ಬಳ್ಳಾರಿ,ಜ.27-ಗ್ರಾಮಾಂತರ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿಶ್ವ ಲಿಂಗಾಯತ ಮಹಾಜನ ಪರಿಷತ್ ನಿಂದ ಅಗತ್ಯ ಸಹಕಾರ ನೀಡುವುದಾಗಿ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಿವಾಸ್ ಪಾಟೀಲ್ ತಿಳಿಸಿದ್ದಾರೆ.
73ನೇ ಗಣರಾಜ್ಯೋತ್ಸವ ಅಂಗವಾಗಿ ಚೇಳ್ಳಗುರ್ಕಿಯ ಶ್ರೀ ರ‍್ರಿಸ್ವಾಮಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂರಾರು ಮಕ್ಕಳಿಗೆ ಮಾಸ್ಕ್, ನೋಟ್ ಬುಕ್ಸ್ ಮತ್ತು ಹಾಲು ಕುಡಿವ ಗ್ಲಾಸುಗಳನ್ನು ವಿಶ್ವ ಲಿಂಗಾಯತ ಮಹಾಜನ ಪರಿಷತ್ ನಿಂದ ಉಚಿತವಾಗಿ ನೀಡಿದ ಬಳಿಕ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳ ಮಕ್ಕಳು ಕೆಲವೊಂದು ಅಗತ್ಯತೆಗಳಿಂದ ವಂಚಿತರಾಗಿದ್ದಾರೆ. ಅಂತಹ ಮಕ್ಕಳಿಗೆ ಪರಿಷತ್ ನಿಂದ ಅಗತ್ಯ ನೆರವು ನೀಡಲು ಉತ್ಸುಕರಾಗಿದ್ದೇವೆ ಎಂದರು.
ಪರಿಷತ್ ರಾಜ್ಯ ಉಪಾಧ್ಯಕ್ಷ ದೊಡ್ಡಬಸವನಗೌಡ ಚೇಳ್ಳಗುರ್ಕಿ ಇವರು ಸಹ ಮಾತನಾಡಿ, ವಿಶ್ವ ಲಿಂಗಾಯತ ಮಹಾಜನ ಪರಿಷತ್ ಕೇವಲ ಸಾಮಾಜಿಕ ಸಂಘಟನೆಗೆ ಮಾತ್ರವಲ್ಲದೆ, ಶೈಕ್ಷಣಿಕ ಹಾಗೂ ಆರೋಗ್ಯ ಸೇವೆಯಂತಹ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲು ಸಂಕಲ್ಪ ತೊಟ್ಟಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ್ ಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ್, ಆರ್.ಚೆನ್ನನಗೌಡ ಸೇರಿದಂತೆ ಇತರೆ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು, ಶಾಲಾ ಸಹಶಿಕ್ಷಕರು ಮತ್ತು ಗ್ರಾಮದ ಗುರು-ಹಿರಿಯರು ಇದ್ದರು.