ಬೆಂಗಳೂರು, ಜೂನ್ 29 (ಕರ್ನಾಟಕ ವಾರ್ತೆ) : ಕನಕಪುರ ರಸ್ತೆಯ ನ್ಯಾಯಾಂಗ ಬಡಾವಣೆಯ 158 ನಿವಾಸಿಗಳು ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವ ಪಡೆದುಕೊಂಡಿದ್ದಾರೆ.
ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಹಾಗೂ ಕನ್ನಡ-ಕನ್ನಡಿಗ-ಕರ್ನಾಟಕದ ಹಿನ್ನೆಲೆಯಲ್ಲಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ರೂಪಿಸುವ ಉದ್ದೇಶದೊಂದಿಗೆ ʻಕೋಟಿ ಸದಸ್ಯತ್ವ ಅಭಿಯಾನʼದ ಅಡಿಯಲ್ಲಿ ʻಮನೆ ಮನೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುʼ ಎನ್ನುವ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ರಾಜ್ಯಾದ್ಯಂತ ಗಣ್ಯರಿಂದ ಜನಸಾಮಾನ್ಯರವರೆಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರುಗಳ ಮನೆಗೆ, ಕಚೇರಿಗೆ, ಬಡಾವಣೆಗಳಿಗೆ ಭೇಟಿ ನೀಡಿ ಪರಿಷತ್ತಿನ ಸದಸ್ಯತ್ವ ಪಡೆದುಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಕನಕಪುರ ರಸ್ತೆಯ ನ್ಯಾಯಾಂಗ ಬಡಾವಣೆಗೆ ಭೇಟಿ ನೀಡಿದರು. ವಿಶ್ರಾಂತ ಜಿಲ್ಲಾ ನ್ಯಾಯಾಧಿಶರುಗಳಾದ ನ್ಯಾ. ಶಿವಲಿಂಗೇಗೌಡ ಹಾಗೂ ನ್ಯಾ. ಅಶ್ವತ್ನಾರಾಯಣ ಕೆ.ಎಸ್. ಸೇರಿದಂತೆ ಬಡಾವಣೆಯ ೧೫೮ ಜನರು ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವ ಪಡೆದುಕೊಂಡಿದ್ದಾರೆ.
ಸದಸ್ಯತ್ವ ಪಡೆದು ಮಾತನಾಡಿ, ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ಶಿವಲಿಂಗೇಗೌಡ ಅವರು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಸಂಸ್ಥೆ. 107 ವರ್ಷಗಳ ಇತಿಹಾಸ ಹೊಂದಿದ ಸಂಸ್ಥೆಯ ಆಜೀವ ಸದಸ್ಯತ್ವ ಪಡೆದ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ಅಶ್ವತ್ನಾರಾಯಣ ಕೆ.ಎಸ್. ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಅಸ್ಮಿತೆ. ಕನ್ನಡಿಗರಾದವರೆಲ್ಲರೂ ಪರಿಷತ್ತಿನ ಭಾಗವಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಚುಕ್ಕಾಣಿ ಹಿಡಿದ ನಾಡೋಜ ಡಾ. ಮಹೇಶ ಜೋಶಿ ಅವರ ಕ್ರಿಯಾಶೀಲ ಕಾರ್ಯಕ್ಕೆ ನಮ್ಮ ನ್ಯಾಯಾಂಗ ಬಡಾವಣೆಯಲ್ಲಿ ಸದ್ಯ 158 ಜನರು ಆಜೀವ ಸದಸ್ಯತ್ವ ಪಡೆದು ಕೊಂಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶ್ಯಾಧ್ಯಕ್ಷರಾದ ಬಿ.ಎಂ. ಪಟೇಲ್ಪಾಂಡು, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ ಉಪಸ್ಥಿತರಿದ್ದರು.