ಹುಬ್ಬಳ್ಳಿ 14: ಜೂನ್‍ನಲ್ಲಿ ನಡೆಯುವ ಪಶ್ಚಿಮ ಶಿಕ್ಷಕ ಮತಕ್ಷೇತ್ರದ ಚುನಾವಣಾ ಅಭ್ಯಥಿಯಾಗಿ ನನ್ನನ್ನು ಎಂಟನೇ ಬಾರಿ 1980 ರಿಂದ ಇಲ್ಲಿಯವರೆಗೆ ಸತತವಾಗಿ ಅವಿರೋಧವಾಗಿ ಆಯ್ಕೆ ಮಾಡುತ್ತ ಬಂದಿರುವ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ವಿವಿಧ ಶಿಕ್ಷಕ ಸಂಘಟನೆಗಳಿಗೆ ಮತ್ತು ಸಮಸ್ತ ಶಿಕ್ಷಕ ಬಂಧುಗಳಿಗೆ ಎಷ್ಟೊಂದು ಕೃತಜ್ಞತೆಗಳನ್ನು ಸಲ್ಲಿಸಿದರೂ ಕಡಿಮೆಯೇ ಎಂದು ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ತಮ್ಮ ಮನದಾಳದ ಮಾತುಗಳನ್ನು ಹೃದಯತುಂಬಿ ಹೇಳಿದರು.
ಅವರು ರವಿವಾರ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಪ್ರೌಢ ಶಾಲೆಯಲ್ಲಿ ನಡೆದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಕೇಂದ್ರ ಸಮಿತಿಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಳೆದ 42 ವರ್ಷಗಳಿಂದ ನನ್ನನ್ನು ಏಳುಬಾರಿ ಆಯ್ಕೆ ಮಾಡಿ ದೇಶದಲ್ಲಿಯೇ ದಾಖಲೆ ನಿರ್ಮಿಸಿದ್ದೀರಿ. ಅದರೆಲ್ಲ ಶ್ರೇಯಸ್ಸು ಪಶ್ಚಿಮ ಶಿಕ್ಷಕ ಮತಕ್ಷೇತ್ರದ ಸಮಸ್ತ ಶಿಕ್ಷಕರಿಗೆ ಸಲ್ಲುತ್ತದೆ. ಸಾಕಷ್ಟು ಕೆಲಸಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಇಲ್ಲಿಯವರೆಗೆ ಮಾಡುತ್ತಾ ಬಂದಿದ್ದೇನೆ. ಆದರೂ ಇನ್ನಷ್ಟು ಮಾಡುವ ಕೆಲಸಗಳು ಇವೆ. ಮುಂಬರುವ ದಿನಗಳಲ್ಲಿ ಮತ್ತೆ ಹೋರಾಟ ಮಾಡುವ ಮೂಲಕ ಸರಕಾರದ ಗಮನ ಸೆಳೆದು ಅಳಿದುಳಿದ ಕೆಲಸಗಳನ್ನು ಮಾಡುವುದಾಗಿ ಹೇಳಿದರು.ಚುನಾವಣೆ ಸಂದರ್ಭದಲ್ಲಿ ನಾವು ಮಾಡುವ ಕೆಲಸಗಳನ್ನೇ ಶಿಕ್ಷಕರ ಮುಂದಿಟ್ಟು ಮತಗಳನ್ನು ಕೇಳೋಣ ಟೀಕೆ ಟಿಪ್ಪಣಿಗೆ ಅವಕಾಶ ಮಾಡಿಕೊಡುವುದು ಬೇಡ. ನಾವು ನೀವೆಲ್ಲ ಚುನಾವಣೆ ವಿಷಯಕ್ಕೆ ಧೃಡಿಗೆಡುವ ಅವಶ್ಯಕತೆ ಇಲ್ಲ. 42 ವರ್ಷಗಳ ನನ್ನ ಸಾರ್ಥಕ ಸೇವೆಯೇ ನನಗೆ ಶ್ರೀರಕ್ಷೆ. ಯಾರು ಏನೇ ಹೇಳಿದರೂ ನೀವೆಲ್ಲ ನನ್ನೊಂದಿಗೆ ಇರುವಾಗ ನನಗೇಕೆ ಭಯ ನಾನೇಕೆ ದೃತಿಗೆಡಬೇಕು. ನಾನು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ನನ್ನ ಆತ್ಮಸಾಕ್ಷಿ ಹೇಳುತ್ತಿದೆ. ಅದಕ್ಕಾಗಿ ನಾವು ನೀವೆಲ್ಲ ಕಳೆದ 42 ವರ್ಷಗಳಿಂದ ಒಟ್ಟಿಗೆ ಇರಲಿಕ್ಕೆ ಸಾಧ್ಯ. ತಮಗೆಲ್ಲ ಗೊತ್ತಿದೆ ನಾನು ಚುನಾವಣೆ ಬಂದಾಗ ಮಾತ್ರ ಬರುವ ಅಭ್ಯರ್ಥಿಯಲ್ಲ. ದಿನದ 24 ತಾಸು ನಾಡಿನ ಶಿಕ್ಷಕರ ಕೈಗೆ ಸಿಗುವ ಏಕೈಕ ಶಿಕ್ಷಕ ಪ್ರತಿನಿಧಿಯೆಂದರೆ ನಾನೇ ಎಂದು ಅತ್ಯಂತ ಆತ್ಮವಿಶ್ವಾಸದಿಂದ ಹೇಳುತ್ತೇನೆ.
ಇತ್ತೀಚಿನ ಹೋರಾಟಗಳು ತಮ್ಮ ಸಂಘಟನಾ ಶಕ್ತಿಯನ್ನು ಕಳೆದುಕೊಳ್ಳುತ್ತಿವೆ. ಮುಂಬರುವ ದಿನಗಳು ಶಿಕ್ಷಕರ ಪರವಾಗಿ ಇಲ್ಲದೇ ಇರುವುದು ನೋವಿನ ಸಂಗತಿ. ಇಲ್ಲಿಯವರೆಗೆ ನಾವೆಲ್ಲ ಪಡೆದದ್ದು ಹೋರಾಟದಿಂದಲೇ ಎಂಬುದನ್ನು ಯಾರೂ ಮರೆಯಬಾರದು. ಅದಕ್ಕಾಗಿ ಮುಂದಿನ ದಿನಮಾನಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳನ್ನು, ಮನಸ್ತಾಪಗಳನ್ನು ಮರೆತು ಸಂಘಟಿತರಾಗಿ ಹೋರಾಟ ಮಾಡಬೇಕಿದೆ. ಸದಾ ಸಂಘದೊಂದಿಗೆ ಇರಿ ಎಂದು ಇದೇ ಸಂದರ್ಭದಲ್ಲಿ ಕರೆ ನೀಡಿದರು. ಎಂಟನೇ ಬಾರಿ ಮತ್ತೊಮ್ಮೆ ನನ್ನನ್ನು ಚುನಾವಣೆಗೆ ನಿಲ್ಲಲು ಅವಕಾಶ ಮಾಡಿಕೊಟ್ಟ ಸಂಘಟನೆಯ ಎಲ್ಲ ಪದಾಧಿಕಾರಿಗಳಿಗೆ ಶಿಕ್ಷಕ ಬಂಧುಗಳಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.
ಸಭೆಯಲ್ಲಿ ಬೆಳಗಾವಿ ವಿಭಾಗ ಮಟ್ಟದ ವಿವಿಧ ಜಿಲ್ಲೆಯ ಪ್ರಮುಖರು ಸಂಘಟನೆ, ಹೋರಾಟ, ಚುನಾವಣೆ ಹಾಗೂ ಮಹತ್ವದ ಶಿಕ್ಷಕರ ಸಮಸ್ಯೆಗಳ ಕುರಿತು ತೀವೃವಾಗಿ ಚರ್ಚಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಹೋರಾಟಗಾರ ಸಹಜಾನಂದ ದಂದರಗಿ, ಶ್ರೀಮತಿ ಅನ್ನಪೂರ್ಣ ಗುಡ್ಡದ, ಶ್ರೀಮತಿ ಜ್ಯೋತಿ ಪಾಟೀಲ, ಶ್ಯಾಮ್ ಮಲ್ಲನಗೌಡರ, ಸದಸ್ಯರಾದ ಎಸ್.ಎಂ.ಅಗಡಿ, ಎಸ್.ಎಸ್.ಹುದ್ದಾರ, ಎಂ.ಟಿ.ಗೌಡ, ಎಚ್.ಪಿ.ಬಣಕಾರ, ಪ್ರಭಾಕರ ಬಂಟ್, ದಿನೇಶ ನೇತ್ರೇಕರ್, ಎಸ್.ಆರ್.ಕಲಾದಗಿ, ಎಸ್.ಡಿ. ಮೂಡೆಣ್ಣರ, ಸಂತೋಷ ಪಾಟೀಲ, ಸಿ.ಎ.ಸಾವಳಗಿ, ಚಂದ್ರಶೇಖರ ಲೋನಿ, ಎನ್.ಎಚ್.ನಾವಲಗಟ್ಟಿ, ಬಿ.ಪಿ.ಹನಮಣ್ಣವರ, ರಮೇಶ ದೊಡ್ಡಮನಿ, ಗಣೇಶ ವಡ್ಡರ, ಎಸ್.ಎಸ್.ಗಡ್ಡದ ಹಾಗೂ ಸರ್ವ ಶಿಕ್ಷಕ ಸಂಘಟನೆಯ ಸಮಸ್ತ ಪದಾಧಿಕಾರಿಗಳು, ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ/ತಾಲೂಕಾ ಸರ್ವ ಪದಾಧಿಕಾರಿಗಳು, ಸಮಸ್ತ ಶಿಕ್ಷಕ ಶಿಕ್ಷಕೇತರರು ಹಾಗೂ ಗದಗ-ಹಾವೇರಿ-ಹುಬ್ಬಳ್ಳಿ-ಧಾರವಾಡ-ಕಾ ರವಾರ-ಶಿರಸಿ ಜಿಲ್ಲೆಯ ಸಮಸ್ತ ಶಿಕ್ಷಕ ಬಂಧುಗಳು ಉಪಸ್ಥಿತರಿದ್ದರು.