ಬೆಂಗಳೂರು, ಮೇ 11 (ಕರ್ನಾಟಕ ವಾರ್ತೆ): ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ 2ನೇ ಕರ್ನಾಟಕ ರಾಜ್ಯ ಮಿನಿ ಒಲಿಂಪಿಕ್ ಕ್ರೀಡಾಕೂಟ-2022ವನ್ನು ಮೇ 16 ರಿಂದ 22ರ ವರೆಗೆ ಆಯೋಜಿಸಲಾಗಿದೆ ಎಂದು ಕರ್ನಾಟಕ ಒಲಂಪಿಕ್ಸ್ ಅಸೋಸಿಯೇಷನ್‍ನ ಅಧ್ಯಕ್ಷರಾದ ಡಾ.ಕೆ. ಗೋವಿಂದರಾಜು ತಿಳಿಸಿದರು.
ಅವರು ಇಂದು ವಿಕಾಸಸೌಧದಲ್ಲಿ “ಮಿನಿ ಒಲಂಪಿಕ್ಸ್“ ಕ್ರೀಡಾಕೂಟ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಭಾರತದ ಭವಿಷ್ಯದ ಕ್ರೀಡಾಪಟುಗಳನ್ನು ಬೆಳೆಸುವ ನಿಟ್ಟಿನಲ್ಲಿ ಮಿನಿ ಒಲಪಿಂಕ್ಸ್‍ನ್ನು ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯದಲ್ಲಿ 2020ರಲ್ಲಿ ಆಯೋಜಿಸಲಾಗಿತ್ತು. ಎರಡನೇ ಬಾರಿಗೆ ಆಯೋಜನೆಗೊಳ್ಳುತ್ತಿರುವ ಈ ಮಿನಿ ಒಲಪಿಂಕ್ಸ್ ಕ್ರೀಡಾ ಕೂಟವು ರಾಜ್ಯದ ಕ್ರೀಡಾ ಭವಿಷ್ಯದ ಅಡಿಪಾಯ .ಈ ಕ್ರೀಡಾಕೂಟವನ್ನು ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯಿಂದ ಆಯೋಜಿಸಲಾಗಿದ್ದು, ಸರ್ಕಾರವು 2.50 ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ ಎಂದರು.
ಎರಡನೇ ರಾಜ್ಯ ಮಿನಿ ಒಲಪಿಂಕ್ಸ್ ಕ್ರೀಡಾ ಕೂಟದಲ್ಲಿ 14 ವರ್ಷದೊಳಗಿನ ಸುಮಾರು 5 ಸಾವಿರ ಬಾಲಕ-ಬಾಲಕಿಯರು ಭಾಗವಹಿಸುವ ನಿರೀಕ್ಷೆಯಿದ್ದು, ಅಥ್ಲೆಟಿಕ್ಸ್, ಆರ್ಚರಿ, ಬ್ಯಾಡ್ಮಿಂಟನ್, ಬ್ಯಾಸ್ಕೆಟ್ ಬಾಲ್, ಬಾಕ್ಸಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಪುಟ್ಬಾಲ್, ಜಿಮಾಸ್ಟಿಕ್ಸ್, ಹ್ಯಾಂಡ್ ಬಾಲ್, ಹಾಕಿ, ಜೂಡೋ, ಖೊಖೊ, ಲಾನ್ ಟೆನ್ನಿಸ್, ನೆಟ್ ಬಾಲ್, ರೈಫಲ್ ಶೂಟಿಂಗ್, ಸ್ವಿಮ್ಮಿಂಗ್, ಟೇಬಲ್ ಟೆನಿಸ್, ಟಿಕ್‍ವ್ಯಾಂಡೋ, ವೈಟ್‍ಲಿಫ್ಟಿಂಗ್ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು. ಹ್ಯಾಂಡ್‍ಬಾಲ್, ನೆಟ್‍ಬಾಲ್ ಹಾಗೂ ಖೊಖೊ ಸ್ಪರ್ಧೆಗಳು ವಿದ್ಯಾನಗರದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಂಗಣದಲ್ಲಿ, ರೈಫಲ್ ಶೂಟಿಂಗ್ ಭಾರತೀಯ ಕ್ರೀಡಾ ಪ್ರಾಧಿಕಾರದ ದಕ್ಷಿಣದ ಕೇಂದ್ರದಲ್ಲಿ, ಸೈಕ್ಲಿಂಗ್ ನೈಸ್ ರಸ್ತೆಯಲ್ಲಿ, ಫುಟ್ಬಾಲ್ ಕರ್ನಾಟಕ ರಾಜ್ಯ ಅಸೋಸಿಯೇಷನ್ ಸ್ಟೇಡಿಯಂನಲ್ಲಿ, ಜಿಮಾಸ್ಟಿಕ್ ಹೂಡಿಯಲ್ಲಿರುವ ಗೋಪಾಲನ್ ಸ್ಪೋಟ್ರ್ಸ್ ಕೇಂದ್ರದಲ್ಲಿ, ಸ್ವಿಮ್ಮಿಂಗ್ ಬಸವನಗುಡಿ ಸ್ವಿಮ್ಮಿಂಗ್ ಫೂಲ್‍ನಲ್ಲಿ ಹಾಗೂ ಹಾಕಿ ಶಾಂತಿನಗರದಲ್ಲಿರುವ ಹಾಕಿ ಸ್ಟೇಡಿಯಂನಲ್ಲಿ ನಡೆಯಲಿವೆ. ಉಳಿದ ಸ್ಪರ್ಧೆಗಳು ಶ್ರೀ ಕಂಠೀರವ ಸ್ಟೇಡಿಯಂ ಸ್ಪೋಟ್ರ್ಸ್ ಕಾಂಪ್ಲೆಕ್ಸ್‍ನಲ್ಲಿ ನಡೆಯಲಿದೆ ಎಂದರು.
ಈ ಒಲಂಪಿಕ್ಸ್ ಕ್ರೀಡಾಕೂಟವನ್ನು ಮೇ 16ರಂದು ಸಂಜೆ 4.30 ಗಂಟೆಗೆ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾ ಡಾ. ಕೆ.ಸಿ.ನಾರಾಯಣಗೌಡರು ಉದ್ಘಾಟನೆ ಮಾಡಲಿದ್ದಾರೆ ಎಂದರು.
ಪತ್ರಿಕಾ ಗೊಷ್ಠಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಆಯುಕ್ತರಾದ ಡಾ. ಹೆಚ್.ಎನ್. ಗೋಪಾಲಕೃಷ್ಣ ಉಪಸ್ಥಿತರಿದ್ದರು.
ರೋಲರ್ ಸ್ಟೇಟಿಂಗ್ ಮೂಲಕ ಕಾರ್ಮಿಕ ಹಾಗೃತಿ ಅಭಿಯಾನ
ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಕಾರ್ಮಿಕ ಇಲಾಖೆಯು ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಾದ ಕಾರ್ಮಿಕ ಅದಾಲತ್, ಉಚಿತ ಆರೋಗ್ಯ ತಪಾಸಣೆ, ಶಿಶುಪಾಲನಾ ಕೇಂದ್ರ ಸ್ಥಾಪನೆ, ಸಂಚಾರಿ ಮೊಬೈಲ್ ಕ್ಲಿನಿಕ್, ಸುರಕ್ಷಾ ಕಿಟ್ / ಟೂಲ್ ಕಿಟ್ ವಿತರಣೆ ಹಾಗೂ ಇನ್ನಿತರ ಹಲವು ಯೋಜನೆಗಳ ಕುರಿತು ಕಾರ್ಮಿಕರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲಾ ರೋಲರ್ ಸ್ಟೇಟಿಂಗ್ ಅಸೋಸಿಯೇಷನ್ (ರಿ), ಕಾರವಾರ ಹಾಗೂ ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಕಾರ್ಮಿಕ ಇಲಾಖೆಯ ಕಾರ್ಯಚಟುವಟಿಕೆಗಳನ್ನು ಪ್ರಚಾರಪಡಿಸಲು ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ 63 ಕ್ರೀಡಾಪಟುಗಳ ಮೂಲಕ ಸ್ಕೇಟಿಂಗ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.
ಇದೊಂದು ವಿನೂತನ ಹಾಗೂ ವಿಶೇಷ ಪ್ರಯತ್ನವಾಗಿದ್ದು, ಈ ರಾಅ ಮೂಲಕ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಕುರಿತು ಅರಿವು ಮತ್ತು ಜಾಗೃತಿ ಮೂಡಿಸುವುದರೊಂದಿಗೆ ಸ್ಕೇಟಿಂಗ್ ಕ್ರೀಡಾಪಟುಗಳಿಗೆ ಪೆÇ್ರೀತ್ಸಾಹ ನೀಡಿದಂತಾಗಿದೆ.
ಈ ರ್ಯಾಲಿಯು ಮೇ 6 ರಂದು ಕಾರವಾರದಿಂದ ಪ್ರಾರಂಭಿಸಿ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಮೂಲಕ ಮೇ 11 ರಂದು ಒಟ್ಟು 620 ಕಿ.ಮೀ ಸ್ಕೇಟಿಂಗ್ ಮೂಲಕ ಕ್ರಮಿಸಿ, ಬೆಂಗಳೂರಿಗೆ ಆಗಮಿಸಿತು.
ರ್ಯಾಲಿಯಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು ಹಾಗೂ ತರಬೇತುದಾರರಿಗೆ ಕಾರ್ಮಿಕ ಸಚಿವರಾದ ಶಿವರಾಮ್ ಹೆಬ್ಬಾರ್ ಹಾಗೂ ಯುವಜನ ಸಬಲೀಕರಣ ಕ್ರೀಡಾ ಸಚಿವರಾದ ಡಾ.ನಾರಾಯಣಗೌಡ ಅವರು ಪ್ರಶಂಸಾ ಪ್ರಮಾಣ ಪತ್ರವನ್ನು ವಿತರಿಸಿದರು.