ಮಧುಗಿರಿ - ವಿದ್ಯೆ ಕದಿಯಲಾಗದ ವಸ್ತುವಾಗಿದ್ದು, ವಿಧ್ಯಾರ್ಜನೆಗೆ ಬಡತನ ಎಂಬುದು ಎಂದಿಗೂ ಅಡ್ಡಿ ಬರುವುದಿಲ್ಲ, ಛಲ- ಶ್ರಮ ಹೊಂದಿದ್ದರೆ ಅಚಲವಾದ ಗುರಿ ಮುಟ್ಟುವುದು ಸಾಧ್ಯವೆಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಶನಿವಾರದಂದು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ 2021-22ನೇ ಸಾಲಿನ ಸಾಂಸ್ಕøತಿಕ ಉತ್ಸವ ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯೆ, ಇಂಜಿನಿಯರ್, ಐಎಎಸ್,ಕೆಎಎಸ್ ಆಗಬೇಕು ಎಂದೇನಿಲ್ಲ, ಏನೇ ಓದಿ ಆ ವಿಷಯದಲ್ಲಿ ಪರಿಣಿತಿ ಹೊಂದಿದರೆ ಸಾಕು ದೇಶದಲ್ಲಿ ಪ್ರಸ್ತುತ ವಿಪುಲವಾದ ಅವಕಾಶಗಳಿದ್ದು, ಸರ್ಕಾರವು ಸಹಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಕಷ್ಟ ಬಂದರೂ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬೇಡಿ ಎಂದರು.
ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ವಿದ್ಯೆ ಕಲಿತವನು ಸುಸಂಸ್ಕೃತ ಸತ್ಪ್ರಜೆಯಾಗುವುದರ ಜೊತೆಗೆ ಸಮಾಜದಲ್ಲಿ ಒಳ್ಳೆಯ ಸ್ಥಾನ ಗಳಿಸುತ್ತಾನೆ. ಇದರ ಹಿಂದೆ ತಂದೆ ತಾಯಿ ಶಿಕ್ಷಕರ ಶ್ರಮ ಸಾಕಷ್ಟಿದ್ದು, ಅವರುಗಳ ಭರವಸೆಯನ್ನು ಹುಸಿಗೊಳಿಸಬೇಡಿ ಎಂದು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಜಿ.ಅಶ್ವತ್ಥನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ತುಂಗೋಟಿ ರಾಮಣ್ಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ Prof. ಡಿ.ಎಸ್.ಮುನೀಂದ್ರಕುಮಾರ್, ಪುರಸಭಾ ಸದಸ್ಯರಾದ ಎಂ.ಆರ್.ಜಗನ್ನಾಥ್, ಕೆ.ನಾರಾಯಣ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಚ್.ವೆಂಕಟೇಶಯ್ಯ, ನಿವೃತ್ತ ಶಿಕ್ಷಕ ಡಿ.ಎಸ್.ಸಿದ್ದಪ್ಪ ಹಾಗೂ ಮುಂತಾದವರು ಇದ್ದರು.
-ವರದಿ:ನಾಗೇಶ್ ಜೀವಾ ಮಧುಗಿರಿ