋಗುತ್ತಿದ್ದರು. ವಿಜಯಾ ಕಾಲೇಜಿನಿಂದ ಹೊರಟು ಬ್ಯೂಗಲ್ ರಾಕ್‌ವರೆಗೂ ಅಡಗಿಕೊಳ್ಳುತ್ತಿದ್ದೆವು.
ಈಗಿನ ಜನಪ್ರಿಯ ಆಟ ಪೋಕಿಮಾನ್ ಕೂಡ ಹೀಗೆ. ಸೂಚನೆಯ ಆಧಾರದ ಮೂಲಕ ಹುಡುಕುವ ಆಟ. ಇದನ್ನು ನಾವು ಆ ಕಾಲದಲ್ಲಿಯೇ ಆಡಿದ್ದೆವು.
ವಿದ್ವತ್ತಿನ ಹಿರಿಯ ಚೇತನ
ಪ್ರೊ. ಜಿ.ವೆಂಕಟಸುಬ್ಬಯ್ಯ ಕನ್ನಡ ಸಾಹಿತ್ಯದ ಹಿರಿಯ ಜೀವ. (ಜನನ: ಆಗಸ್ಟ್ 23, 1913) ಪ್ರೊ. ಜಿ. ವೆಂಕಟಸುಬ್ಬಯ್ಯ ಎನ್ನುವುದಕ್ಕಿಂತಲೂ ‘ಜೀವಿ’ ಎಂದೇ ಜನಜನಿತರಾಗಿರುವ ಅವರು ಶತಮಾನದ ತುಂಬು ಜೀವನವನ್ನು ಸವಿದಿರುವವರು.
‘ನಿಘಂಟುತಜ್ಞ’ ಎಂದು ಪ್ರಸಿದ್ಧರಾಗಿರುವ ವಿದ್ವತ್ತಿನ ಈ ಚೇತನ ಬೆಂಗಳೂರಿನ ಸಾಂಸ್ಕೃತಿಕ–ಸಾಹಿತ್ಯಿಕ ಕೇಂದ್ರವೇ ಆಗಿದ್ದಾರೆ; ಕನ್ನಡ ಸಾರಸ್ವತಲೋಕದ ಹಲವು ಆಗುಹೋಗುಗಳಿಗೆ ಸಾಕ್ಷಿಪ್ರಜ್ಞೆಯಾಗಿರುವಂತೆ ಬೆಂಗಳೂರಿನ ಬೆಳವಣಿಗೆಯ ಪ್ರಮುಖ ಹಂತಗಳನ್ನೂ ಹತ್ತಿರದಿಂದ ಕಂಡವರು.
‘ಇಗೋ ಕನ್ನಡ’ದ ಮೂಲಕ ಪದಗಳ ಹುಟ್ಟು–ಬೆಳವಣಿಗೆಗಳ ಸ್ವಾರಸ್ಯವನ್ನು ಕಾಣಿಸಿರುವ ಅವರು ‘ಇಗೋ, ಬೆಂಗಳೂರು ಹೀಗಿತ್ತು’ ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಂದ ಹಾಗೆ ನಾಳೆ (ಆಗಸ್ಟ್23) ಜಿ. ವೆಂಕಟಸುಬ್ಬಯ್ಯ ಅವರ 109ನೇ ಜನ್ಮದಿನ...
ಕೃಪೆ what's app