ಪಿಯುಸಿಯಲ್ಲಿ ಶೇಕಡ 95ರಷ್ಟು ಅಂಕ ಗಳಿಸಿದರೂ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿಲ್ಲ. ಮೆನೇಜ್ಮೆಂಟ್ ಸೀಟು ಪಡೆಯಲು ದುಬಾರಿ ಹಣ ಕಟ್ಟಬೇಕಾಗುತ್ತದೆ. ಅದಕ್ಕಾಗಿ ವಿದ್ಯಾರ್ಥಿಗಳು ಬೇರೆ ಬೇರೆ ದೇಶಗಳಿಗೆ ಕಲಿಯಲು ಹೋಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿರುವುದು ಅವರ ಅಸಹಾಯಕತೆಯನ್ನು ಬಿಂಬಿಸುತ್ತದೆ.
ತಕ್ಷಣವೇ ವಿಧಾನಸಭಾ ಅಧಿವೇಶನದಲ್ಲಿ ಕರ್ನಾಟಕದ ಮೆಡಿಕಲ್ ಕಾಲೇಜುಗಳಲ್ಲಿ ಶೇ 75 ರಷ್ಟು ಸೀಟುಗಳನ್ನು ಕರ್ನಾಟಕದವರಿಗೆ ಮೀಸಲಿಡುವ ನಿರ್ಣಯವನ್ನು ಕೈಗೊಂಡು ಅದನ್ನು ಕೇಂದ್ರ ಸರ್ಕಾರ ಮತ್ತು ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಗೆ ಕಳುಹಿಸಬೇಕು ಎಂದು ಸರ್ಕಾರವನ್ನು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.
ನೀಟ್ ಪರೀಕ್ಷೆಯಿಂದಾಗಿ ಕರ್ನಾಟಕ ಮಾತ್ರವಲ್ಲ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಬಹಳ ಅನ್ಯಾಯವಾಗುತ್ತಿದೆ.
ವಾಸ್ತವವಾಗಿ ಅತಿ ಹೆಚ್ಚು ಮೆಡಿಕಲ್ ಕಾಲೇಜುಗಳನ್ನು ಹೊಂದಿರುವ ನಮ್ಮ ರಾಜ್ಯದಲ್ಲಿ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ನೀಟ್ ನಿಂದಾಗಿ ವಂಚನೆಯಾಗುತ್ತಿದೆ. ಇದನ್ನು ಸರಿಪಡಿಸಬೇಕಾದ ರಾಜ್ಯ ಬಿಜೆಪಿ ಸರ್ಕಾರ ಮೌನವಹಿಸಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.
ಇದರಿಂದ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಹಾಗೆಯೇ ಸಾವಿರಾರು ವಿದ್ಯಾರ್ಥಿಗಳು ನೀಟ್ ಉತ್ತೀರ್ಣರಾಗದೇ ವಿದೇಶಗಳಿಗೆ ಮೆಡಿಕಲ್ ಕಲಿಯಲು ಗುಳೆ ಹೋಗುತ್ತಿದ್ದಾರೆ.
ನೀಟ್ ಪರೀಕ್ಷೆಯಿಂದ ಇಷ್ಟೆಲ್ಲಾ ಅನ್ಯಾಯ ಮತ್ತು ಅವಾಂತರ ಆಗುತ್ತಿದ್ದರೂ ರಾಜ್ಯ ಬಿಜೆಪಿ ಸರ್ಕಾರ ಹಾಗೂ ರಾಜ್ಯದ 25 ಜನ ಬಿಜೆಪಿ ಲೋಕಸಭಾ ಸದಸ್ಯರು ಬಾಯಿ ಮುಚ್ಚಿ ಕುಳಿತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದ್ದಾರೆ.
ರಾಜ್ಯದ ವಿದ್ಯಾರ್ಥಿಗಳ ಹಿತ ಕಾಯುವುದು ರಾಜ್ಯ ಸರ್ಕಾರ ಮತ್ತು ರಾಜ್ಯವನ್ನು ಪ್ರತಿನಿಧಿಸುವ ಸಂಸದರ ಕರ್ತವ್ಯ .
ತಕ್ಷಣ ಈಗ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಕೇಂದ್ರ ಸರಕಾರ ಮತ್ತು ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದ್ದಾರೆ.
ಹಾಗೆಯೇ ಮೆಡಿಕಲ್ ಕಾಲೇಜುಗಳ ಮೆನೇಜ್ಮೆಂಟ್ ಕೋಟಾದಲ್ಲಿ ಕೋಟಿ ಕೋಟಿ ರೂಪಾಯಿಗಳನ್ನು ವಸೂಲಿ ಮಾಡುತ್ತಿರುವ ಮೆಡಿಕಲ್ ಕಾಲೇಜುಗಳ ಮಾಫಿಯಾವನ್ನು ಬಗ್ಗುಬಡಿಯುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಉಕ್ರೇನ್ ನಂತ ಪುಟ್ಟ ರಾಜ್ಯದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣವನ್ನು ಕಲಿಯಬಹುದಾದರೆ ನಮ್ಮ ದೇಶದಲ್ಲಿ ಏಕೆ ಸಾಧ್ಯವಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಈ ನಿಟ್ಟಿನಲ್ಲಿ ಆಲೋಚಿಸಿ ದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡಿರುವ ಮೆಡಿಕಲ್ ಮಾಫಿಯಾವನ್ನು ಮಟ್ಟಹಾಕಿ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡಲು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಮುಂದಾಗಲಿ ಎಂದು ಬಹುಜನ ಸಮಾಜ ಪಾರ್ಟಿ ಆಗ್ರಹಿಸುತ್ತದೆ ಎಂದಿದ್ದಾರೆ.