ಬಳ್ಳಾರಿ ಮೇ 03.ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿ ಜನರ ಮೌಡ್ಯಗಳನ್ನು ಅನುಭವ ಮಂಟಪ, ವಚನಗಳ ಮೂಲಕ ವರ್ಣಿಸುವ ಸಾಮಾಜಿಕ ಕ್ರಾಂತಿಕಾರಿಯಾಗಿದ್ದರು. ಅವರು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಮನುಕುಲಕ್ಕೆ ನೀಡಿದ ಕೊಡುಗೆ ಅಪಾರ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ರಮೇಶ್ ಓಲೇಕಾರ್ ಅವರು ಹೇಳಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವಣ್ಣನವರ 889ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಪುಷ್ಪಾರ್ಚಣೆ ಮಾಡುವ ಮುಖಾಂತರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಡೊಂಕುಗಳನ್ನು ತಿದ್ದಿ ಸಮಾನತೆಯನ್ನು ಬೋದಿಸಿದ ಬಸವಣ್ಣನವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಬಸವಣ್ಣನವರು ತೋರಿದ ಕಾಯಕವೇ ಕೈಲಾಸವೆಂಬ ಹಾದಿಯಲ್ಲಿ ನಡೆಯುತ್ತಾ ಸಮಾನತೆಯ ತತ್ವಗಳನ್ನು ಪಾಲಿಸೋಣ ಎಂದು ಹೇಳಿದರು.ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಘಟಕದ ಸಂಯೋಜಕರಾದ ಡಾ. ಅರುಣಕುಮಾರ ಲಗಶೆಟ್ಟಿ ಮಾತನಾಡಿ ಬಸವಣ್ಣನವರು ವಚನಗಳು ರಚನೆಯಾಗಿ ಹಲವಾರು ವರ್ಷಗಳಾಗಿದ್ದರು ಅವು ಇಂದಿಗೂ ಪ್ರಸ್ತುತವಾಗಿವೆ. ಅವರ ವಚನ ಸಾಹಿತ್ಯವು ಬಾರತವಷ್ಟೇ ಅಲ್ಲದೆ ವಿಶ್ವದಲ್ಲಡೆ ಆವರಿಸಿವೆ. ಅವರ ವಚನಗಳು ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸಾರುತ್ತವೆ ಎಂದರು.
ಈ ಕಾರ್ಯಕ್ರಮವನ್ನು ಡಾ. ಅರುಣಕುಮಾರ ಲಗಶೆಟ್ಟಿ ನಿರೂಪಿಸಿ, ವಂದಿಸಿದರು. ಪ್ರೊ. ಜೆ ತಿಪ್ಪೇರುದ್ರಪ್ಪ, ಡಾ. ಶಶಿಕಾಂತ ಮಜಗಿ, ಪ್ರೊ. ವಿಜಯಕುಮಾರ ಮಲಶೆಟ್ಟಿ, ಡಾ. ಉದಯಕುಮಾರ ಖಡಕೆ ಉಪಸ್ಥಿತರಿದ್ದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.