ಮೈಸೂರು 25 ಏಪ್ರಿಲ್ 2022: ಆತ್ಮ ನಿರ್ಭರ ಭಾರತ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬ ಪ್ರಜೆಯೂ ಕೂಡ ತನ್ನ ಜವಾಬ್ದಾರಿಯನ್ನು ಅರಿತು ಕೆಲಸ ನಿರ್ವಹಿಸಿದಾಗ ಮಾತ್ರ ಉತ್ಕೃಷ್ಟ ಹಾಗೂ ಶ್ರೇಷ್ಠ ಭಾರತವನ್ನು ಕಟ್ಟಲು ಸಾಧ್ಯ ಎಂದು ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.
ಅವರು ಇಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಘಟಿಕೋತ್ಸವ ಭವನದಲ್ಲಿ ವಿಶ್ವವಿದ್ಯಾನಿಲಯದ ಹದಿನೇಳನೆ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಶ್ವವಿದ್ಯಾನಿಲಯವು ಸಾಮರ್ಥ್ಯ ರಾಷ್ಟ್ರೀಯ ಜವಾಬ್ದಾರಿಯ ಜೊತೆಜೊತೆಗೆ ಎಲ್ಲರಿಗೂ ಎಲ್ಲಾ ಕಡೆಯಲ್ಲೂ ಉನ್ನತ ಶಿಕ್ಷಣವನ್ನು ನೀಡುತ್ತಿರುವುದು ಪ್ರಶಂಸನೀಯವಾಗಿದೆ ಎಂದು ಅವರು ತಿಳಿಸಿದರು.
ಗುರುಗಳ ಮಾರ್ಗದರ್ಶನ ತಂದೆ-ತಾಯಿ ಪರಿವಾರ ಸಹಯೋಗದಿಂದ ವಿದ್ಯಾರ್ಧಿಗಳು ಸಾಧನೆಯ ಮಟ್ಟ ಮುಟ್ಟಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಿ ಸಮಾಜ ಹಾಗೂ ಪೋಷಕರಿಗೆ ಗೌರವ ತಂದು ಕೊಡಬೇಕು ಎಂದು ಅವರು ತಿಳಿಸಿದರು.
ವಿವಿಧ ವಿಷಯಗಳಲ್ಲಿ ಪದವಿ ಪಡೆದ 8,338 ಅಭ್ಯರ್ಥಿಗಳಿಗೆ ಪದವಿ ಪ್ರದಾನಿಸಲಾಯಿತು. ಇದರಲ್ಲಿ 3,272 ಪುರುಷರು ಮತ್ತು 5,066ಮಹಿಳಾ ಅಭ್ಯರ್ಥಿಗಳು ಇದ್ದಾರೆ. 31 ಮಂದಿಗೆ ಪಿಹೆಚ್ ಡಿ ಪದವಿ ಪ್ರದಾನಿಸಲಾಯಿತು. 48 ಅಭ್ಯರ್ಥಿಗಳಿಗೆ ಚಿನ್ನದ ಪದಕ, 38 ಅಭ್ಯರ್ಥಿಗಳಿಗೆ ನಗದು ಬಹುಮಾನ ಪ್ರದಾನಿಸಲಾಯಿತು.
ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಗೌರವಾನ್ವಿತ ಕಾರ್ಯದರ್ಶಿ ಎ.ವಿ.ಎಸ್.ಮೂರ್ತಿ, ಟಾಟಾ ಗ್ಲೋಬಲ್ ಸಂಪನ್ಮೂಲ ನಿರ್ವಹಣಾ ಸಂಸ್ಥೆಯ ಉಪಾಧ್ಯಕ್ಷ ಈ.ಎಸ್.ಚಕ್ರವರ್ತಿ, ವಿಆರ್ ಎಲ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸಂಕೇಶ್ವರ್ ಇವರುಗಳಿಗೆ ಗೌರವ ಡಾಕ್ಟರೇಟ್ ಪ್ರದಾನಿಸಲಾಯಿತು.