ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಚಾಲನೆ
ಅಪ್ರತಿಮ ದೇಶಭಕ್ತರನ್ನು ಸದಾ ಸ್ಮರಿಸಬೇಕು - ಶಂಕರ್ ಎಸ್ ಎನ್
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಆಂಗ್ಲರ ಕಪಿಮುಷ್ಠಿಯಿಂದ ಭಾರತ ಸ್ವಾತಂತ್ರ್ಯಗೊಳ್ಳಲು ಕಾರಣರಾದ ಧೀಮಂತ, ರಾಷ್ಟ್ರಭಕ್ತ ಹೋರಾಟಗಾರರನ್ನು ಸದಾ ಸ್ಮರಿಸಬೇಕು ಮತ್ತು ಇಂದಿನ ವಿದ್ಯಾರ್ಥಿಗಳಿಗೆ ಈ ಸ್ವಾಭಿಮಾನಿ ದೇಶಭಕ್ತರ ಬಗ್ಗೆ ಮಾಹಿತಿಗಳನ್ನು ಒದಗಿಸಲು ಶಾಲಾ ಕಾಲೇಜುಗಳು ಕ್ರಮ ಕೈಗೊಳ್ಳಬೇಕೆಂದು ಬಿಬಿಎಂಪಿ ಆಡಳಿತಾಧಿಕಾರಿಗಳ ಸಂಪರ್ಕಾಧಿಕಾರಿ ಶಂಕರ್ ಎಸ್ ಎನ್ ಅವರು ಹೇಳಿದರು.
ಶ್ರೀ ಕೃಷ್ಣಾ ವಿದ್ಯಾಸಂಸ್ಥೆಯಲ್ಲಿ ವಿವೇಕಾನಂದ ಕಲಾಕೇಂದ್ರ ಏರ್ಪಡಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು ವಿವೇಕಾನಂದ ಕಲಾಕೇಂದ್ರದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾನ್ ಕ್ರಾಂತಿಕಾರಿ ದೇಶಭಕ್ತರ ತ್ಯಾಗ, ಬಲಿದಾನಗಳಿಂದಲೇ ಸ್ವಾತಂತ್ರ್ಯವು ದೊರಕಿದ್ದು ಅದಕ್ಕಾಗಿ ಹೋರಾಡಿದ ಕೆಚ್ಚೆದೆಯ ಹೋರಾಟಗಾರರು ಇಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿಗಳಾಗಬೇಕೆಂದು ಕರೆ ನೀಡಿದರು.
ಸ್ವಾತಂತ್ರ್ಯದ 75ನೇ ವರ್ಷದ ಆಚರಣೆಯ ಈ ಸಂದರ್ಭದಲ್ಲಿ ದೇಶ ವಿಭಜನೆಯ ನೋವನ್ನು ಸಹಾ ಮರೆಯಬಾರದು. ಈ ಎಲ್ಲಾ ಘಟನಾವಳಿಗಳನ್ನು ಸ್ಮರಿಸಿಕೊಳ್ಳುತ್ತಾ ಹೆಜ್ಜೆಹಾಕಬೇಕು. ವಿದ್ಯಾರ್ಥಿಗಳಲ್ಲಿ ದೇಶದ ಬಗ್ಗೆ ಹೆಮ್ಮೆ, ಪ್ರೀತಿ ಮೂಡಿಸುವಂತಾಗಬೇಕೆಂದು ಅವರು ಹೇಳಿದರು.
ಶ್ರೀ ಕೃಷ್ಣಾ ಕಾಲೇಜಿನ ವಿದ್ಯಾರ್ಥಿಗಳು ಮತ್ತು ವಿವೇಕಾನಂದ ಕಲಾಕೇಂದ್ರದ ಕಲಾವಿದರು ದೇಶಭಕ್ತಿಯನ್ನು ಉತ್ತೇಜಿಸುವ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಆತ್ಮಾರ್ಪಣೆ ಮಾಡಿಕೊಂಡ ವೀರದೇಶಭಕ್ತರನ್ನು ಸ್ಮರಿಸುವ ವಂದೇ ಭಾರತ ಎಂಬ ರಂಗದೃಶ್ಯ ರೂಪಕವನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣಾ ಸಮೂಹ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಡಾ. ರುಕ್ಮಾಂಗದ ನಾಯ್ಡು, ಕಾಲೇಜಿನ ಆಡಳಿತಾಧಿಕಾರಿ ಮನೋಹರ್, ಪತ್ರಕರ್ತ ಸುಧೀಂದ್ರ ರಾವ್, ಕಲಾಕೇಂದ್ರದ ಸಂಘಟಕ ನಾಗರಾಜ್, ಡಾ. ಶ್ವೇತಾ, ದೈವಿಕ್, ಉಷಾಕುಮಾರಿ, ಅವಿನಾಶ್ ಮೊದಲಾದವರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಷನ್ : ವಿವೇಕಾನಂದ ಕಲಾಕೇಂದ್ರ, ಶ್ರೀ ಕೃಷ್ಣಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು ವಂದೇ ಭಾರತ ಎಂಬ ರಂಗದೃಶ್ಯ ರೂಪಕ ಕಾರ್ಯಕ್ರಮವನ್ನು ಬಿಬಿಎಂಪಿ ಆಡಳಿತಾಧಿಕಾರಿಗಳ ಸಂಪರ್ಕಾಧಿಕಾರಿ ಶ್ರೀ ಶಂಕರ್ ಎಸ್ ಎನ್ ಅವರು ಉದ್ಘಾಟಿಸಿದರು. ಶ್ರೀ ಕೃಷ್ಣಾ ಸಮೂಹ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಡಾ. ರುಕ್ಮಾಂಗದ ನಾಯ್ಡು, ಕಾಲೇಜಿನ ಆಡಳಿತಾಧಿಕಾರಿ ಮನೋಹರ್, ಪತ್ರಕರ್ತ ಸುಧೀಂದ್ರ ರಾವ್, ಕಲಾಕೇಂದ್ರದ ಸಂಘಟಕ ನಾಗರಾಜ್, ಡಾ. ಶ್ವೇತಾ, ದೈವಿಕ್, ಉಷಾಕುಮಾರಿ, ಅವಿನಾಶ್ ಮೊದಲಾದವರು ಉಪಸ್ಥಿತರಿದ್ದರು.