ಸ್ಥಳ: ಶ್ರೀ ರಾಮರಕ್ಷಾ ಬೆಂಗಳೂರು.
ಶಿಬಿರ ದಿನಾಂಕ: 21st April 2022 ರಿಂದ 1st May 2022ರ ತನಕ
ಸಮಾರೋಪ ಸಮಾರಂಭ: 1st May 2022ಭವ್ಯ ಭಾರತದ ನಿರ್ಮಾಣ ಕರ್ತೃವಾಗಿ ಉನ್ನತಿ ಹೀಲಿಂಗ್ ಫೌಂಡೇಶನ್ ದತ್ತಿ ಸಂಸ್ಥೆಯ ಉದ್ದೇಶ.
ಇಂದಿನ ನಮ್ಮ ಮಕ್ಕಳು ಮತ್ತು ತಂದೆ ತಾಯಿಯರ ಪಾಶ್ಚಾತ್ಯ ಸೆಳೆತದ ಸಂದರ್ಭದಲ್ಲಿ, ಸುಭದ್ರ ಭಾರತದ ನಿರ್ಮಾಣದ ಬುನಾದಿಯನ್ನು ನಮ್ಮ ಸಂಸ್ಕೃತಿಯ, ವಿಚಾರ, ಆಚಾರ ಮತ್ತು ವೇದಗಳ ಜ್ಞಾನದ ಮೂಲಕ ಎಲ್ಲಾ ಮಕ್ಕಳ ಮನಸ್ಸಿನಲ್ಲಿ ವಸುದೈವ ಕುಟುಂಬಕಂ ತತ್ತ್ವವನ್ನು ಮನಮುಟ್ಟುವ ರೀತಿಯಲ್ಲಿ ತಿಳಿಸಿಕೊಡಲಾಗಿದೆ.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ವಾಕ್ಯದ ಯಥಾವತ್ತಾದ ಪರಿಪಾಲನೆ ಇಲ್ಲಿ ಮಾಡಲಾಗಿದೆ. ಮಕ್ಕಳ ಮನಸ್ಸಿನಲ್ಲಿ ಉಂಟಾಗುವ ಭಾವನೆಗಳು, ಕಷ್ಟಗಳನ್ನು ಅರಿತು ಅದಕ್ಕೆ ಸರಿಯಾದ ಮಾರ್ಗವನ್ನು ತಿಳಿಸಿಕೊಡಲಾಗಿದೆ. ಮೊಬೈಲ್ ಅಡಿಕ್ಷನ್ , ಸ್ಟೇಜ್ ಫಿಯರ್, ಚಟುವಟಿಕೆ ಇಲ್ಲದಿರುವುದು, ಭಯ, ಸ್ನೇಹಿತರೊಂದಿಗೆ ಹೊಂದಾಣಿಕೆ ಇಲ್ಲದಿರುವುದು ಹಾಗೂ ಮುಟ್ಟಿನ ಬಗೆಗಿನ ತಪ್ಪು ಕಲ್ಪನೆಗಳು ಮುಂತಾದ ವಿಷಯಗಳು ಇಂದಿನ ಹದಿಹರೆಯದ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ ಅದು ಮನಸ್ಸಿಗೆ ಸಂಬಂಧಪಟ್ಟಿದ್ದರೂ ಸಹ ಆಧುನಿಕ ವಿಜ್ಞಾನ ಅದನ್ನು ಸರಿಪಡಿಸುವಲ್ಲಿ ಬಹಳ ಸಮಯ ತೆಗೆದುಕೊಳ್ಳುತ್ತದೆ ಹಾಗೂ ಪರಿಪೂರ್ಣತೆಯನ್ನು ಗಳಿಸುವುದು ಗಗನ ಕುಸುಮವೇ ಸರಿ.
ಇವೆಲ್ಲವುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಉನ್ನತಿ ಹೀಲಿಂಗ್ ಫೌಂಡೇಶನ್ ದತ್ತಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ ಸರಸ್ವತಿ ಹೆಗಡೆಯವರು ,ಇದು ನನ್ನ ಸಮಾಜಕ್ಕೆ ನನ್ನ ಕೊಡುಗೆ (ಸಮಾಜ ಋಣ) ಎಂದು ಭಾವಿಸಿ, ಸ್ವರ್ಣವಲ್ಲಿ ಸಂಸ್ಥಾನ, ಉನ್ನತಿ ಹೀಲಿಂಗ್ ಫೌಂಡೇಶನ್ ಮತ್ತು ಮಾತೃ ಮಂಡಳಿ ಸಹಯೋಗದಲ್ಲಿ ಹೆಣ್ಣುಮಕ್ಕಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ,ವೇದವೇ ವಿಜ್ಞಾನ, ಜ್ಞಾನದಿಂದ ಭಾರತ ಹಾಗೂ ಮಕ್ಕಳೇ ನಮ್ಮ ಭವ್ಯ ಭಾರತದ ಉಸಿರು ಮತ್ತು ಹೆಸರು ಎನ್ನುವ ಪರಿಕಲ್ಪನೆಯಲ್ಲಿ ಬಿಲ್ಡ್ ಇಂಡಿಯಾ ಚಳುವಳಿಯ ಭಾಗವಾಗಿ ಸಂಸ್ಕೃತಿ ಶಿಬಿರವನ್ನು," ಕುಮಾರಿ ಸಂಸ್ಕೃತಿ" ಎನ್ನುವ ಶೀರ್ಷಿಕೆಯಲ್ಲಿ ಆಯೋಜಿಸಿ,ಇದರ ಎಲ್ಲಾ ಅನುಕೂಲಗಳನ್ನು ಮಕ್ಕಳಿಗೆ ತಲುಪಿಸಿದ್ದಾರೆ. ಈ ಮೇಲೆ ವ್ಯಕ್ತಪಡಿಸಿದ ಹಲವಾರು ಕಷ್ಟಗಳನ್ನು ಅಂದರೆ ಸ್ಕ್ರೀನ್ ಅಡ್ಡಿಕ್ಷನ್, ಸ್ನೇಹಿತರೊಂದಿಗೆ ಹೊಂದಾಣಿಕೆ ಇಲ್ಲದಿರುವುದು, ಸ್ಟೇಜ್ ಮೇಲೆ ಮಾತನಾಡಲು ಭಯ ಇತ್ಯಾದಿ ಗಳನ್ನು ಕೇವಲ ಹತ್ತು ದಿನಗಳಲ್ಲಿ ಹಲವಾರು ಚಟುವಟಿಕೆಗಳ ಮುಖಾಂತರ ಹೋಗಲಾಡಿಸಿ, ಒಂದು ಹೊಸ ಮನ್ವಂತರ ವನ್ನು ಹುಟ್ಟುಹಾಕಿದ್ದಾರೆ. ಈ ಕಾರ್ಯಕ್ರಮದ ಮೂಲಕ ಡಾ. ಸರಸ್ವತಿ ಹೆಗಡೆಯವರು ತಮ್ಮ ಸಮಾಜದ ಒಂದು ಋಣವನ್ನು ತೀರಿಸಲು ಪ್ರಯತ್ನಪಟ್ಟಿದ್ದಾರೆ. ಇದು ಹಲವರಿಗೆ ತಮ್ಮ ಸಮಾಜದ ಬಗೆಗಿನ ಜವಾಬ್ದಾರಿಯನ್ನು ಅರಿಯಲು ಮತ್ತು ತಿಳಿಸಲು ಒಂದು ದಾರಿದೀಪವಾಗಿದೆ.
ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನಂ, ಶ್ರೀ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಆಶೀರ್ವಚನ:
ಸನಾತನ ಧರ್ಮ ನಿಂತಿರುವುದು ಋಷಿ ವಾಕ್ಯದ ಮೇಲೆ. ಜೀವನದ ಎಲ್ಲಾ ಆಯಾಮಗಳಲ್ಲಿಯು ಋಷಿವಾಕ್ಯದ ಮಾರ್ಗದರ್ಶನವಿದೆ. ಜೀವನಶೈಲಿ, ಆಹಾರ, ಆರೋಗ್ಯ, ಖಗೋಳಶಾಸ್ತ್ರ, ಜ್ಯೋತಿಷ್ಯಾಸ್ತ್ರ ಹೀಗೆ ಅನೇಕ ಆಯಾಮಗಳಲ್ಲಿ ಋಷಿ ವಾಕ್ಯದ ಮಾರ್ಗದರ್ಶನವಿದೆ.
ಇತರ ಧರ್ಮಗಳು ಇದೇ ಮಾರ್ಗ ಅನುಸರಿಸುತ್ತವೆಯಾದರೂ ಕೂಡ ಕೇವಲ ಒಂದೆರಡು ಪ್ರವಾದಿಗಳ ಮಾರ್ಗದರ್ಶನದ ಮೇಲೆ ಆಧರಿಸಿದೆ. ಆದರೆ ಸನಾತನ ಸಂಸ್ಕೃತಿ ಅನೇಕ ಋಷಿಮುನಿಗಳ, ಮಹಾತ್ಮರ ನಿರಂತರ ಕೊಡುಗೆಯಿಂದ ಸಮೃದ್ಧವಾಗಿದೆ. ಹಾಗಾಗಿ ಜೀವನದ ಎಲ್ಲಾ ಆಯಾಮಗಳಿಗೂ ಅನ್ವಯವಾಗುವಂತಹ ಸನಾತನ ಧರ್ಮವನ್ನು ಅನುಸರಿಸುವುದು ಎಲ್ಲಾ ಸಂದರ್ಭಗಳಲ್ಲಿಯೂ ಒಳಿತು. ಇದೆ ಸನಾತನ ಪರಂಪರೆ.
ಹುಟ್ಟುಹಬ್ಬಗಳಂದು ದೀಪ ಆರಿಸಿ ಆಚರಿಸುವ ಸಂಪ್ರದಾಯ ನಮ್ಮದಲ್ಲ. ದೀಪ ಬೆಳಗಿಸಿ ಹುಟ್ಟುಹಬ್ಬ ಆಚರಿಸುವುದು ಶ್ರೇಯಸ್ಕರ. ಹೊಸವರ್ಷದ ಆಚರಣೆಯೆಂದು ಮಧ್ಯರಾತ್ರಿಯಲ್ಲಿ ಮದ್ಯದೊಂದಿಗೆ ಪ್ರಾರಂಭಿಸುವ ಸಂಸ್ಕೃತಿ ನಮ್ಮದಲ್ಲ. ಯುಗಾದಿಯಂದು ಹೊಸ ವರ್ಷದ ಆಚರಣೆ ಸನಾತನ ಪರಂಪರೆ. ಪಾರಂಪರಿಕ ಹಾಗೂ ಗೌರವಯುತ ಉಡುಗೆ-ತೊಡುಗೆಗಳನ್ನು ಸಾಂಪ್ರದಾಯಿಕ ಆಚರಣೆಗಳಲ್ಲಿ ಅಳವಡಿಸಿಕೊಳ್ಳುವುದರ ಬಗ್ಗೆ ಒತ್ತು ನೀಡಿದರು.
ಶಿಬಿರದಲ್ಲಿ ಕಲಿತ ದಿನಚರಿ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಅಳವಡಿಸಿಕೊಳ್ಳುವುದು ಅವರ ಜೀವನಕ್ಕೆ ಶ್ರೇಯಸ್ಸನ್ನು ಉಂಟುಮಾಡುತ್ತದೆ ಎಂದು ಮಕ್ಕಳನ್ನು ಆಶೀರ್ವದಿಸಿದರು.