ಭಾರತ ಸರ್ಕಾರದ ಸಾರ್ವಜನಿಕ ಒಡೆತನದ ವರ್ಗ-1ಕ್ಕೆ ಸೇರಿದ ‘ಮಿನಿ ರತ್ನ’ ಉದ್ಯಮ ಸಂಸ್ಥೆ ‘ರಾಷ್ಟ್ರೀಯ ಜಲ ವಿದ್ಯುಚ್ಛಕ್ತಿ ನಿಗಮ(ಎನ್ ಎಚ್ ಪಿ ಸಿ)’ವು 2022 ಮಾರ್ಚ್ 4ರಂದು ಭಾರತ ಸರ್ಕಾರಕ್ಕೆ 2021-22ನೇ ಸಾಲಿನ 933.61 ಕೋಟಿ ರೂ ಮಧ್ಯಂತರ ಲಾಭಾಂಶವನ್ನು ಪಾವತಿಸಿದೆ. ಎನ್ ಎಚ್ ಪಿ ಸಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ(ಸಿಎಂಡಿ) ಶ್ರೀ ಎ.ಕೆ. ಸಿಂಗ್ ಅವರು ಮಾರ್ಚ್ 10ರಂದು ಕೇಂದ್ರ ಇಂಧನ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಶ್ರೀ ಆರ್ ಕೆ ಸಿಂಗ್ ಅವರಿಗೆ ಮಧ್ಯಂತರ ಲಾಭಾಂಶದ ಚೆಕ್ ಅನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಇಂಧನ ಸಚಿವಾಲಯ ಕಾರ್ಯದರ್ಶಿ ಶ್ರೀ ಅಲೋಕ್ ಕುಮಾರ್, ಎನ್ ಎಚ್ ಪಿ ಸಿ ತಾಂತ್ರಿಕ ವಿಭಾಗದ ನಿರ್ದೇಶಕ ಶ್ರೀ ವೈ.ಕೆ. ಚೌಬೆ, ಹಣಕಾಸು ವಿಭಾಗದ ನಿರ್ದೇಶಕ ಶ್ರೀ ಆರ್.ಪಿ. ಗೋಯಲ್, ಹಣಕಾಸು ವಿಭಾಗದ ಕಾರ್ಯಕಾರಿ ನಿರ್ದೇಶಕರಾದ ಶ್ರೀ ಕೆ.ಕೆ. ಗೋಯಲ್ ಮತ್ತು ಶ್ರೀ ಸಂಜಯ್ ಕುಮಾರ್ ಮದನ್ ಅವರು ಉಪಸ್ಥಿತರಿದ್ದರು.
ಎನ್ ಎಚ್ ಪಿಸಿ 2020-21ನೇ ಸಾಲಿನ ಅಂತಿಮ ಲಾಭಾಂಶ ಮೊತ್ತ 249.44 ಕೋಟಿ ರೂ. ಅನ್ನು ಈಗಾಗಲೇ ಪ್ರಸಕ್ತ ಆರ್ಥಿಕ ವರ್ಷ 2021-22ರಲ್ಲಿ ಭಾರತ ಸರ್ಕಾರಕ್ಕೆ ಪಾವತಿಸಿದೆ. ಇದರೊಂದಿಗೆ ಎನ್ ಎಚ್ ಪಿ ಸಿ ಒಟ್ಟು 1,183.05 ಕೋಟಿ ರೂ. ಲಾಭಾಂಶವನ್ನು 2021-22ನೇ ಸಾಲಿನಲ್ಲಿ ಕೇಂದ್ರ ಸರ್ಕಾರಕ್ಕೆ ಪಾವತಿಸಿದಂತಾಗಿದೆ.
ಎನ್ ಎಚ್ ಪಿ ಸಿ ಕಂಪನಿ ಆಡಳಿತ ಮಂಡಳಿ ನಿರ್ದೇಶಕರು 2022 ಫೆಬ್ರವರಿ 11ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಪ್ರತಿ ಈಕ್ವಿಟಿ ಷೇರಿಗೆ 1.31 ರೂ. ಮಧ್ಯಂತರ ಡಿವಿಡೆಂಟ್(ಲಾಭಾಂಶ) ಘೋಷಿಸಿದ್ದಾರೆ. ಷೇರಿನ ಮುಖಬೆಲೆ ಇದೀಗ 13.10%ಗೆ ಏರಿಕೆ ಕಂಡಿದೆ. ಎನ್ ಎಚ್ ಪಿ ಸಿ ಇದೀಗ 8 ಲಕ್ಷಕ್ಕಿಂತ ಹೆಚ್ಚಿನ ಷೇರುದಾರರನ್ನು ಹೊಂದಿದೆ. 2021 22ನೇ ಆರ್ಥಿಕ ಸಾಲಿನಲ್ಲಿ ಕಂಪನಿಯು ತನ್ನೆಲ್ಲಾ ಷೇರುದಾರರಿಗೆ ಒಟ್ಟು 1315.90 ಕೋಟಿ ರೂ. ಮಧ್ಯಂತರ ಲಾಭಾಂಶ ಪಾವತಿಸಿದೆ. 2020-21ನೇ ಸಾಲಿನಲ್ಲಿ ಕಂಪನಿಯು ಪ್ರತಿ ಷೇರಿಗೆ 1.25 ರೂ. ಮಧ್ಯಂತರ ಲಾಭಾಂಶ ನೀಡಿದೆ. ಇದಕ್ಕಾಗಿ 1,255.63 ಕೋಟಿ ರೂ. ಹಂಚಿಕೆಯಾಗಿದೆ. ಇದರ ಜತೆಗೆ, ಪ್ರತಿ ಷೇರಿಗೆ 0.35 ರೂ. ಅಂತಿಮ ಲಾಭಾಂಶ ಹಂಚಿಕೆ ಮಾಡಿದೆ. ಇದರ ಒಟ್ಟು ಮೊತ್ತ 351.58 ಕೋಟಿ ರೂ. ಆಗಿದೆ. ಇದರೊಂದಿಗೆ, ಪ್ರತಿ ಷೇರಿಗೆ ಒಟ್ಟಾರೆ ಲಾಭಾಂಶ 1.60 ರೂ. ನೀಡಲಾಗಿದ್ದು, 2020-21ನೇ ಸಾಲಿನಲ್ಲಿ ಒಟ್ಟು1,607.21 ಕೋಟಿ ರೂ. ಹಂಚಿಕೆಯಾಗಿದೆ.
ಕೇಂದ್ರ ಸ್ವಾಮ್ಯದ ಸಾರ್ವಜನಿಕ ಉದ್ಯಮಗಳ ಬಂಡವಾಳ ಪುನಾರಚನೆಗೆ ಸಂಬಂಧಿಸಿದ ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತುಗಳ ನಿರ್ವಹಣೆ ಇಲಾಖೆ(ಡಿಐಪಿಎಎಂ)ಯ 2016 ಮೇ 27ರ ಮಾರ್ಗಸೂಚಿಗಳ ಪ್ರಕಾರ, ಕೇಂದ್ರ ಸ್ವಾಮ್ಯದ ಯಾವುದೇ ಸಾರ್ವಜನಿಕ ಉದ್ಯಮ ಸಂಸ್ಥೆ ಅಥವಾ ಕಂಪನಿಯು ತೆರಿಗೆ ನಂತರದ ಲಾಭದಲ್ಲಿ ಕನಿಷ್ಠ 30% ವಾರ್ಷಿಕ ಲಾಭಾಂಶ ಪಾವತಿಸಲೇಬೇಕು ಅಥವಾ ನಿವ್ವಳ ಲಾಭದಲ್ಲಿ 5% ವಾರ್ಷಿಕ ಲಾಭಾಂಶ (ಇವೆರಡರಲ್ಲಿ ಯಾವುದು ಹೆಚ್ಚಿರುತ್ತದೋ ಅದು) ಘೋಷಿಸಬೇಕು. ಇದೇ ಮಾರ್ಗಸೂಚಿಯಂತೆ, ಎನ್ ಎಚ್ ಪಿ ಸಿ 2020-21ನೇ ಸಾಲಿನಲ್ಲಿ 1,607.21 ಕೋಟಿ ರೂ. ಒಟ್ಟು ಲಾಭಾಂಶ ಪಾವತಿಸಿದೆ. ಅಂದರೆ ನಿವ್ವಳ ಲಾಭದ 5.08% ಪ್ರಮಾಣ. 2021-22ನೇ ಆರ್ಥಿಕ ವರ್ಷದ ಅಂತ್ಯಕ್ಕೆ ಅನ್ವಯವಾಗುವಂತೆ
9 ತಿಂಗಳಲ್ಲಿ ಎನ್ ಎಚ್ ಪಿ ಸಿ ಕಂಪನಿಯು 2,977.62 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಸಾಲಿನಲ್ಲಿ ಅಂದರೆ 9 ತಿಂಗಳಲ್ಲಿ ಕಂಪನಿಯು 2,829.16 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. 2020-21ನೇ ಸಾಲಿನ ಪೂರ್ಣ ಅವಧಿ ಅಂದರೆ ಒಟ್ಟು
12 ತಿಂಗಳು ಕಂಪನಿಯು ಒಟ್ಟಾರೆ 3,233.37 ಕೋಟಿ ರೂ. ನಿವ್ವಳ ಲಾಭ ಸಂಪಾದಿಸಿದೆ.