ಪುಲ್ವಾಮದಲ್ಲಿ ಹುತಾತ್ಮರಾದ 40 ಸಿ.ಆರ್.ಪಿ.ಎಫ್ ಯೋಧರು, ಪುನಿತ್ ರಾಜ್ ಕುಮಾರ್ ಚಿತ್ರವನ್ನು ಒಂದೂವರೆ ಗಂಟೆಯಲ್ಲಿ ರಚಿಸಿ ಲಿಮ್ಕಾ, ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಲು ಮುಂದಾದ ಕಲಾವಿದ ಡಾ. ಹರ್ಷ : ಚಿತ್ರ ಕಲೆ ಮೂಲಕ ದೇಶ ಪ್ರೇಮ ಮೆರೆದ ಕಲಾವಿದ
ಬೆಂಗಳೂರು, ಫೆ, 14; ಬೆಲ್ವಾಲ ಎಜುಕೇಶನ್ ಚಾರಿಟಬಲ್ ಟ್ರಸ್ಟ್, ಸ್ಟೇಫಿಟ್ ಹೆಲ್ತ್ ಅಂಡ್ ಫಿಟ್ನೇಸ್ ವರ್ಲ್ಡ್ ನಿಂದ ಬನ್ನೇರುಘಟ್ಟದ ಸ್ಟೇಫಿಟ್ ಸಂಸ್ಥೆಯ ಆವರಣದಲ್ಲಿಂದು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ 40 ಸಿ.ಆರ್.ಪಿ.ಎಫ್ ಯೋಧರ ಚಿತ್ರವನ್ನು ಒಂದೂವರೆ ಗಂಟೆಯಲ್ಲಿ ರಚಿಸಿದ ಕಲಾವಿದ ಡಾ. ಹರ್ಷ ಲಿಮ್ಕಾ ವಲ್ಡ್ ರೆಕಾರ್ಡ್, ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಲು ಮುಂದಾಗಿದ್ದಾರೆ.
ಜತೆಗೆ ಹರ್ಷೋದ್ಘಾರದ ನಡುವೆ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅವರ ಚಿತ್ರವನ್ನು ಸಹ ಆಕರ್ಷಕವಾಗಿ ರಚಿಸಿ ಅವರು ಜನಮನ ಸೂರೆಗೊಂಡರು.
ಟ್ರೆಡ್ ಮಿಲ್ ನಲ್ಲಿ ನಡೆಯುತ್ತಾ, ಮೊಬೈಲ್ ನಲ್ಲಿ ಸಿ.ಆರ್.ಪಿ.ಎಫ್ ಯೋಧರ ಚಿತ್ರ ವೀಕ್ಷಿಸುತ್ತಾ ಡಾ. ಹರ್ಷ ಅವರು ಕಲಾ ರಚನೆ ಮಾಡಿದ್ದು, ವಿಶೇಷವಾಗಿತ್ತು. ಸ್ವಲ್ಪವೂ ಆಯಾಸಗೊಳ್ಳದೇ “ಸದೃಢ ಭಾರತ – ಫಿಟ್ ಇಂಡಿಯಾ” ಸಂದೇಶವನ್ನು ಸಹ ಅವರು ದೇಶದ ಜನರಿಗೆ ರವಾನಿಸಿದರು. ತಮ್ಮ ದೇಶ ಪ್ರೇಮದ ಪ್ರಯತ್ನ ಮತ್ತು ಸಾಹಸವನ್ನು ವಿಶ್ವ ದಾಖಲೆಗಾಗಿ ಡಾ. ಹರ್ಷ ಸಲ್ಲಿಸಲಿದ್ದಾರೆ.
ದೇಶ ವಿದೇಶಗಳ ಹಲವಾರು ಗಣ್ಯರ ಚಿತ್ರಗಳನ್ನು ಬಿಡಿಸಿ ಹೆಸರುವಾಸಿಯಾಗಿರುವ ಡಾ. ಹರ್ಷ, ಪುಲ್ವಾಮ ದಾಳಿ ನಡೆದ ಸ್ಮರಣಾರ್ಥ ಇಂದು ದೇಶ ಪ್ರೇಮ ಮೆರೆದರು. ಅವರು ರಚಿಸಿದ ಎಲ್ಲಾ 40 ಚಿತ್ರಗಳು ಸಹ ವಿಭಿನ್ನವಾಗಿದ್ದವು. ನೈಜತೆ ಎದ್ದು ಕಾಣುತ್ತಿತ್ತು.