ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಉನ್ನತ ಶಿಕ್ಷಣ ಸಚಿವರ ರಾಜೀನಾಮೆಗೆ ಬಿಎಸ್ಪಿ ಆಗ್ರಹ.

varthajala
0

 ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲಿನ ವಿವಾದವನ್ನು ಬಗೆಹರಿಸಲು ವಿಫಲರಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ. 

ರಾಜ್ಯದ ಪದವಿಪೂರ್ವ ಕಾಲೇಜೊಂದರಲ್ಲಿ ಪ್ರಾರಂಭವಾದ ಈ ವಿವಾದ ರಾಜ್ಯಾದ್ಯಂತ ವ್ಯಾಪಿಸಿ ವಿದ್ಯಾರ್ಥಿಗಳ ನಡುವೆ  ಸಮಾಜಘಾತಕ ಶಕ್ತಿಗಳ ಕುಮ್ಮಕ್ಕಿನಿಂದ ಹೊಡೆದಾಟ, ಹಲ್ಲೆಯಂಥ ಆತಂಕಕಾರಿ ಘಟನೆಗಳು ನಡೆದದ್ದು ಖಂಡನೀಯ ಎಂದಿದ್ದಾರೆ.

  ಶಾಂತಿ, ಸೌಹಾರ್ದತೆ, ಸಹಬಾಳ್ವೆ, ಭಾವೈಕ್ಯತೆಯ ವೇದಿಕೆ ಆಗಬೇಕಿದ್ದ ಶಾಲಾ ಕಾಲೇಜುಗಳು ಹಿಜಬ್ ಮತ್ತು ಕೇಸರಿ ಶಾಲಿನ ವಿವಾದದಲ್ಲಿ ರಣರಂಗವಾಗಿ ಮಾರ್ಪಟ್ಟಿದ್ದು ಶೋಭೆ ತರುವ ಸಂಗತಿಯಲ್ಲ.

 ಪ್ರಕರಣದ ಸೂಕ್ಷ್ಮತೆಯನ್ನು ಅರಿತು ಪ್ರಾರಂಭದಲ್ಲೇ ಸೌಹಾರ್ದಯುತವಾಗಿ  ಬಗೆಹರಿಸುವ ಬದಲು, ಸಚಿವರು ಸಂಪೂರ್ಣವಾಗಿ ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ.

 ಒಂದು ಕಾಲೇಜಿನಲ್ಲಿ ಪ್ರಾರಂಭವಾದ ವಿವಾದ ಮೂರು ದಿನಗಳ ಕಾಲ ರಾಜ್ಯಾದ್ಯಂತ

 ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಮಟ್ಟಕ್ಕೆ ಹೋಗಿದ್ದು ಸಚಿವರುಗಳ ನಿರ್ಲಕ್ಷ್ಯ ಮತ್ತು ವೈಫಲ್ಯಕ್ಕೆ ಸಾಕ್ಷಿಯಾಗಿದೆ.

 ಕೋಮು, ಜಾತಿ ಆಧಾರದ ಮೇಲೆ ವಿದ್ಯಾರ್ಥಿಗಳು ವಿಭಜನೆಯಾಗುವಂತೆ ಮಾಡಿ, ಕರ್ನಾಟಕ ಶೈಕ್ಷಣಿಕ ವಲಯಕ್ಕೆ ಕಳಂಕ ಹಚ್ಚಿದ ಇಬ್ಬರೂ ಸಚಿವರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. 

 ಇಲ್ಲದಿದ್ದರೆ ಮುಖ್ಯಮಂತ್ರಿ ಇವರನ್ನು ಸಂಪುಟದಿಂದ ವಜಾಗೊಳಿಸಬೇಕು.

 ಕೋವಿಡ್ ಸಂಕಷ್ಟದ ಕಾರಣದಿಂದ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳು ಸೂಕ್ತ ಕಲಿಕೆಯಿಂದ ವಂಚಿತರಾಗಿದ್ದಾರೆ.

 ಇದರ ಜೊತೆಗೆ ಶಾಲಾ-ಕಾಲೇಜುಗಳಲ್ಲಿ ಬೋಧಕರ ಕೊರತೆಯಿಂದ ಪಠ್ಯಕ್ರಮವನ್ನೂ ಸಹ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

     ಹಾಗೆಯೇ ಕಳೆದೆರಡು ತಿಂಗಳಿಂದ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದ್ದರು. ಇದರಿಂದ ಕಳೆದೆರಡು ತಿಂಗಳಿಂದ ವಿದ್ಯಾರ್ಥಿಗಳಿಗೆ ಸರಿಯಾಗಿ ತರಗತಿಗಳಲ್ಲಿ ಕೂರುವ ಅವಕಾಶವೂ ದೊರೆತಿಲ್ಲ.

ಇದೆಲ್ಲವನ್ನು ಮನಗಂಡು ರಾಜ್ಯದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ವಿವಾದವನ್ನು ಸ್ಥಳೀಯವಾಗಿ ತಕ್ಷಣ ಪರಿಹಾರ ಮಾಡಿದ್ದರೆ ಇಂದು ವಿದ್ಯಾರ್ಥಿಗಳು ಧರ್ಮದ ಆಧಾರದ ಮೇಲೆ ಬಡಿದುಕೊಳ್ಳುವ ಸಂದರ್ಭ ಬರುತ್ತಿರಲಿಲ್ಲ.

ಹಾಗೆಯೇ ಶಾಸಕ ರಘುಪತಿ ಭಟ್ ಹಾಗೂ ಸಿ.ಟಿ .ರವಿ, ಸಚಿವ ಸುನಿಲ್ ಕುಮಾರ್, ಈಶ್ವರಪ್ಪ ,ಸಂಸದ ಪ್ರತಾಪ್ ಸಿಂಹರಂತಹ ವ್ಯಕ್ತಿಗಳು ತಮ್ಮ ಸ್ಥಾನಮಾನದ ಘನತೆ ಗೌರವಗಳನ್ನು ಮರೆತು ಕ್ಷುಲ್ಲಕ ಹೇಳಿಕೆಗಳನ್ನು  ನೀಡುತ್ತಿದ್ದಾರೆ.

ಇವರಿಗೆ ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ವಿವಾದದಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಮುಖ್ಯವಾದಂತೆ ಕಾಣುತ್ತಿದೆ.

 ರಾಜ್ಯದ ಜನತೆ ತಮ್ಮ ಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಕಳುಹಿಸುವುದು ಜಾತಿ, ಭಾಷೆ , ಧರ್ಮದ ಕಾರಣಕ್ಕಾಗಿ ಬಡಿದಾಡಿಕೊಳ್ಳುವುದಕ್ಕಲ್ಲ. ತಮ್ಮ ಮಕ್ಕಳು ಓದಿ ವಿದ್ಯಾವಂತರಾಗಿ ಉತ್ತಮ ಉದ್ಯೋಗ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಲಿ ಎಂದು.     ಈಗ ನಡೆಯುತ್ತಿರುವ ಘಟನೆಗಳನ್ನು ನೋಡಿ ಪೋಷಕರು ಆಘಾತಗೊಂಡಿದ್ದಾರೆ.

     ಶಾಸಕ, ಸಂಸದ, ಮಂತ್ರಿಗಳು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದರ್ಜೆಯ ಶಾಲಾ-ಕಾಲೇಜುಗಳಲ್ಲಿ ಓದಿಸುತ್ತಿದ್ದಾರೆ. ಅಲ್ಲಿ ಹಿಜಾಬ್ ಮತ್ತು ಕೇಸರಿ ಶಾಲಿನ ವಿವಾದ ಇದೆಯೇ?  ಇವರ ಮಕ್ಕಳು ಬಡಿದಾಡಿ ಕೊಳ್ಳುತ್ತಿದ್ದಾರೆಯೇ?

     ಎಲ್ಲಾ ಜಾತಿಯ ಬಡ ಮಧ್ಯಮ ವರ್ಗದ ಜನರ ಮಕ್ಕಳು ಓದುತ್ತಿರುವ ಸರ್ಕಾರಿ ಮತ್ತು ಸ್ಥಳೀಯ ಖಾಸಗಿ ಶಾಲಾ-ಕಾಲೇಜುಗಳಲ್ಲಿ ವಿವಾದ ಸೃಷ್ಟಿಸಲಾಗುತ್ತಿದೆ.    ತಮ್ಮ ರಾಜಕೀಯ ಸ್ವಾರ್ಥಕ್ಕೋಸ್ಕರ ವಿದ್ಯಾರ್ಥಿಗಳ ಭವಿಷ್ಯವನ್ನು ಬಲಿಕೊಡುತ್ತಿರುವ ಕ್ಷುಲ್ಲಕ ರಾಜಕೀಯವನ್ನು ಕೊನೆಗಾಣಿಸಲು ಇಬ್ಬರು ಮಂತ್ರಿಗಳು ಮತ್ತು ಘಟನೆಗೆ ಕುಮ್ಮಕ್ಕು ನೀಡಿರುವ ಎಲ್ಲರ ಮೇಲೆ ಮುಖ್ಯಮಂತ್ರಿ ಕ್ರಮಕೈಗೊಳ್ಳಬೇಕೆಂದು ಬಹುಜನ ಸಮಾಜ ಪಾರ್ಟಿ  ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.

Post a Comment

0Comments

Post a Comment (0)