ಬೆಂಗಳೂರು, ಜೂನ್ 23 (ಕರ್ನಾಟಕ ವಾರ್ತೆ) : ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು 2022-23ನೇ ಸಾಲಿನ ಪ್ರಥಮ ಪದವಿ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯ ಮೂಲಕ ಬೆಂಗಳೂರು ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯಲ್ಲಿರುವ ಸ್ನಾತಕ ಪದವಿ ಕೋರ್ಸುಗಳನ್ನು ನಡೆಸುತ್ತಿರುವ ಸಂಯೋಜಿತ ಕಾಲೇಜುಗಳಿಗೆ ಪ್ರವೇಶಾತಿ ಮಾಡಲು UUCMS ಪೋರ್ಟಲ್ ಮೂಲಕ ಅವಕಾಶ ಕಲ್ಪಿಸಿರುತ್ತದೆ. ದಿನಾಂಕ: 28-06-2022 ರಿಂದ ಪ್ರವೇಶಾತಿ ಪ್ರಕ್ರಿಯೆಯು http://uucms.karnataka.gov.in/ ರ ಮೂಲಕ ನಡೆಸಲಾಗುವುದು.
2022-23ನೇ ಸಾಲಿಗೆ ಸಂಯೋಜನಾ ನವೀಕರಣಕ್ಕೆ ಅರ್ಜಿ ಸಲ್ಲಿಸಿರುವ ಈಗಾಗಲೇ ಅಸ್ತಿತ್ವದಲ್ಲಿರುವ ಸಂಯೋಜಿತ ಕಾಲೇಜುಗಳು 2021-22ನೇ ಸಾಲಿನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನುಸಾರ ನಿಗದಿಪಡಿಸಿರುವ ವಿದ್ಯಾರ್ಥಿ ಪ್ರಮಾಣದ ಮಿತಿಯಲ್ಲಿ UUCMS ಪೋರ್ಟಲ್ ಮೂಲಕ ಪ್ರವೇಶಾತಿಯನ್ನು ಮಾಡಿಕೊಳ್ಳಲು ಅನುಮತಿಸಲಾಗಿದೆ.
2022-23ನೇ ಸಾಲಿಗೆ ವಿದ್ಯಾರ್ಥಿ ಪ್ರಮಾಣದ ಹೆಚ್ಚಳ, ಹೊಸ ಕೋರ್ಸು ಸಂಯೋಜನೆ, ಮತ್ತು ಹೊಸ ಕಾಲೇಜುಗಳ ಸಂಯೋಜನೆಗೆ ಕೋರಿ ಅರ್ಜಿ ಸಲ್ಲಿಸಿರುವಂತಹ ಕಾಲೇಜುಗಳಿಗೆ/ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ.
ಬೆಂಗಳೂರು ವಿಶ್ವವಿದ್ಯಾಲಯವು ಬಿ.ಎ./ಬಿ.ಎಸ್ಸಿ. (ಹಾನರ್ಸ್) ಪದವಿ ಕೋರ್ಸುಗಳನ್ನು ಜ್ಞಾನಭಾರತಿ ಆವರಣದಲ್ಲಿ ಪ್ರಾರಂಭಿಸಿದ್ದು, ಸದರಿ ಕೋರ್ಸಿಗೂ ಸಹ ಪ್ರವೇಶಾತಿಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.