ಬೆಂಗಳೂರು ; ತಂತ್ರಜ್ಞಾನ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಸಂಪರ್ಕ ವ್ಯವಸ್ಥೆ ಶರವೇಗದಲ್ಲಿದೆ. ಜಗತ್ತಿನಲ್ಲಿ ಪ್ರತಿದಿನ ಐದು ಟ್ರಿಲಿಯನ್ ಸಂದೇಶಗಳು ವಿನಿಮಯವಾಗುತ್ತಿವೆ ಎಂದು ಎಚ್.ಆರ್. ಕ್ಯಾಪ್ಜೆಮಿನಿ ಇಂಜಿನಿಯರಿಂಗ್ ಸಂಸ್ಥೆಯ ಹಿರಿಯ ನಿರ್ದೇಶಕ ಎಸ್.ಜೆ. ನಾಗನಗೌಡರ್ ಹೇಳಿದ್ದಾರೆ.
ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 18 ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಪ್ರತಿದಿನ ವಿನಿಮಯವಾಗುವ ಸಂದೇಶಗಳನ್ನು ಸಂಗ್ರಹಿಸುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಕ್ಕಾಗಿ ಎಲ್ಲೆಡೆ ಕ್ಲೌಡ್ ತಂತ್ರಜ್ಞಾನವನ್ನು ಅತ್ಯುತ್ತಮವಾಗಿ ಬಳಕೆ ಮಾಡಿಕೊಳ್ಳುತ್ತಿದ್ದು, ಈ ವಲಯಕ್ಕೆ ಉಜ್ವಲ ಭವಿಷ್ಯವಿದೆ ಎಂದರು.
ಕಳೆದ 1995 ರಲ್ಲಿ ತಂತ್ರಜ್ಞಾನ ಪ್ರತಿ ಮೂರು ವರ್ಷಗಳಿಗೊಮ್ಮೆ ಬದಲಾಗುತ್ತಿತ್ತು. ಇದೀಗ ಪ್ರತಿ ಮೂರು ವಾರಗಳಿಗೆ ಬದಲಾವಣೆ ಕಾಣುತ್ತಿದ್ದೇವೆ. ಮಾಹಿತಿಯನ್ನು ಜ್ಞಾನವನ್ನಾಗಿ ಪರಿವರ್ತಿಸಿಕೊಂಡು ಮುನ್ನಡೆಯುವ ಚಾಕಚಕ್ಯತೆಯನ್ನು ಬೆಳೆಸಿಕೊಳ್ಳಬೇಕು. ಭಾರತ ತಂತ್ರಜ್ಞಾನದಲ್ಲಿ ಅತ್ಯಂತ ಮಂಚೂಣಿಯಲ್ಲಿದ್ದು, ಪ್ರತಿವರ್ಷ 1.4 ದಶಲಕ್ಷ ಇಂಜಿನಿಯರ್ ಗಳು ಹೊರಬರುತ್ತಿದ್ದಾರೆ. ಐರೋಪ್ ರಾಷ್ಟ್ರದ ಜನಸಂಖ್ಯೆಯಷ್ಟು ಹೊಸ ತಂತ್ರಜ್ಞರು ನಮ್ಮಲ್ಲಿ ತಯಾರಾಗುತ್ತಿದ್ದಾರೆ ಎಂದು ಹೇಳಿದರು.
ನಾವು ತಾಂತ್ರಿಕವಾಗಿ ಎಷ್ಟೇ ಬದಲಾಗುತ್ತಿದ್ದರೂ ಸಹ ಸಾಮಾನ್ಯ ಪ್ರಜ್ಞೆಯಲ್ಲಿ ತೀರಾ ಹಿಂದುಳಿದಿದ್ದೇವೆ. ರಷ್ಯಾ – ಉಕ್ರೇನ್ ನಡುವಿನ ಯುದ್ಧದಿಂದ ಮನಸ್ಸು ಕಸಿವಿಸಿಗೊಂಡಿದೆ. ಪರಿಸ್ಥಿತಿ ಹೇಗೆಯೇ ಇರಲಿ, ಸವಾಲುಗಳು ಹೇಗೆಯೇ ಬರಲಿ ನಾವು ಸಕಾರಾತ್ಮಕ ಮನೋಭಾವನೆಯಿಂದ ಮುನ್ನಡೆದಾಗ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ವಿದ್ಯಾಶಂಕರ್ ಘಟಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಪದವಿ ಪಡೆದ ನಂತರ ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಮಾರ್ಗ ತೆರೆದುಕೊಳ್ಳಲಿದೆ. ವೃತ್ತಿ, ಪ್ರವೃತ್ತಿ, ಬದುಕಿನ ವಿವಿಧ ಆಯಾಮಗಳ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಮಯ ಇದಾಗಿದೆ ಎಂದು ಹೇಳಿದರು.
ಹೊಸ ತಂತ್ರಜ್ಞಾನ, ಹೊಸ ಜ್ಞಾನ ಕಲಿಯಲು ಇದೀಗ ವೇದಿಕೆ ಸನ್ನದ್ಧವಾಗಿದೆ. ಮುಂದೆ ಹೊಸ ಹೊಸ ಅವಕಾಶಗಳು ದೊರೆಯಲಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಂಡು ಮುನ್ನಡೆಯುವಂತೆ ಕಿವಿ ಮಾತು ಹೇಳಿದರು.
ಕಂಪ್ಯೂಟರ್ ಸೈನ್ಸ್ ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿವೆನ್ನಾ, ಇನ್ಫರ್ಮೇಷನ್ ಸೈನ್ಸ್ ನಲ್ಲಿ ತಬಿವುರ್ ಅಹಮದ್, ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿ ಕಮ್ಯುನಿಕೇಷನ್ ನಲ್ಲಿ ಯುಕ್ತಾ, ಎಂ.ಬಿ.ಎ ನಲ್ಲಿ ವೆನಿಲಾ. ಯು, ಮ್ಯಾಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಭರತ್ ಜ್ಯೋತಿ, ಸಿವಿಲ್ ಇಂಜಿಯರಿಂಗ್ ನಲ್ಲಿ ತೌರಿಕ್ ಅಹಮದ್ ಸೇರಿ ಹಲವು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಇವರನ್ನು ಸನ್ಮಾನಿಸಲಾಯಿತು.
ಏಟ್ರಿಯಾ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ಅಧ್ಯಕ್ಷ ಸಿ.ಎಸ್. ಸುಂದರ ರಾಜು, ತಾಂತ್ರಿಕ ನಿರ್ದೇಶಕ ಕೌಶಿಕ್ ಎಸ್. ರಾಜು, ಟ್ರಸ್ಟಿ ಕೆ. ನಾಗರಾಜು, ಪ್ರಾಂಶುಪಾಲರಾದ ಡಾ. ಟಿ.ಎನ್. ಶ್ರೀನಿವಾಸ, ಸಿಇಒ ಶಹೀನ್ ರೆಹಮಾನ್ ಹಾಗೂ ವಿಧಾನಪರಿಷತ್ತಿನ ಮಾಜಿ ಸದಸ್ಯ, ಪತ್ರಕರ್ತ ಪಿ. ರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.