ಮಧುಗಿರಿ : ಕರೋನಾ 3 ನೇ ಅಲೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಸೊಂಕಿಗೆ ತುತ್ತಾಗುತ್ತಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಕೊರಟಗೆರೆ ತಾಲೂಕಿನಲ್ಲಿ 9 ವಿದ್ಯಾರ್ಥಿಗಳು ಮತ್ತು 8 ಶಿಕ್ಷಕರಿಗೆ, ಮಧುಗಿರಿ ತಾಲೂಕಿನಲ್ಲಿ 23 ವಿದ್ಯಾರ್ಥಿಗಳಿಗೆ ಮತ್ತು 24 ಶಿಕ್ಷಕರಿಗೆ, ಪಾವಗಡ ತಾಲೂಕಿನಲ್ಲಿ 17 ವಿದ್ಯಾರ್ಥಿಗಳಿಗೆ ಮತ್ತು 4 ಜನ ಶಿಕ್ಷಕರಿಗೆ , ಶಿರಾ ತಾಲೂಕಿನಲ್ಲಿ 58 ವಿದ್ಯಾರ್ಥಿಗಳಲ್ಲಿ ಮತ್ತು 20 ಶಿಕ್ಷಕರಿಗೆ ಕರೋನಾ ದೃಡಪಟ್ಟಿದ್ದು, ಇಲ್ಲಿಯವರೆಗೂ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 246 ವಿದ್ಯಾರ್ಥಿಗಳು ಸೋಂಕಿಗೆ ತುತ್ತಾಗಿದ್ದು, 61 ವಿದ್ಯಾರ್ಥಿಗಳು ಗುಣಮುಖರಾಗಿದ್ದು, ಉಳಿದ 195 ಸಕ್ರಿಯ ಪ್ರಕರಣಗಳಲ್ಲಿ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು
70 ಶಿಕ್ಷಕರಲ್ಲಿ 5 ಜನ ಗುಣಮುಖರಾಗಿದ್ದು, 65 ಶಿಕ್ಷಕರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಸೇರಿ 12 ವಿದ್ಯಾರ್ಥಿಗಳಿಗೆ ಕರೋನಾ ದೃಡಪಟ್ಟಿದೆ.
ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ಸೋಮವಾರ ಒಂದೇ ದಿನ 8 ಮತ್ತು 9 ನೇ ತರಗತಿಯ 24 ವಿದ್ಯಾರ್ಥಿಗಳು ಕೋವಿಡ್ ಗೆ ತುತ್ತಾಗಿದ್ದಾರೆ. ಮೊದಲು ಒಬ್ಬ ವಿದ್ಯಾರ್ಥಿಗೆ ಕರೋನಾ ಸೊಂಕು ದೃಡಪಟ್ಟಿತ್ತು. ಈತನ ಸಂಪರ್ಕದಲ್ಲಿದ್ದ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ನಡೆಸಿದಾಗ ಅವರಿಗೂ ಸೊಂಕು ಇರುವುದು ದೃಡಪಟ್ಟಿದೆ. ಎರಡೂ ಶಾಲೆ ಮತ್ತು ಆವರಣವನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಜ. 22 ರ ವರೆಗೆ ರಜೆ ನೀಡಲಾಗಿದೆ.
ಗಡಿ ಭಾಗದ ಶಾಲಾ ಕಾಲೇಜಿನಲ್ಲಿ ಕರೋನಾ ಉಲ್ಬಣ : ತಾಲೂಕಿನ ಆಂದ್ರ ಗಡಿ ಭಾಗದಲ್ಲೂ ಕರೋನಾ ಸ್ಪೋಟಗೊಳುತ್ತಿದ್ದು, ಕೊಡಿಗೇನಹಳ್ಳಿ ಸರ್ಕಾರಿ ಶಾಲೆ ಸೇರಿದಂತೆ ಪಿಯು ಕಾಲೇಜಿನಲ್ಲಿ ಕರೋನಾ ಪಾಸೀಟಿವ್ ಪ್ರಕರಣಗಳು ದೃಡಪಟ್ಟಿವೆ.
ತಾಲ್ಲೂಕಿನ ಕೊಡಿಗೇನಹಳ್ಳಿಯ ಸರ್ಕಾರಿ ಬಾಲಕರ ಪಾಠ ಶಾಲೆಯ ಭೋದಕ ಸಿಬ್ಬಂದಿ ಹಾಗೂ ಸರ್ವೋಯ ಪಿಯು ಕಾಲೇಜಿನ ಇಬ್ಬರು ಉಪನ್ಯಾಸಕರು ಸೇರಿದಂತೆ ಇಬ್ಬರು ವಿಧ್ಯಾರ್ಥಿಗಳಿಗೆ ಕರೋನಾ ದೃಡಪಟ್ಟಿದೆ.
ಸರ್ವೋದಯ ಪಿಯು ಕಾಲೇಜಿನ ಶೇ 50% ರಷ್ಟು ವಿಧ್ಯಾರ್ಥಿಗಳು ಮಾತ್ರ ಕೋವಿಡ್ ಪರೀಕ್ಷೆ ಮಾಡಿಸಿದ್ದು, ಉಳಿದ ವಿಧ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡುವಂತೆ ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಎಂದು ಪ್ರಾಂಶುಪಾಲ ಕೆ.ವಿ ಸತ್ಯನಾರಾಯಣ ತಿಳಿಸಿದ್ದಾರೆ.
ಹೋಬಳಿಯ ಬಹುತೇಕ ಶಾಲಾ ಕಾಲೇಜಿನ ವಿಧ್ಯಾರ್ಥಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ, ಮಾಸ್ಕ್ ಇಲ್ಲದೆ ಬರುತಿದ್ದು ಭೋದಕ ಸಿಬ್ಬಂದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಶೈಕ್ಷಣಿಕ ಜಿಲ್ಲೆಯಲ್ಲಿ ನಿರಂತರವಾಗಿ ವಿದ್ಯಾರ್ಥಿಗಳು ಕೋವಿಡ್ ಗೆ ತುತ್ತಾಗುತ್ತಿದ್ದು, ಮಧುಗಿರಿ ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ 36 ವಿದ್ಯಾರ್ಥಿಗಳಿಗೆ ಸೋಂಕು ದೃಡಪಟ್ಟಿದೆ. ಎಲ್ಲರಿಗೂ ಚಿಕಿತ್ಸೆ ನೀಡುತ್ತಿದ್ದು, ಆರೋಗ್ಯವಾಗಿದ್ದಾರೆ. 10 ಕಿಂತ ಹೆಚ್ಚಿನ ಪ್ರಕರಣಗಳು ಕಂಡು ಬಂದ ಶಾಲೆಗಳಿಗೆ ರಜೆ ನೀಡಲಾಗಿದ್ದು, ಎಲ್ಲಾ ಶಾಲೆಗಳಲ್ಲೂ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಶಿಕ್ಷಕರಿಗೆ ಸೂಚಿಸಲಾಗಿದೆ. – ಕೃಷ್ಣಮೂರ್ತಿ, ಡಿಡಿಪಿಐ.
ವರದಿ:ನಾಗೇಶ್ ಜೀವಾ ಮಧುಗಿರಿ