ಮಧುಗಿರಿ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ತುಮಕೂರು ಜಿಲ್ಲೆ -2 ಇವರ ವತಿಯಿಂದ ಜು .6 ರಂದು ಬೆಳಗ್ಗೆ 11 ಗಂಟೆಗೆ ರಾಜೀವಗಾಂಧಿ ಕ್ರೀಡಾಂಗಣ , ಮಧುಗಿರಿ ಇಲ್ಲಿ ಸ್ವ – ಉದ್ಯೋಗ ಮೇಳ ಮತ್ತು ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ . ಧರ್ಮಾಧಿಕಾರಿ ಉದ್ಘಾಟನೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನೆರವೇರಿಸಲಿದ್ದು , ಅಧ್ಯಕ್ಷತೆಯನ್ನು ಶಾಸಕ ಎಂ.ವಿ.ವೀರಭದ್ರಯ್ಯ ವಹಿಸುವರು . ವಸ್ತುಪ್ರದರ್ಶನದ ಉದ್ಘಾಟನೆಯನ್ನು ಅರಗ ಜ್ಞಾನೇಂದ್ರ ನೆರವೇರಿಸುವರು . 44 ನೇ ನಮ್ಮ ಊರು ನಮ್ಮ ಕೆರೆ ಲೋಕಾರ್ಪಣೆಯನ್ನು ಸಂಸದ ಜಿ.ಎಸ್ . ಬಸವರಾಜು ಮಾಡುವರು . ಶಾಸಕ ಡಾ.ಜಿ.ಪರಮೇಶ್ವರ್ ಸುಜ್ಞಾನ ನಿಧಿ ಶಿಷ್ಯ ವೇತನ ವಿತರಿಸುವರು . ಜನಮಂಗಲ ಸಲಕರಣೆ ವಿತರಣೆಯನ್ನು ಡಾ.ಎಚ್.ಎಲ್ . ಮಂಜುನಾಥ್ ವಿತರಿಸುವರು . ಆರೋಗ್ಯ ರಕ್ಷಾ ಸೌಲಭ್ಯ ವಿತರಣೆಯನ್ನು ವಿ.ಪ. ಸದಸ್ಯರಾದ ಆರ್.ರಾಜೇಂದ್ರ ನೀಡುವರು . ಚಿದಾನಂದಗೌಡ , ಮಾಶಾಸನ ವಿತರಿಸುವರು , ಲಾಭಾಂಶ ವಿತರಣೆಯನ್ನು ಮನೋಹರ್ ಎಂ.ಆರ್ . ನೀಡುವರು . ಪುರಸಭೆ ಅಧ್ಯಕ್ಷ ತಿಮ್ಮರಾಜು , ಶೀನಪ್ಪ , ಎಸ್.ಕೆ.ರಾಮಚಂದ್ರ ಗುಪ್ತ ಅವರು ಉಪಸ್ಥಿತರಿರುವರು .
ತಯಾರಿ ಬಗ್ಗೆ:-ಪಟ್ಟಣಕ್ಕೆ ಜುಲೈ -6ರ ಬುಧವಾರದಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆ ಆಗಮಿಸುತ್ತಿದ್ದು ಧರ್ಮಸ್ಥಳ ಸಂಘದ ವತಿಯಿಂದ ವಿವಿಧ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಲಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಟ್ರಸ್ಟ್ ನ ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಎಂ .ಶೀನಪ್ಪ ತಿಳಿಸಿದರು.
ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈ ಸಾಧನಾ ಸಮಾವೇಶದಲ್ಲಿ ವಿವಿಧ ಅನುದಾನಗಳ ವಿತರಣಾ, ಐವತ್ತು ಮಂದಿಗೆ ಆಟೋಗಳ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪೂಜ್ಯರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಮಧುಗಿರಿ ಶ್ರೀ ದಂಡಿನಮಾರಮ್ಮ ದೇವಾಲಯದ ಮುಂಭಾಗದಿಂದ ರಾಜೀವ್ ಗಾಂಧಿ ಕ್ರೀಡಾಂಗಣಕ್ಕೆ ಬೃಹತ್ ಮೆರವಣಿಗೆ ಮೂಲಕ ಕರೆತರಲಾಗುವುದು. ಸ್ವ ಉದ್ಯೋಗ ಮಳಿಗೆಗಳ ಉದ್ಗಾಟನೆ, ಬ್ಯಾಂಕಿನ ನೆರವಿನ ಮೂಲಕ ,ಮಹಿಳಾ ಸಬಲೀಕರಣ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮಧುಗಿರಿ ತಾಲ್ಲೂಕಿನಲ್ಲಿ ಈಗಾಗಲೇ ಗ್ರಾಮ ಅಭಿವದ್ಧಿ ಯೋಜನೆಯಡಿ 3300 ಸಂಘಗಳು ಇದ್ದು ಮೂವತ್ತು ಸಾವಿರ ಸದಸ್ಯರಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಮೂವತ್ತು ಸಾವಿರ ಸಂಘಗಳಿದ್ದು 2. 5ಲಕ್ಷ ಸದಸ್ಯರಿದ್ದಾರೆ ಎಂದು ಮಾಹಿತಿ ನೀಡಿದರು.
ಮಧುಗಿರಿ ತಾಲ್ಲೂಕಿನಲ್ಲಿ ಪ್ರತಿಯೊಬ್ಬ ಸದಸ್ಯರ ಹತ್ತು ರೂಗಳ ಉಳಿತಾಯದಂತೆ ಇಲ್ಲಿಯವರೆಗೂ 12 ಕೋಟಿ ರೂ ಸಂಗ್ರಹವಾಗಿದ್ದು, 100 ಕೋಟಿ ರೂ ಗಳವರೆಗೂ ಸಾಲ ನೀಡಲಾಗಿದೆ. ಪ್ರತಿ ವಾರ ಮರು ಪಾವತಿ ಶೇಕಡಾ ನೂರರಷ್ಟು ಆಗುತ್ತಿದೆ ಎಂದರು.
ರಾಜ್ಯದಲ್ಲಿ 500 ಕೆರೆಗಳ ಪುನಶ್ಚೇತನಗೊಳಿಸಿದ್ದು ತುಮಕೂರು ಜಿಲ್ಲೆಯಲ್ಲಿ ನಲವತ್ತು ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಮಧುಗಿರಿ ತಾಲ್ಲೂಕಿನಲ್ಲಿ 5ಕೆರೆಗಳನ್ನು 6ಕೋಟಿ ರೂ ವೆಚ್ಚದಲ್ಲಿ ಪುನಶ್ಚೇತನಗೊಳಿಸಿ ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಗಿದೆ ಎಂದರು.
ಇದಲ್ಲದೆ ಸಂಘದ ಸದಸ್ಯರುಗಳ ಮಕ್ಕಳ ವಿದ್ಯಾರ್ಜನೆಗಾಗಿ 5ಸಾವಿರ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣಕ್ಕೆ ಪ್ರತಿ ತಿಂಗಳು ಅನುದಾನ, ವಾತ್ಸಲ್ಯ ಕಾರ್ಯಕ್ರಮದಡಿ ರಾಜ್ಯದ ಹದಿನೈದು ಸಾವಿರ ವೃದ್ಧರಿಗೆ ಮನೆ ನಿರ್ಮಾಣ ಮತ್ತು ಶೌಚಾಲಯ ನಿರ್ಮಾಣ ಮಾಡಿಕೊಡಲಾಗಿದೆ.ವಿಶೇಷ ಚೇತನರಿಗೆ ಅನುದಾನ, ಪರಿಸರ ಸಂರಕ್ಷಣೆ, ಹಾಲಿನ ಡೈರಿಗಳ ಕಟ್ಟಡಗಳ ನಿರ್ಮಾಣಕ್ಕೆ, ದೇವಸ್ಥಾನಗಳ ಪುನಶ್ಚೇತನಕ್ಕೆ, ವ್ಯಸನಮುಕ್ತ ಮದ್ಯ ವರ್ಜನ ಶಿಬಿರಗಳು, ಶಾಲೆಗಳಿಗೆ ಜ್ಞಾನ ವಿಕಾಸ ಯೋಜನೆಯಲ್ಲಿ ಸಾಕಷ್ಟು ಅನುಕೂಲ ಮಾಡಲಾಗಿದೆಂದರು.
ಸರ್ವಧರ್ಮ ಸಮನ್ವಯದಡಿಯಲ್ಲಿ ಈ ಸಭೆಗೆ ಯಾವುದೇ ರಾಜಕೀಯ ಪಕ್ಷಗಳನ್ನು ಬಿಂಬಿಸದೆ ಜಾತ್ಯತೀತ ಮತ್ತು ಪಕ್ಷಾತೀತವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಮೆರವಣಿಗೆ ಮಾರ್ಗ: ಪರಮಪೂಜ್ಯ ಡಾ:ಡಿ. ವೀರೇಂದ್ರ ಹೆಗ್ಗಡೆಯವರು ಗ್ರಾಮ ದೇವತೆ ದಂಡಿನ ಮಾರಮ್ಮನ ಪೂಜೆ ಸಲ್ಲಿಸಿ ದೇವಸ್ಥಾನದಿಂದ ಒರಟು ಟಿ ವಿ ವಿ. ಪೆಟ್ರೋಲ್ ಬಂಕ್ ಮಾರ್ಗವಾಗಿ ಡುಮ್ಲೆಟ್ ಸರ್ಕಲ್ ಮೂಲಕ ಹೈ ಸ್ಕೂಲ್ ರಸ್ತೆ ಮಾರ್ಗವಾಗಿ ರಾಜೀವ್ ಗಾಂಧಿ ಕ್ರೀಡಾಂಗಣ ಸಮಾರಂಭದ ವೇದಿಕೆ ತಲಪಲಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ. ಮಧುಗಿರಿ ತಾಲೂಕು ಯೋಜನಾಧಿಕಾರಿಗಳಾದ ದಿನೇಶ್ ಕುಮಾರ್. ಹಾಗೂ ಸ್ವಾಗತ ಸಮಿತಿಯ ಸದಸ್ಯರುಗಳಾದ ಧಾರ್ಮಿಕ ಮುಖಂಡ ಡಾ: ಎಂ ಜಿ ಶ್ರೀನಿವಾಸ್ ಮೂರ್ತಿ. ತುಂಗೋಟಿ ರಾಮಣ್ಣ. ಸಿಸ್ಟಲ್ ಮಂಜುನಾಥ್. ಪುರಸಭೆ ಸದಸ್ಯರಗಳಾದ ಎಂ ಎಲ್ ಗಂಗರಾಜ್. ಎಂ ಆರ್ ಜಗನಾಥ್. ಲಾಲಪೇಟೆ ಮಂಜುನಾಥ್. ಆಚಾರ್ ಮಂಜುನಾಥ್. ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ಕೆ ಎನ್ ಶ್ರೀನಿವಾಸ್. ಧಾರ್ಮಿಕ ಮುಖಂಡರುಗಳಾದ ಯತೀಶ್ ಬಾಬು. ರಘು ಯಾದವ್. ಮುಖಂಡರಾದ ಅಶ್ವಥ್ ನಾರಾಯಣ್ ಮತ್ತಿತರರಿದ್ದರು.
ವರದಿ:ನಾಗೇಶ್ ಜೀವಾ ಪುರವರ