ಎಸ್.ಸಿ./ಎಸ್.ಟಿ. ಅಭಿವೃದ್ಧಿಯ ಕಾಮಗಾರಿಗಳಲ್ಲಿ ರೂ.90 ಕೋಟಿ ಅಕ್ರಮ ಭ್ರಷ್ಟಾಚಾರ
ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್(ಐ.ಎ.ಎಸ್).ರವರನ್ನು ವಜಾಗೊಳಿಸಿ ಎಂದು ಮುಖ್ಯಮಂತ್ರಿಗಳಿಗೆ ಮನವಿ
ಬಿ.ಬಿ.ಎಂ.ಪಿ.ಕೇಂದ್ರ ಕಛೇರಿ ಅವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ಡಾ||ಸಿ.ಎಸ್.ರಘುರವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಎಸ್.ಸಿ./ಎಸ್.ಟಿ.ಅನುದಾನದ 149ಕಾಮಗಾರಿಗಳಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ನಕಲಿ ಬಿಲ್ಲು ಪಾವತಿ ಹಣ ಬಿಡುಗಡೆ ಮಾಡಿರುವುದರ ವಿರುದ್ದ ಐ.ಎ.ಎಸ್. ಅಧಿಕಾರಿ ರಾಕೇಶ್ ಸಿಂಗ್, ಹಾಗೂ ಸಂಬಂಧಪಟ್ಟ ಇತರರ ಮೇಲೆ ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಅಧಿನಿಯಮ (ತಿದ್ದುಪಡಿ2016) ಹಾಗೂ ಭ್ರಷ್ಟಾಚಾರ ತಡೆ ಅಧಿನಿಯಮದಡಿ (2018 ರಡಿ) ಕಾನೂನಾತ್ಮಕ ಕ್ರಮ ಜರುಗಿಸಿ ಸೇವೆಯಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನಾ ತಮಟೆ ಚಳುವಳಿಯೊಂದಿಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು
ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ಡಾ||ಸಿ.ಎಸ್.ರಘುರವರು ಮಾತನಾಡಿ ಬೆಂಗಳೂರು ನಗರದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಪರಿಶಿಷ್ಟ ಜಾತಿ / ಪಂಗಡದ ಅಭಿವೃದ್ಧಿಗಾಗಿ ಮೀಸಲಿಟ್ಟ ಶೇ.24.10ರ ಅನುದಾನದಲ್ಲಿ ಕಾಮಗಾರಿ ಹೆಸರಿನಲ್ಲಿ ಭ್ರಷ್ಟಾಚಾರವೆಸಗಿದ್ದು ಕೆಲ ದಗಾಕೋರ, ದಗಲುಬಾಜಿ ಅಧಿಕಾರಿಗಳು ದುರುದ್ದೇಶಪೂರ್ವಕವಾಗಿ ಇಲ್ಲದ ಕಾಮಗಾರಿಗಳನ್ನು ಸೃಷ್ಟಿಸಿಕೊಂಡು ಅಕ್ರಮವೆಸಗುವುದರ ಮುಖೇನ ದಲಿತರ ಅಭಿವೃದ್ಧಿಗಾಗಿ ಪಾಲಿಕೆಯಲ್ಲಿ ಮೀಸಲಿಟ್ಟ ಹಣವನ್ನು ಕಾನೂನು ಬಾಹೀರವಾಗಿ ಲೂಟಿ ಮಾಡಿರುತ್ತಾರೆ.
ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡಗಳಿಗೆ ಮೀಸಲಿಟ್ಟ ಕಲ್ಯಾಣ ಕಾರ್ಯಕ್ರಮಗಳ ಅನುದಾನದಡಿಯಲ್ಲಿ ಸುಮಾರು 149 ಕಾಮಗಾರಿಗಳು, ರಸ್ತೆ ಅಭಿವೃದ್ಧಿ ಕಾಮಗಾರಿ, ಬೋರ್‌ವೆಲ್ ಕೊರೆಸಲು ಹಾಗೂ ಒಳಚರಂಡಿ ಕಾಮಗಾರಿಗಳು ಸೇರಿ ಹಲವು ಕಾಮಗಾರಿಗಳು ಮಾಡಲಾಗಿದೆ ಎಂದು ನಕಲಿ ಬಿಲ್ ಸೃಷ್ಟಿಸಿ ರೂ.90 ಕೋಟಿ ಅನುದಾನದಲ್ಲಿ ರೂ.20 ಕೋಟಿ ಬಿಲ್ ಪಾವತಿ ಮಾಡಿರುತ್ತಾರೆ.
ಇದರ ಬಗ್ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಟಿ.ವಿ.ಸಿ.ಸಿ. ಗೆ ದೂರು ನೀಡಲಾಗಿದ್ದು, ಟಿ.ವಿ.ಸಿ.ಸಿ. ತನಿಖೆ ನಡೆಸಿ 149 ಕಾಮಗಾರಿಗಳು ಕಳಪೆ ಹಾಗೂ ಕೆಲಸ ಮಾಡದೇ ಇರುವುದು, ಬಿಲ್ ಪಾವತಿಗೆ ಸಲ್ಲಿಸಿರುವ ಬಗ್ಗೆ ಇದರಲ್ಲಿ ಶಾಮೀಲಾದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವರದಿ ನೀಡಿರುತ್ತಾರೆ.
ಸದರಿ ಅಕ್ರಮಗಳ ಬಗ್ಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶ್ರೀಯುತ ರಾಕೇಶ್ ಸಿಂಗ್ ರವರಿಗೆ ದಿ: 07-06-2021ರಂದು ದಸಂಸ ದೂರು ಸಲ್ಲಿಸಲಾಗಿತ್ತು. ಆದರೂ ಸದರಿ ಐಎಎಸ್ ಅಧಿಕಾರಿಯಾದ ಶ್ರೀಯುತ ರಾಕೇಶ್ ಸಿಂಗ್ ರವರ ಗಮನಕ್ಕಿದ್ದರೂ ಸಹ ಗಂಭೀರವಾಗಿ ಪರಿಗಣಿಸದೇ, ಕಾನೂನಾತ್ಮಕ ಕ್ರಮ ಜರುಗಿಸದೇ ನಿರ್ಲಕ್ಷ್ಯತೆ ವಹಿಸಿರುವುದರೊಂದಿಗೆ ಕರ್ತವ್ಯ ಲೋಪವೆಸಗಿ ಅಸಡ್ಡೆ ಮನೋಭಾವನೆ ತೋರಿ ದಲಿತ ವಿರೋಧಿ ನೀತಿ ಅನುಸರಿಸಿರುತ್ತಾರೆ.
ಅಕ್ರಮ ಭ್ರಷ್ಟಾಚಾರವೆಸಗಿರುವ ಅಧಿಕಾರಿಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸುತ್ತಿರುವುದು ಖಂಡನೀಯ. ನಮ್ಮೆಲ್ಲ ಬಹುಜನರ ಉದ್ಧಾರಕ್ಕಾಗಿ ಬಾಬಾಸಾಹೇಬ್ ಅಂಬೇಡ್ಕರ್ ರವರು ಭಾರತ ದೇಶಕ್ಕೆ ಬರೆದುಕೊಟ್ಟ ಸಂವಿಧಾನವನ್ನು ಈ ರೀತಿಯ ಪಟ್ಟಭದ್ರ ಹಿತಾಸಕ್ತಿ ಅಧಿಕಾರಿಗಳು ಅದನ್ನು ನಾಶ ಮಾಡಲು ಸಂಚು ರೂಪಿಸುತ್ತಿರುವ ಕ್ರಮವನ್ನು ಖಂಡಿಸಿ ಈ ದಿನ ದಸಂಸ ನೇತೃತ್ವದಲ್ಲಿ ಸದರಿ ರಾಕೇಶ್ ಸಿಂಗ್ ರವರ ವಿರುದ್ಧ ಎಸ್.ಸಿ./ ಎಸ್.ಟಿ. ದೌರ್ಜನ್ಯ ತಡೆ ಅಧಿನಿಯಮದಡಿ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ ಅಧಿನಿಯಮದಡಿ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸೇವೆಯಿಂದ ವಜಾಗೊಳಿಸಲು ಆಗ್ರಹಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ಎಂದು ಹೇಳಿದರು.