ಬೆಂಗಳೂರು 14 ಮೇ,2022: ವಿದ್ಯಾರ್ಥಿಗಳು ಶಿಕ್ಷಣ ಮತ್ತು ಕ್ರೀಡೆಗಳ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಉತ್ಸಾಹದಿಂದ ಭಾಗವಹಿಸುವ ಮೂಲಕ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕರೆ ನೀಡಿದರು.
ಬೆಂಗಳೂರಿನ ಸೇಂಟ್ ಜೋಸೆಫ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ 25 ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಣ, ಕೌಶಲ್ಯ ಮತ್ತು ನೈತಿಕ ಮೌಲ್ಯಗಳ ಮೂಲಕ ನವ ಭಾರತ, ಶ್ರೇಷ್ಠ ಭಾರತ, ಸ್ವಾವಲಂಬಿ ಭಾರತವನ್ನು ನಿರ್ಮಾಣ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಬದ್ಧವಾಗಿದೆ. ಯುವಕರು ದೇಶದ ಭವಿಷ್ಯ ಹಾಗೂ ದೇಶದ ಅಭಿವೃದ್ಧಿಯ ಪ್ರಮುಖ ಭಾಗ. ಯುವಕರನ್ನು ನುರಿತರನ್ನಾಗಿಸುವ ಮೂಲಕವೇ ನಾವು ವೋಕಲ್ ಫಾರ್ ಲೋಕಲ್ ಎಂಬ ದಿಕ್ಕಿನಲ್ಲಿ ಮುನ್ನಡೆಯಬಹುದು ಎಂದು ಹೇಳಿದರು.
ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ಎರಡನೇ ಆವೃತ್ತಿಯನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಕ್ರೀಡೆ, ಶಿಕ್ಷಣ ಹಾಗೂ ಕೌಶಲ್ಯದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಅನೇಕ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ಅಪ್ ಮತ್ತು ಸ್ಟ್ಯಾಂಡ್ ಅಪ್, ವೆಂಚರ್ ಕ್ಯಾಪಿಟಲ್ ಫಂಡ್ ಯೋಜನೆಗಳನ್ನು ಬಳಸಿಕೊಂಡು ಶ್ರೇಷ್ಠ ಭಾರತ, ನವ ಭಾರತ ಮತ್ತು ಸ್ವಾವಲಂಬಿ ಭಾರತವನ್ನು ರಚಿಸಬಹುದು ಎಂದು ಹೇಳಿದರು.
ಪ್ರಸ್ತುತ ದಿನಮಾನಗಳಲ್ಲಿ ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸುವುದು ಅತ್ಯಗತ್ಯ. ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಉತ್ತೇಜಿಸಬೇಕು, ಮಾನವೀಯ ಮೌಲ್ಯಗಳನ್ನು ಬಿತ್ತಬೇಕು ಹಾಗೂ ಪರಿಸರ ಮತ್ತು ಜಲ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ದೇಶವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಎಂದು ಆಚರಿಸುತ್ತಿದೆ. ಸ್ವಾತಂತ್ರ್ಯ ಚಳವಳಿಯ ಇತಿಹಾಸದಂತೆಯೇ 75 ವರ್ಷಗಳ ಪಯಣವು ಭಾರತೀಯರ ಕಠಿಣ ಪರಿಶ್ರಮ, ನಾವೀನ್ಯತೆ, ಉದ್ಯಮಶೀಲತೆಯ ಪ್ರತಿಬಿಂಬವಾಗಿದೆ. ಭಾರತದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯು ವಿಶ್ವದ ಆಕರ್ಷಣೆಯ ಕೇಂದ್ರವಾಗಿದೆ. ಭಾರತದ ಸಾಮರ್ಥ್ಯ ಮತ್ತು ಭಾರತದ ಪ್ರತಿಭೆ ಪ್ರಪಂಚದ ಪ್ರತಿಯೊಂದು ಹಂತದಲ್ಲೂ ಪ್ರತಿಧ್ವನಿಸುತ್ತಿದೆ ಎಂದ ಅವರು, ಭವಿಷ್ಯ, ಕನಸು, ಕಲ್ಪನೆ, ದೃಷ್ಟಿ, ಮಹತ್ವಾಕಾಂಕ್ಷೆ, ಗುರಿ ಮತ್ತು ತಂಡದೊಂದಿಗೆ ಯಶಸ್ಸು ಸಿಗಲಿದೆ ಎಂದರು.
ಪ್ರಾಂತೀಯ ಅಧ್ಯಕ್ಷ, ಫಾದರ್ ಡಿಯೋನಿಸಿಯಸ್ ವಾಜ್, ನಿರ್ದೇಶಕ ಡಾ. ಮನೋಜ್ ಡಿಸೋಜಾ, ಡೀನ್ ಡಾ. ಎ. ಆರ್. ರಾಜಗೋಪಾಲನ್, ಡಾ. ಎ ಅನಂತರಾಮನ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.