ಎಲ್ಲೋ ಹುಡುಕಿದೆ ಕಾಣದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ-ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ||
ಬಹುಶಃ ಅಪ್ಪು ಕಿವಿಯೊಳಗೆ ಈ ಸಾಲುಗಳು ಮಾರ್ದನಿಸಿರಬೇಕು ಎಂದೆನಿಸುತ್ತದೆ. ಎಕೆಂದರೆ ಇಂದಿನ ದಿನಗಳನ್ನು ನೋಡುತ್ತಿದ್ದರೆ, ಕರುನಾಡಿನ ಜನರು ಅಪ್ಪು ಮೇಲೆ ತೋರುತ್ತಿರುವ ಪ್ರೀತಿ ಕಾಣುತ್ತಿದೆ. ಈ ಜನ ಒಬ್ಬರನ್ನು ಒಪ್ಪುವುದು ಅತಿ ಕಷ್ಟ. ಒಪ್ಪಿದ ಮೇಲೆ, ಅಪ್ಪಿ ಎತ್ತರಿಸುವ ರೀತಿಯೇ ಬೇರೆ. ಅಪ್ಪುವಿನ ವಿಷಯದಲ್ಲಿ ಎದ್ದು ಕಾಣ ಸಿಗುತ್ತದೆ.
ಒಳಿತು ಮಾಡೋ ಮನುಸ
ಇರೋದು ಮೂರು ದಿವಸ.., ಎನ್ನುವ ಕವಿ ರಚನೆಯಲ್ಲಿ ಬರುವ
“ ಪ್ರೀತಿ-ಪ್ರೇಮ ಹಂಚಿ
ನೀನು ಹೋಗಬೇಕು ಅಲ್ಲಿ
ಸತ್ತ ಮೇಲೂ ನಿನಗೆ
ಹೆಸರು ಉಂಟು ಇಲ್ಲಿ ”
ಈಗ ಹೇಳಿ, ಅಪ್ಪುವಿಗೆ ಒಪ್ಪುವ ರೀತಿಯಲ್ಲಿ ಇಲ್ಲವೇ..?!
ಹೆತ್ತ ಅಮ್ಮನಿಗೂ ತಿಳಿದಿರಲಿಲ್ಲ, ಅಪ್ಪು ಎನ್ನುವ ಹೆಸರು ಇಷ್ಟು ಎತ್ತರ ಬೆಳೆಯುವುದೆಂದು! ಅಪ್ಪನಿಗೂ ಗೊತ್ತಿಲ್ಲ ಹೆಮ್ಮರ ಕುರುಹು! ಒಡಹುಟ್ಟಿದವರಿಗೂ ಅರಿವಾಗಲಿಲ್ಲ, ಅಪ್ಪು ವಿರಾಜಮಾನತೆ! ಅಪ್ಪಿದ ಗೆಳೆಯರಿಗೂ ಕಾಣ ಸಿಗಲಿಲ್ಲ, ಅಪ್ಪುವಿನ ಅಪ್ಯಾಯಮಾನತೆ! ಎಂತಹ ಅದ್ಭುತ ಹೆಸರು ಅಪ್ಪು,.. ಪುನೀತ್ ರಾಜಕುಮಾರ್!!
ಪುರಾಣದಲ್ಲಿನ ಮಾರ್ಕಂಡೇಯ ನೆನಪಾದಂತೆ, ಇತಿಹಾಸದಲ್ಲಿನ ಶ್ರೀ ಶಂಕರರು ಮುಂದೆ ನಿಂತAತೆ, ಪುನೀತ್ ವಾಸ್ತವದ ಹೆಗ್ಗುರುತಾಗಿ ಹೋಗಿದ್ದಾರೇನೂ ಎನ್ನುವ ಗುಮಾನಿ ನನ್ನದು.
ಇದೇನು ಮಬ್ಬೋ! ಉಗಾದಿ-ದಸರಾ ಹಬ್ಬವೋ ತಿಳಿಯುತ್ತಿಲ್ಲ. ಯಾವುದೋ ಒಂದು ವರ್ಗಕ್ಕೆ, ಒಂದು ಸ್ಥಳಕ್ಕೆ ಸೀಮಿತವಾಗಿರುವ ಸಡಗರವೇ ಇದು! ಅಥವಾ ದುಡ್ಡು ಕೊಟ್ಟು ಬಸ್, ಲಾರಿಗಳಲ್ಲಿ ತುಂಬಿಸಿಕೊAಡು ಬಂದು ಜೈಕಾರ ಹಾಕಿಸಿಕೊಳ್ಳುವ ಈಗಿನ ರಾಜಕೀಯ ಜನರಂತೆ ಅಪ್ಪು ಕಾಣ ಸಿಗುವುದಿಲ್ಲ. ಅಗಲಿ ಐದು ತಿಂಗಳಾದರೂ ಅವರ ಸಮಾಧಿಯ ದರ್ಶನಕ್ಕೆ ಧರ್ಮ ಗುರುಗಳ ಗದ್ದುಗೆಯನ್ನು ಕಾಣ ಬರುವ ಜನ ಸಾಗರದಂತೆ ಅನಿಸುತ್ತದೆ. ಶರಣರ ಬಾಳನ್ನು ಮರಣದಲ್ಲಿ ಕಾಣು ಎನ್ನುವ ಮಾತಿದೆ. ಹಾಗಾದರೆ, ಅಪ್ಪು, ನೀವು ಯಾವ ರೀತಿಯ ಶರಣ!