ಬೆಂಗಳೂರು, ಮಾರ್ಚ್ 21 (ಕರ್ನಾಟಕ ವಾರ್ತೆ) : ಶಾಲಾ ಮಕ್ಕಳಿಗೆ-ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
ಅವರು ಇಂದು ವಿಧಾನಸಭಾ ಅಧಿವೇಶನದ ಶೂನ್ಯವೇಳೆಯಲ್ಲಿ ವಿರೋಧಪಕ್ಷದ ಉಪನಾಯಕರಾದ ಯು.ಟಿ.ಖಾದರ್ ಅವರು ಮಾರ್ಚ್ 19 ರಂದು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ಸಂಭವಿಸಿದ ಖಾಸಗಿ ಬಸ್ ದುರಂತಕ್ಕೆ ಸಂಬಂಧಿಸಿದಂತೆ ಪ್ರಸ್ತಾಪಿಸಿದಾಗ, ಸಚಿವರು ಮಾತನಾಡಿ ಈ ಖಾಸಗಿ ಬಸ್ಸಿನಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚಿನ ಜನರು ಪ್ರಯಾಣಿಸಿದರಿಂದ ಈ ದುರಂತ ಸಂಭವಿಸಿದೆ.
ಮುಖ್ಯಮಂತ್ರಿಗಳ ಆದೇಶದನ್ವಯ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸರ್ವೆ ಮಾಡಿ ಪ್ರಾಥಮಿಕ ವರದಿ ಪಡೆಯಲಾಗಿದೆ. ಈ ಘಟನೆಯಲ್ಲಿ 5 ಮಂದಿ ನಿಧನರಾಗಿದ್ದು, ನಿಧನರಾದ ಕುಟುಂಬಗಳನ್ನು ಭೇಟಿ ಮಾಡಿ ಇಲಾಖೆಯ ವತಿಯಿಂದ 5 ಲಕ್ಷ ರೂ. ಹಾಗೂ ವೈಯಕ್ತಿಕವಾಗಿ 1 ಲಕ್ಷ ರೂ. ಹಾಗೂ ಗಂಭೀರ ಗಾಯಗೊಂಡವರಿಗೆ 50 ಸಾವಿರ, ಸಣ್ಣ ಪುಟ್ಟ ಗಾಯಾಳುಗಳಿಗೆ 25 ಸಾವಿರ ಪರಿಹಾರ ನೀಡಲಾಗಿದೆ. ಗಾಯಾಳುಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿಯೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇನ್ನು ಮುಂದೆ ಬಸ್ಸಿನ ಮೇಲೆ ಪ್ರಯಾಣ ಮಾಡುವುದಕ್ಕೆ ಪೂರ್ಣ ಕಡಿವಾಣ ಹಾಕುವುದರೊಂದಿಗೆ, ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದರು.