ಪುರಂದರದಾಸರ ಆರಾಧನಾ ಪ್ರಯುಕ್ತ ಈ ಲೇಖನ ಕುಸುಮ
ಹರಿದಾಸರ ಸ್ಮರಣೆಯೇ ಉತ್ಸವ. ಉತ್ಸಾಹದಿಂದ ಸ್ಮರಣೆ ಮಾಡುವ ಮನಸುಗಳಿಗೆ, ಸಾಧನಜೀವಿಗಳಿಗೆ, ಜಿಜ್ಞಾಸುಗಳಿಗೆ, ಸಜ್ಜನರಿಗೆ, ಸದಾ ಸಂಭ್ರಮ. ಸಾಧನಭೂಮಿ ನಮ್ಮ ಭಾರತ, ಇಂತಹ ಪುಣ್ಯಭೂಮಿಯಲ್ಲಿ ಸಜ್ಜನರನ್ನು, ಪಾಮರರನ್ನು ಉದ್ಧರಿಸಲೆಂದೇ ಋಷಿಗಳು, ಸಂತಮಹ0ತರು ಹರಿದಾಸರುಗಳು ಅವತರಿಸಿದರು. ಅಂತಹ ಹರಿದಾಸರ ಸ್ಮರಣೆ ಕುಲಕೋಟಿ ಉದ್ಧರಣೆ.
ವೇದವ್ಯಾಸರ ಜ್ಞಾನಕಾರ್ಯದ ನೇತೃತ್ವವಹಿಸಲೆಂದೇ ವಾಯುದೇವರು ಆಚಾರ್ಯ ಮಧ್ವರಾಗಿ ಅವತರಿಸಿ ಬಂದರು. ಶ್ರೀಮದಾಚಾರ್ಯರ ಭಗವಂತನನ್ನು ಮುಕ್ತಕಂಠದಿ0ದ ಹಾಡುವ, ಭಕ್ತುö್ಯದ್ರೇಕದಿಂದ ಪಾರ್ಥಸಖನ ಧ್ಯಾನದಲ್ಲಿ ಮೈಮರೆಯುವ ದ್ವಾದಶಸ್ತೋತ್ರದಿಂದಲೇ ಆರಂಭವಾದ, ಈ ದಾಸೋಹಂ ಎಂಬ ನುಡಿ ದಾಸಸಾಹಿತ್ಯಕ್ಕೆ ಅಮೃತದ ಸಿಂಚನವಾಯಿತು. ನರಹರಿತೀರ್ಥರಿಂದ ಮುಂದುವರಿದ ಈ ದಾಸಾಮೃತ ಹರಿದಾಸರ ಉಸಿರಾಯಿತು.
ಗೀತನರ್ತನದಿಂದ ಕೃಷ್ಣನ್ನ ಪೂಜಿಸುವ ಪುರಂದರದಾಸರ0ತಹ ಕೃತಿಗಳನ್ನು ಹಾಡುವುದೇ ಸಂಭ್ರಮ. ದಾಸರು ಹಾಡುಗಳ ದಿಬ್ಬಣ ಹೊರಡಿಸಿ ನಾದಲಯಭಾವದ ರಸದೌತಣ ನೀಡಿದರು. ಇಡೀ ಸಂಗೀತ ಕ್ಷೇತ್ರವನ್ನು ಸಮೃದ್ಧ ಗೊಳಿಸಿದ ಪಿತಾಮಹರು. ಇದು ಹಾಡಿಂದ ಹಾಡಿಗೆ, ಒಬ್ಬರಿಂದ ಇನ್ನೊಬ್ಬರಿಗೆ, ಮೌಖಿಕ ಪರಂಪರೆಯಾಗಿ ಬಂತು. ಪುರಂದರದಾಸರು ಲಕ್ಷ ಲಕ್ಷ ಹಾಡುಗಳನ್ನು ರಚಿಸಿದ್ದಾರೆಂಬ ಸಂಪ್ರದಾಯದ ಮಾತು ಇದ್ದರೂ ದೊರೆತಿರುವುದು ಅಲ್ಪ. ಈ ಕಾಲಕ್ಕೆ, ಸಜ್ಜನ ಸಮುದಾಯಕ್ಕೆ ಅದು ಸಿಗುತ್ತಿರುವುದು ದಾಸಸಾಹಿತ್ಯದ ಮೂಲಕ. ಈಸಬೇಕು ಇದ್ದು ಜಯಿಸಬೇಕು, ಮಾನವ ಜನ್ಮ ದೊಡ್ಡದು ಅದ ಹಾನಿ ಮಾಡಲುಬೇಡಿ ಹುಚ್ಚಪ್ಪಗಳಿರಾ, ಹಾಗೆಯೇ ಪುರಂದರದಾಸರ ಬಹು ಉಪದೇಶಾತ್ಮಕವಾದ, ಮನೋಜ್ಞವಾದ, ಕೃತಿಗಳಲ್ಲೊಂದು "ಮನವ ಶೋಧಿಸಬೇಕು ನಿಚ್ಚ" ಎಂಬ ಈ ಕೃತಿಯಲ್ಲಿ ಪುರಂದರದಾಸರು ಸಾರ್ವತ್ರಿಕವಾದ ಸಾರ್ವಕಾಲಿಕವಾದ ಉಪದೇಶವನ್ನು, ಮನುಕುಲಕ್ಕೆ ಸಂದೇಶವೊ0ದನ್ನು ನಮಗೆಲ್ಲರಿಗೂ ನೀಡಿದ್ದಾರೆ. ಸತ್ವಗುಣದ ಉನ್ನತಿಗಾಗಿ ಜೀವಿಯು ಆಧ್ಯಾತ್ಮಿಕ ಜೀವನದಲ್ಲಿ ಮೆಟ್ಟಿಲು ಮೆಟ್ಟಿಲಾಗಿ ಮೇಲೆ ಏರಬೇಕಾದ ಸೂತ್ರವೊಂದನ್ನು ನೀಡಿದ್ದಾರೆ. ಮನನ ಮಾಡಿದಷ್ಟು ವಿವಿಧ ಅರ್ಥಗಳು ತೆರೆದುಕೊಳ್ಳುವ ಕೃತಿ ಇದು.
ಮನವ ಶೋಧಿಸಬೇಕು ನಿಚ್ಚ.
ಭಗವಂತನಿಗೆ ನಾವು ಮಾಡಿದ ದ್ವಂದ್ವ ಕರ್ಮಗಳೆಲ್ಲವನ್ನು ಸಮರ್ಪಣೆ ಮಾಡುತ್ತೇವೆಯೋ, ಅದೇ ರೀತಿ ದಿನದಿನವು ಅನುದಿನವು ಪ್ರತಿಯೊಬ್ಬರೂ ನಮ್ಮ ಮನಸ್ಸನ್ನು ನಾವು ಅರಿತುಕೊಳ್ಳಲು ಯತ್ನಿಸಬೇಕು. ಏಕಾದಶೇಂದ್ರಿಯಗಳಲ್ಲಿ ಮನವು ಪ್ರಧಾನವಾದುದು. ಅವು ನಾವು ಮಾಡುವ ಪಾಪಪುಣ್ಯದ ಕೆಲಸಗಳನ್ನು, ಸತ್ಕರ್ಮ ದುಷ್ಕರ್ಮಗಳನ್ನು ನಿರ್ಧರಿಸುತ್ತದೆ. ಅದಕ್ಕಾಗಿ ನಾವು ಮನದಲ್ಲಿ ಹುದುಗಿರುವ ಅರಿಷಡ್ವರ್ಗಗಳನ್ನು, ಅರಿಯಬೇಕು. ನಾವು ಉಪಯೋಗಿಸುವ ಜಲವನ್ನು ಹೇಗೆ ಕೊಳೆ ಇಲ್ಲದಂತೆ ಶೋಧಿಸುತ್ತೇವೆ ಅದರಂತೆ ಕಾಮ ಕ್ರೋಧ ಮದ ಮತ್ಸರ ಇವುಗಳಿಂದ ನಮ್ಮ ಮನವು ಕೊಳಕಾಗದಂತೆ ನಿರ್ಮಲಗೊಳಿಸಿಕೊಳ್ಳಬೇಕು. ಹಾಗೆಯೇ ಅಂದ0ದು ನಾವು ಮಾಡಿದ ಪಾಪ ಕಾರ್ಯಗಳನ್ನು, ಪುಣ್ಯ ಕಾರ್ಯಗಳನ್ನು ತುಲನೆ ಮಾಡಿ ನೋಡಬೇಕು. ಹೇಗೆ ವ್ಯಾಪಾರಿಯು ದಿನದ ಅಂತ್ಯದಲ್ಲಿ ಅಂದಿನ ಆಯವ್ಯಯಗಳನ್ನು ಖರ್ಚು ಆದಾಯಗಳನ್ನು ಹೊಂದಿಸಿ ನೋಡುತ್ತಾನೆಯೋ ಅದರಂತೆ ನಾವು ಗೈದ ಪಾಪ ಪುಣ್ಯದ ಕೆಲಸಗಳನ್ನು ತೂಗಿ ನೋಡಿದಾಗ ನಮಗೆ ಅರಿವಾಗಿ ನಾವು ನಮ್ಮ ಜೀವನಕ್ರಮವನ್ನು ಸರಿ ಪಡಿಸಿಕೊಂಡು, ಪುಣ್ಯಕಾರ್ಯಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬೇಕು ಅಂದು ಉಪದೇಶಿದ್ದಾರೆ.
ಧರ್ಮ ......ಭಜಿಸಿ
ಈ ಕಾರ್ಯ ಸುಲಭವಾದುದಲ್ಲ. ಅದಕ್ಕೆ ಜ್ಞಾನದ ಅಗತ್ಯವಿದೆ. ಮೊದಲು ಸದಾಚಾರ ಸಂಹಿತೆ ನಿರೂಪಿಸುವಂತೆ ಯಾವುದು ಧರ್ಮ? ಯಾವುದು ಅಧರ್ಮ? ಎಂಬುದನ್ನು ಗುರೂಪದೇಶದಿಂದ, ಅಧ್ಯಯನದಿಂದ, ಮನನದಿಂದ ನಿರ್ಧರಿಸಿಕೊಳ್ಳಬೇಕು. ನಂತರ ಅಧರ್ಮ ಕಾರ್ಯಗಳನ್ನು ನಿರ್ಮೂಲಗೊಳಿಸಿಕೊಳ್ಳಲು ಹೇಗೆ, ಬೇರು ಕತ್ತರಿಸಿದರೆ ವೃಕ್ಷವೇ ಒಣಗಿ ಒಳಗೆ ಹೋಗುವುದು, ಬಿದ್ದು ಹೋಗುವುದು, ಹಾಗೆ ಅಧರ್ಮ ವೃಕ್ಷದ ಬೇರುಗಳು ಯಾವುದೆಂದು ಅರಿತು ಆಚರಿಸುವುದನ್ನು, ಮಾಡುವುದನ್ನು ಬಿಡಬೇಕು.
ಬರೀ ಧರ್ಮದ ಬೇರುಗಳನ್ನು ಕತ್ತರಿಸಿ ಧರ್ಮಮಾರ್ಗ ಯಾವುದೆಂದು ಅರಿತು ಅದರಂತೆ ನಡೆಯಬೇಕು. ನಡೆದಂತೆ ನುಡಿಯಬೇಕು. ಎಲ್ಲಕ್ಕೂ ಮಿಗಿಲಾಗಿ ಹೃದಯದಲ್ಲಿ ಭಕ್ತಿಭಾವ ತುಂಬಿರಬೇಕು. ನವವಿಧ ಭಕ್ತಿಗಳಲ್ಲಿ ತನಗೆ ಸಾಧ್ಯವಾದ ಭಕ್ತಿ ಮಾರ್ಗದಿಂದ ಪರಮಾತ್ಮನನ್ನು ಪೂಜಿಸಬೇಕು ಎಂದು ತಿಳಿಹೇಳಿದ್ದಾರೆ.
ಮನವ ......ಭಂಗಿಸಿ
ಮನಸ್ಸು ಬಹು ಚಂಚಲ. ಅದು ಸದಾ ವಿಷಯ ಸುಖವನ್ನೇ ಬಯಸುತ್ತದೆ. ಅಂತಹ ಚಂಚಲ ಮನಸ್ಸನ್ನು ನಿಗ್ರಹಿಸಬೇಕು. ಅದಕ್ಕೊಂದು ದಾರಿ ಎಂದರೆ ವಿಷಯಸುಖಗಳಲ್ಲಿ ನಾವು ಮಗ್ನರಾಗದೇ ದೇಹವನ್ನು ಉಪವಾಸ ಅನುಷ್ಠಾನ, ಆಚರಣೆಗಳಿಂದ ದಂಡಿಸಬೇಕು. ಹೀಗೆ ಜ್ಞಾನ ಭಕ್ತಿ ವೈರಾಗ್ಯದಿಂದ ನೆನೆದು ಭಗವಂತನ ದರ್ಶನಕ್ಕಾಗಿ ಹಂಬಲಿಸಿದರೆ, ಅವನ ಸಾಕ್ಷಾತ್ಕಾರಕ್ಕಾಗಿ ಹಾತೊರೆದರೆ, ಕೊನೆಗೊಮ್ಮೆ ಅಪರೋಕ್ಷ ಜ್ಞಾನವಾಗುವುದು. ಭಗವಂತನು ನಮ್ಮ ಹೃದಯ ಕಮಲದಲ್ಲಿ ಬಿಂಬನಾಗಿ ನೆಲೆಸಿರುವನೆಂಬ ಮಹಾತ್ಮ ಜ್ಞಾನ ಉಂಟಾಗುವುದು. ಇಂತು ಸನ್ಮಾರ್ಗದಲ್ಲಿ ನೆಡೆದಾಗ ಕೊನೆಗೊಮ್ಮೆ ಮುಕ್ತಿ ದೊರೆತೇ ದೊರೆಯುತ್ತದೆ. ಪರಮಾತ್ಮ ಇಂತಹ ಸಾತ್ವಿಕ ಜೀವಿಗಳಿಗೆ ಕರುಣಿಸಿ, ಮುಕ್ತಿ ಕೊಟ್ಟೆ ಕೊಡುತ್ತಾನೆ.
ಆತನ...... ಪುರಂದರವಿಠಲ
ಭಗವಂತನ ಭಕ್ತರಿಗೆ ತೊಂದರೆಗಳು ಉಂಟಾಗುವುದಿಲ್ಲ. ಅವರು ಎಲ್ಲ ಕಷ್ಟಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಲ್ಲರು. ಭಗವಂತ ಅವರನ್ನ ಕಾಪಾಡುತ್ತಾನೆ. ಆದ್ದರಿಂದ ಅವನೇ ಗತಿ. ಅವನೇ ಮತಿ. ಅವನೇ ಸ್ಥಿತಿ. ಅವನಾದರೋ ಶುದ್ಧ ಚಿನ್ಮಯ ಸ್ವರೂಪ. ಅವನಿಗೆ ಯಾವ ಪಾಪ, ದೋಷದ ಲೇಪಗಳಿಲ್ಲ. ನಿರ್ದೋಷ, ಭಕ್ತವತ್ಸಲ ಪರಮಾತ್ಮನೇ ಮುಕ್ತಿಪ್ರದನು. ಅದನ್ನರಿತು ಅವನಲ್ಲಿ ಭಕ್ತಿಯಿಂದ ಆರಾಧಿಸಿದರೆ ಮುಕ್ತಿಯನ್ನು ಪಡೆಯಿರಿ ಎಂದು, ಪುರಂದರದಾಸರು ಈ ಕೃತಿಯಲ್ಲಿ ಸದ್ಭಕ್ತರಿಗೆ, ನೀತಿ ಮಾರ್ಗವನ್ನು ಸದಾಚಾರವನ್ನು, ಮನಮುಟ್ಟುವಂತೆ ಮನೋಜ್ಞವಾದ ಸಂದೇಶದ ಆಯವ್ಯಯ ಪಟ್ಟಿ (ಬ್ಯಾಲೆನ್ಸ ಶೀಟ್) ವೊಂದನ್ನು ಈ ಕೃತಿಯ ಮೂಲಕ ಅಂದೇ ನೀಡಿದ್ದಾರೆ.
ಸಹಸ್ರಾರು ವರ್ಷಗಳ ಪರಂಪರೆಯ ಕನ್ನಡ ಸಾಹಿತ್ಯದಲ್ಲಿ ದಾಸಸಾಹಿತ್ಯದ ಕೊಡುಗೆ ಅತ್ಯಂತ ಮಹತ್ವದ್ದು. ಅನುಪಮವಾದ ನಾದ ಶೈಲಿಯ, ದಾಸಸಾಹಿತ್ಯ ಐದು ಶತಮಾನಗಳ ಕಾಲ ಕನ್ನಡ ಜನರಿಗೆ ಸಂಸ್ಕಾರ, ಸಂಸ್ಕೃತಿ ಪುಳಕ, ರೋಮಾಂಚನ, ಹಾಗೂ ಸಾಧನೆಗೆ ಅನುವು ಮಾಡಿಕೊಟ್ಟ ದಿವ್ಯ ಸಾಹಿತ್ಯವಾಗಿ ಪರಿಣಮಿಸಿದೆ. ಬಹಳಷ್ಟು ಮಹಿಳೆಯರ ನರನಾಡಿಗಳಲ್ಲಿ ನಿರಂತರ ಹರಿಯುತ್ತಿರುವ ಅಂತರಗ0ಗೆಯಾಗಿದೆ ದಾಸಸಾಹಿತ್ಯ. ನಮ್ಮೊಳಗೆ, ನಮ್ಮೊಡನೆ ಸದಾ ಇರುವ ಆ ದೇವರೇ ನಮ್ಮ ನಿಜವಾದ ಸಖ. ಆ ಸಖನಿಂದಲೇ ನಮಗೆ ಸುಖ ಎಂಬ ಶಾಶ್ವತ ಸತ್ಯವನ್ನು ಅನುಭವಕ್ಕೆ ತಂದು ಕೊಟ್ಟಿದ್ದು ದಾಸಸಾಹಿತ್ಯ.
ಜೀವನದಲ್ಲಿ ನೆಮ್ಮದಿ, ಸಾಂತ್ವನ, ಧನ್ಯತೆ, ಯಶಸ್ಸು, ಶ್ರೇಯಸ್ಸು, ಇಷ್ಟನ್ನೂ ಒಟ್ಟಿಗೆ ತಂದುಕೊಡುವ ಸಾಧ್ಯತೆಯನ್ನು ದಾಸಸಾಹಿತ್ಯ ಪಡೆದುಕೊಂಡಿದೆ. ಹಾಗಾಗಿ ಇದು ಅನುಭವದ ಅಡುಗೆ. ಭಕ್ತಿಯ ಕಣಜ. ಪರಮಾತ್ಮನ ಸನ್ನಿಧಾನ, ನೊಂದವರ ಭರವಸೆ, ಯುವಜನರ, ಸ್ತ್ರೀಯರ ಆದರ್ಶ.ದೈವಭಕ್ತಿ, ಧರ್ಮಶ್ರದ್ಧೆ, ಆತ್ಮೋದ್ಧಾರ, ಸಮಾಜಮುಖೀ ಚಿಂತನೆ ಪ್ರಜ್ವಲಿಸಲು ದಾಸಸಾಹಿತ್ಯ ಅತ್ಯಂತ ಅಗತ್ಯ ಹಾಗೂ ಸಹಕಾರಿ. ದಾಸರು ಧರ್ಮಸಂದೇಶಗಳನ್ನು ಕೊಟ್ಟವರು. ಉತ್ತಮ ಮೌಲ್ಯಗಳನ್ನು ನೆಟ್ಟವರು. ಅರಿಷಡ್ವರ್ಗಗಳನ್ನು ಬಿಟ್ಟವರು. ಹಾಗಾಗಿಯೇ ನೆಮ್ಮದಿಯ ನಡುಮನೆಯಾದ ದಾಸಸಾಹಿತ್ಯ ಭಕ್ತಿರಸ ಜಿನುಗುವ ಜೇನಾಯಿತು. ಮನುಕುಲಕ್ಕೆ ಮಾರ್ಗದರ್ಶನವಾಯಿತು.
ನವಕೋಟಿ ನಾರಾಯಣರಾಗಿದ್ದ ಶ್ರೀನಿವಾಸ ನಾಯಕರು ಐಶ್ವರ್ಯದಲ್ಲಿ ನಾರಾಯಣರಾಗಿದ್ದವರು. ನಾನೇ ಶ್ರೀಮಂತನೆ0ಬ ಭಾವದೊಂದಿಗೆ ಅತ್ಯಂತ ಕೃಪಣತನದ ಬುದ್ಧಿಯೂ ಇತ್ತು. ಅಂತಸ್ತಿನಲ್ಲಿ ಉಪ್ಪರಿಗೆ ಮನೆ, ಕೊಪ್ಪರಿಗೆ ಹಣವಿದ್ದ ಭೂಪತಿ, ಸಾಹಿತ್ಯದಲ್ಲಿ ಐದು ಶತಮಾನಗಳ ಕಾಲ ಉಳಿದು ಬಂದ ಅಪೂರ್ವ ದಾಸಸಾಹಿತ್ಯನಿಧಿಯನ್ನು ನೀಡಿದ ಮಹಾತ್ಮರು. ಜ್ಞಾನದಲ್ಲಿ ಸಕಲ ಶಾಸ್ತ್ರಕೋವಿದರಾಗಿ, ಅಪರೋಕ್ಷ ಜ್ಞಾನಿಗಳೆಂದೆನಿಸಿಕೊ0ಡವರು. ಸಂಗೀತ ಕ್ಷೇತ್ರದಲ್ಲಿ ಕರ್ನಾಟಕ ಸಂಗೀತ ಪಿತಾಮಹ ಎಂದೇ ಪ್ರಸಿದ್ಧರು. ಭಕ್ತಿಯಲ್ಲಿ ಭಕ್ತಿ ಸೂತ್ರಗಳನ್ನು ಬರೆದ ನಾರದರ ಅವತಾರವೆನಿಸಿದರು. ಗೀತನರ್ತನದಿಂದ ಕೃಷ್ಣನ ಪೂಜಿಸುವ ಪೂತಾತ್ಮ ಪುರಂದರ ದಾಸರಿವರಯ್ಯ, ದಾಸರೆಂದರೆ ಪುರಂದರದಾಸರಯ್ಯ ಎಂದು ಗುರುಗಳಾದ ವ್ಯಾಸರಾಜರಿಂದಲೇ ಮುಕ್ತ ಪ್ರಶಂಸೆಗೆ ಪಾತ್ರರಾದವರು. ಭಗವಂತನ ಮಹಿಮೆ ತಿಳಿದು ತಮ್ಮ ಲೋಭದಿಂದಾಗಿ ಮುದುಕನ ಅವತಾರದಲ್ಲಿ ಬಂದ ಭಗವಂತನನ್ನು ಅಲೆದಾಡಿಸಿದ ತಪ್ಪನ್ನು ನೆನೆದು `ಬಿನ್ನಹಕೆ ಬಾಯಿಲ್ಲವಯ್ಯ' ಎಂದು ಅವನಲ್ಲಿ ದೀನರಾಗಿ ಮೊರೆಯಿಟ್ಟರು. ಹೆಂಡತಿಯಿ0ದ ಸನ್ಮಾರ್ಗದ ದಾರಿ ಕಂಡಿದ್ದರಿ0ದ `ಹೆಂಡತಿ ಸಂತತಿ ಸಾವಿರವಾಗಲಿ' ಎಂದರು. ತ್ಯಾಗ ವೈರಾಗ್ಯದ ಮೂರ್ತಿಯಾದರು. ತಮ್ಮ ಎಲ್ಲಾ ಆಸ್ತಿ - ಆಕಾಂಕ್ಷೆಗಳ ಮೇಲೆ ಒಂದು ತುಳಸೀದಳ ಹಾಕಿ ಕೃಷ್ಣಾರ್ಪಣ ಎಂದು ಹೇಳಿದರು. ಅವೆಲ್ಲವನ್ನು ದಾನ ಮಾಡಿ ಲಜ್ಜೆ ಬಿಟ್ಟು, ಗೆಜ್ಜೆ ಕಟ್ಟಿ, ತಂಬೂರಿ ಜೋಳಿಗೆ ಹಿಡಿದು, ಮಧುಕರ ವೃತ್ತಿಗೆ ಬಂದರು. ತಂಬೂರಿ ಮೀಟಿದರು, ಭವಾಬ್ಧಿ ದಾಟಿದವರು.
ಮುಕುತಿಗೆ ಕಾರಣವಾದ ಮೂಗುತಿ
ವೃದ್ಧ ಬ್ರಾಹ್ಮಣನ ರೂಪದಲ್ಲಿ ಭಗವಂತ ಒಬ್ಬ ಚಿಕ್ಕ ಹುಡುಗನೊಡನೆ ಬಂದ. ನಾಯಕರನ್ನು ಬೇಡಿದ. ಹುಡುಗನ ಉಪನಯನಕ್ಕಾಗಿ ಏನಾದರೂ ದಾನ ಧರ್ಮ ಮಾಡಿ ಎಂದು. ಶ್ರೀಮಂತ ವ್ಯಾಪಾರಿಗಳಾಗಿದ್ದ ನಾಯಕರು, ಕೃಪಣತ್ವ ಜಿಪುಣತ್ವಗಳ ವಾರುಸುದಾರರಾಗಿದ್ದವರು. ಲೋಭದಿಂದ ದೃಷ್ಟಿ ಮಂಜಾಗಿದ್ದವರು. ಮುದುಕ ಆರು ತಿಂಗಳುಗಳ ಕಾಲ ನಾಯಕನ ಅಂಗಡಿಗೆ ಅಲೆದ. ಕಡೆಗೆ ಮುದುಕ ಹಣ್ಣು ಹಣ್ಣು ಮುದುಕನಾಗಿ ಈಗಲೋ ಆಗಲೋ ಇನ್ಯಾವಾಗಲೋ, ಈ ತನುವು ಪೋಗದಿರದೇ ಎಂಬ ಸ್ಥಿತಿ ತಲುಪಿದಾಗ, ಈ ಮುದುಕನ ಕಿರಿಕಿರಿ ತಾಳದೆ ನಾಯಕರು ಒಂದು ದಿನ ಅವನನ್ನು ಕರೆದು ಒಂದು ಚೀಲದಲ್ಲಿ ಇದ್ದ ದುಡ್ಡು ಅವನ ಮುಂದೆ ಸುರಿದರು. ಆರು ತಿಂಗಳು ಕಾದಿದ್ದು ಸಾರ್ಥಕವಾಯಿತು ಎಂದುಕೊ0ಡ. ವೃದ್ಧನ ಕಣ್ಣುಗಳಲ್ಲಿ ಧನ್ಯತಾಭಾವದಿಂದ ಆನಂದಾಶ್ರುಗಳು ಮೂಡಿದವು. “ಅವೆಲ್ಲಾ ಕರಗಿಸಲು ಸಂಗ್ರಹಿಸಲ್ಪಟ್ಟಿರುವ ಸವಕಲು ನಾಣ್ಯಗಳೆಂದು ಹೇಳಿ, ಇದರಲ್ಲಿ ಯಾವುದಾದರೂ ಒಂದು ನಾಣ್ಯವನ್ನು ತೆಗೆದುಕೊ ಎಂದು ಸೂಚಿಸಿದರು. ಮುದುಕ ಅವನ ಜಿಪುಣತನದ ಪರಮಾವಧಿಯನ್ನು ನೋಡಿ ನಗುತ್ತಾ `ನೀನಷ್ಟೇ ಅಲ್ಲ, ನಿನ್ನ ವ್ಯಾಪಾರ ವ್ಯವಹಾರ ಎಲ್ಲವೂ ಸವಕಲೇ' ಎಂದು ಮುದುಕ ಬಿಡಿಗಾಸೂ ಮುಟ್ಟದೇ ನೇರವಾಗಿ ವ್ಯಾಪಾರಿ ಶ್ರೀನಿವಾಸನಾಯಕರ ಮನೆಗೆ ಹೋದ. ನಾಯಕರ ಪತ್ನಿ ಸರಸ್ವತಿಬಾಯಿ ಅದೇ ತಾನೆ ತುಳಸೀ ಪೂಜೆ ಮಾಡುತ್ತಿದ್ದರು. ದೈವಭಕ್ತಳೂ, ಸಾತ್ವಿಕ ಶ್ರೇಷ್ಠಳೂ ಆದ ಆಕೆಯನ್ನು ಮಗುವಿನ ಉಪನಯನಕ್ಕಾಗಿ ಅವಳಲ್ಲಿ ಸಹಾಯ ಬೇಡಿದರು.
ನನ್ನದು ಎನ್ನುವುದು ಏನೂ ಇಲ್ಲವಲ್ಲ. ಎಲ್ಲಾ ನಮ್ಮ ಯಜಮಾನರದು” ಎಂದ ಆಕೆಗೆ, ಜಾಣ ಮುದುಕ, “ನಿಮ್ಮ ತಂದೆತಾಯಿಗಳು ಮದುವೆ ಕಾಲದಲ್ಲಿ ಆಪತ್ಕಾಲಕ್ಕೆ, ವಿಪತ್ಕಾಲಕ್ಕೆ, ಆಪಧ್ದರ್ಮಕ್ಕೆ ಅನುವಾಗಿರಲೆಂದು ಅಮೂಲ್ಯ ಮೂಗುತಿ ಒಂದನ್ನು ಕೊಟ್ಟಿದ್ದಾರೆ. ಅದನ್ನೇನಾದರೂ ನೀವು ಕೊಟ್ಟರೆ?” “ಕೊಟ್ಟರೆ!” ಅಚ್ಚರಿಯಿಂದ ಸರಸ್ವತಿಬಾಯಿ ಕೇಳಿದಳು. ಆ ಮೂಗುತಿಯನ್ನು ಕೊಟ್ಟರೆ ನಿಮ್ಮ ತಾಯಿತಂದೆಗಳ, ತವರು ಮನೆಯ ಇಪ್ಪತ್ತೊಂದು ಕುಲಕೋಟಿ ಉದ್ಧಾರವಾಗುತ್ತದೆ. ಅಷ್ಟೇ ಅಲ್ಲ, ನಿನ್ನ ಪತಿಯಂತಹ ಪತಿಯೂ ಕೂಡ ಧರ್ಮಮಾರ್ಗಕ್ಕೆ ಬರುವ ಸಾಧ್ಯತೆ ಇದೆ.” ತನ್ನ ಈ ಜೀವಿತಕಾಲದಲ್ಲಿ ಯಾವುದು ಅಸಾಧ್ಯವೆಂದು ಎಣಿಸಿದ್ದಳೋ ಅವೆರಡೂ ಸತ್ಯವಾಗಬಹುದೆನ್ನುವ ಆಶಾಕಿರಣ ಮೊಟ್ಟಮೊದಲ ಬಾರಿಗೆ ಗೋಚರಿಸಿತು. ಇನ್ನು ಸಮಯ ವ್ಯರ್ಥ ಮಾಡಬಾರದೆಂದುಕೊ0ಡು ಮೂಗುತಿಯನ್ನು ತೆಗೆದು ಕೃಷ್ಣಾರ್ಪಣಪೂರ್ವಕ ಆ ವೃದ್ಧ ಬ್ರಾಹ್ಮಣನಿಗಿತ್ತಳು. ಅಷ್ಟು ಅಪೂರ್ವ ನಿಧಿಯಂತಹ ಮೂಗುತಿಯನ್ನು ದಾನ ಪಡೆದುಕೊಂಡ ಮುದುಕ ನೇರ ಶ್ರೀನಿವಾಸ ನಾಯಕರ ಅಂಗಡಿಗೆ ಬಂದು ನಿನ್ನ ಸವಕಲು ನಾಣ್ಯದ ದಾಕ್ಷಿಣ್ಯ ನನಗೇನು ಬೇಕಾಗಿಲ್ಲ ಎಂದು ಹೇಳುತ್ತಲೇ ಒಡವೆಯನ್ನು ತೆಗೆದು ಅದರ ಮೌಲ್ಯದ ಹಣವನ್ನು ಕೊಟ್ಟರೆ ಉಪನಯನದ ಕೆಲಸಕ್ಕೆ ಉಪಕಾರವಾಗುತ್ತದೆ ಎಂದು ಮೂಗುತಿಯನ್ನು ವ್ಯಾಪಾರಿಯ ಕೈಯಲ್ಲಿಟ್ಟ. ಒಡವೆಯನ್ನು ಪರೀಕ್ಷಿಸಿ ನೋಡಿದ ನಾಯಕರಿಗೆ ಅದು ಪರಿಚಿತವೆನಿಸಿತು. ಬರೀ ಚರಿತವಲ್ಲ: ಸುಪರಿಚಿತ. "ಅರೇ, ಅದು ತಮ್ಮ ಪತ್ನಿ ಸರಸ್ವತಿಯ ಮೂಗುತಿ ಕದ್ದುಕೊಂಡು ಬಂದಿರಬಹುದೇ ಎಂಬ ಅನುಮಾನ ಬಂತು. ಈ ಮುದುಕ ಇದನ್ನು ಒಂದು ವೇಳೆ ಕದ್ದಿದ್ದರೆ ಧೈರ್ಯದಿಂದ ಅದನ್ನು ಮಾರಲು ಇಲ್ಲಿಗೆ ಬರುತ್ತಿರಲಿಲ್ಲ. "ಒಂದು ವೇಳೆ ತನ್ನ ಹೆಂಡತಿಯೇನಾದರೂ ಇದನ್ನು ಈ ಬ್ರಾಹ್ಮಣನಿಗೆ ದಾನ ಮಾಡಿರಬಹುದೇ", ಈ ವಿಚಾರ ತಲೆಗೆ ಹೊಳೆದೊಡನೆ ಎದೆ ಧಸಕ್ಕೆಂದಿತು, ಏಕೆಂದರೆ, "ಇದೊಂದು, ನನ್ನ ಗಮನಕ್ಕೆ ಬಂದಿರುವ ದಾನ. ನನ್ನ ಗಮನಕ್ಕೆ ಬರದೆ ಅದೆಷ್ಟು ದಾನ ಮಾಡಿರುವಳೋ ಎಂದುಕೊ0ಡರು.
ತಕ್ಷಣವೇ ಇದನ್ನು ಪರೀಕ್ಷಿಸಲು ನಿರ್ಧಾರ ಮಾಡಿ, ಇದೊಂದು ಅಮೂಲ್ಯವಾದ ಮೂಗುತಿ, ಬಹಳ ಬೆಲೆ ಬಾಳುವಂಥದು. ಅಷ್ಟೊಂದು ನಗದು ಹಣ ಅಂಗಡಿಯಲ್ಲಿಟ್ಟಿರುವುದಿಲ್ಲ. ಮನೆಗೆ ಹೋಗಿ ಹಣವನ್ನು ಬೇಗ ತರುತ್ತೇನೆ; ಅಲ್ಲಿಯವರೆಗೂ ಈ ಮೂಗುತಿಯನ್ನು ಸುಭದ್ರವಾಗಿ ಇಟ್ಟಿರುತ್ತೇನೆ ಎಂದು ಹೇಳಿದ ನಾಯಕರು ಒಂದು ಸಂಪುಷ್ಟ ತೆಗೆದು ಅದರೊಳಗೆ ಮೂಗುತಿಯನ್ನು ಜೋಪಾನವಾಗಿಟ್ಟು, ಸಂಪಷ್ಟವನ್ನು ನಗದು ಪೆಟ್ಟಿಗೆಯಲ್ಲಿ ಭದ್ರವಾಗಿಟ್ಟು ನಗದು ಪೆಟ್ಟಿಗೆಗೆ ಬೀಗ ಹಾಕಿ, ಅಂಗಡಿಯ ಬಾಗಿಲನ್ನು ಹಾಕಿ, ಬಾಗಿಅಗೆ ಬೀಗ ಭದ್ರಮಾಡಿ ಸರಸರನೆ ಮನೆ ಕಡೆ ಹೊರಟರು. ಮನೆಗೆ ಬಂದೊಡನೆಯೇ 'ಸರಸ್ವತಿ' ಎಂದು ಆರ್ಭಟಿಸಿದರು. ತಕ್ಷಣವೇ ವಿಷಯವೇನಾಗಿರಬಹುದೆಂಬ ಅರಿವು ಮೂಡಿ ಭಯದಿಂದ ಪತ್ನಿ ಮುಂದೆ ಬಂದಾಗ ``ಎಲ್ಲಿ ಮೂಗುತಿ” ಎಂದು ಅಬ್ಬರಿಸಿದರು. ನಿಷ್ಕರುಣಿಯಾಗಿದ್ದ ಪತಿಯ ಬಳಿ ಮೂಗುತಿಯನ್ನು ದಾನ ಕೊಟ್ಟಿದ್ದೇನೆಂದು ಹೇಳಿದರೆ, ದಾರುಣ ಪರಿಣಾಮವಾಗಬಹುದು ಎಂದು ಭಾವಿಸಿದ ಆಕೆ ಒಳಗೆ ಇಟ್ಟಿದ್ದೇನೆ, ತರುತ್ತೇನೆ, ಎಂದು ಹೇಳಿ, ಒಳಗೆ ಬಂದು ಚಿಲಕ ಹಾಕಿ ಬದುಕಿದರೆ ಇವರು ನನ್ನನ್ನು ಬಿಡಲಾರರು ಎಂದು ವಿಷ ಕುಡಿಯಲು ಬಟ್ಟಲು ಎತ್ತಿದಾಗ ಆ ಬಟ್ಟಲಿನಲ್ಲಿ ಏನೋ ಬಿದ್ದಂತೆ ಶಬ್ದವಾಗಿ ತೆಗೆದು ನೋಡಿದರೆ ಅದು ತಾನು ದಾನವಾಗಿತ್ತಿದ್ದ ಮೂಗುತಿಯೇ ಆಗಿತ್ತು. ತನ್ನ ಕಣ್ಣನ್ನು ತಾನು ನಂಬಲಾಗದಿದ್ದರೂ ದೇವರ ಮೇಲೆ ಅತ್ಯಂತ ಭಕ್ತಿಯಿದ್ದುದರಿಂದ ಇದನ್ನು ಭಗವಂತನ ಮಹಿಮೆ ಎಂದು ತಿಳಿದಳು. ಅವನನ್ನು ಮನಸಾ ನಮಿಸಿದಳು. ತಡಮಾಡದೇ ಮೂಗುತಿಯನ್ನು ಶ್ರೀನಿವಾಸನಾಯಕರಿಗೆ ತಂದುಕೊಟ್ಟಾಗ ಅವರಿಗೆ ಆಶ್ಚರ್ಯಕ್ಕಿಂತಲೂ ಸಂತೋಷವೇ ಆಯಿತು. ಎರಡೆರಡು ಲಾಭವೆಂದುಕೊ0ಡರು.
ಇತ್ತ ಸರಸರನೆ ಬಂದು ಸಂಪುಷ್ಟದಲ್ಲಿದ್ದ ಮೂಗುತಿಯನ್ನು ನೋಡಲು ಅದು ಕಾಣದಿದ್ದಾಗ ದಿಗ್ಭçಮೆಗೊಳಗಾದರು. ಅಷ್ಟು ಭದ್ರವಾಗಿದ್ದ ಮೂಗುತಿ ಕಳ್ಳತನವಾಗಲು ಸಾಧ್ಯವೇ ಇಲ್ಲ ಎಂದುಕೊ0ಡರು. ಮೂಗುತಿಯೂ ಕಾಣಲಿಲ್ಲ, ಮುದುಕನೂ ಕಾಣಲಿಲ್ಲ. ಏನೂ ತೋಚದೇ ಸರಸರನೆ ಪತ್ನಿಯತ್ತ ಧಾವಿಸಿ ವಿಷಯ ಹೇಳಿದಾಗ ಪತ್ನಿಯು ಒಂದು ಕ್ಷಣ ನಡೆದದ್ದೆಲ್ಲಾ ಕಣ್ಮುಂದೆ ಬಂದು, ಅಯ್ಯೋ ಸ್ವಾಮಿ ನಮ್ಮ ಮನೆ ಬಾಗಿಲಿಗೆ ಬಂದವನು ಮುದುಕನಲ್ಲ. ನಿಮ್ಮನ್ನು ಪರೀಕ್ಷಿಸಲು, ಉದ್ಧರಿಸಲು ಭಗವಂತನೇ ಬಂದಿದ್ದನು ಎಂಬ ಸತ್ಯ ಸ್ಪಷ್ಠವಾಗಿ ಗೋಚರಿಸಿತು.
ಶ್ರೀನಿವಾಸನಾಯಕರಿಗೆ ಒಂದು ಮೂಗುತಿಯನ್ನು ಕಾದುಕೊಳ್ಳಲಾಗದಿರುವಾಗ ಎಲ್ಲವೂ ನಶ್ವರ ಎಂಬ ಸತ್ಯ ಅರಿವಾಯಿತು. ಕಣ್ಣಲ್ಲಿ ನೀರು ಸುರಿಯಿತು. ಭಗವಂತನ ಪ್ರೀತಿನೆನೆದು ಆನಂದಾಶ್ರುಗಳು ಜಾರಿದವು. ಆ ಕ್ಷಣವೇ ಮನಸ್ಸು ದಾಸತ್ವದ ಕಡೆ ಜಾರಿತು. ಅವನನ್ನು ಕಾಣಲೇ ಬೇಕು ಎನ್ನುವ ಹಂಬಲದಿ0ದ ಆ ಮುದುಕನನ್ನು ಹುಡುಕುತ್ತಾ ಎಲ್ಲಿ ಪೋದನಮ್ಮ ವಿಪ್ರನ ಎಲ್ಲಿ ಹುಡುಕಲಮ್ಮ ಎಂದು ಅತ್ತಿತ್ತ ತಿರುಗಾಡಿದರು. ಗಂಡನ ಈ ಅವಸ್ಥೆಯನ್ನು ನೋಡದೆ ಪತ್ನಿಯು ತಿಳಿಸಿ ಹೇಳಿದಳು. ಆರು ತಿಂಗಳುಗಳ ಕಾಲ ನಿಮ್ಮಲ್ಲಿಗೇ ಅವನು ಬಂದರೆ ಗುರುತು ಹಿಡಿಯದೇ ಅವನ್ನು ಅಲೆದಾಡಿಸಿದಿರಿ. ಈಗ ಅವನಿಗೆ ಹೇಗೆ ಮುಖ ತೋರಿಸುತ್ತೀರಿ ಎಂದಳು. ಅವನನ್ನು ತೋರಿಸುವ ಗುರು ವ್ಯಾಸರಾಯರಲ್ಲಿಗೆ ಹೋಗೋಣ ಎಂದು ಸಮಾಧಾನ ಮಾಡಿದಳು. ಆ ಕ್ಷಣವೇ ನವಕೋಟಿ ಸಂಪತ್ತಿಗೂ ತುಳಸೀದಳ ಹಾಕಿ ಕೃಷ್ಣಾರ್ಪಣವೆಂದರು. ಉಟ್ಟ ಬಟ್ಟೆಯಲ್ಲಿಯೇ ಹೆಂಡತಿ ಹಾಗೂ ನಾಲ್ಕು ಮಕ್ಕಳೊಂದಿಗೆ ಗುರು ವ್ಯಾಸರಾಯರಲ್ಲಿಗೆ ಹೋಗಿ ದಾಸದೀಕ್ಷೆ ಸ್ವೀಕರಿಸಿ ಅಂದಿನಿ0ದ ಪುರಂದರದಾಸರಾದರು. ಶ್ರೀನಿವಾಸನ ಪರಮ ಭಕ್ತರಾದರು. ಸಮಾಜದ ಅಂಕುಡೊ0ಕುಗಳನ್ನು ತಮ್ಮ ಕೃತಿಗಳ ಮೂಲಕವೇ ತಿದ್ದಿ ಮನುಕುಲಕ್ಕೆ ಮಾರ್ಗದರ್ಶನ ಮಾಡುತ್ತಾ, ಲಕ್ಷೆÆಪಲಕ್ಷ ಹಾಡುಗಳನ್ನು ನಮಗೆ ನೀಡಿ ದಾಸಸಾಹಿತ್ಯ ಗಂಗೆಯನ್ನು ನಿರಂತರವಾಗಿ, ಇಂದಿಗೂ ಹರಿಯುವಂತೆ ಮಾಡಿದ ಕೀರ್ತಿ ಪುರಂದರದಾಸರದು. ದಾಸರೆಂದರೆ ಪುರಂದರದಾಸರಯ್ಯ ಎಂಬ0ತೆ ಎಲ್ಲರ ಮನೆಮನದಲ್ಲಿ ಸ್ಥಿರವಾಗಿ ನೆಲೆನಿಂತವರು ಪುರಂದರದಾಸರು.
ಒಮ್ಮೆ ದಾಸರು ಜ್ಞಾನಸತ್ರ-ಸಮಾರಾಧನೆ ವ್ಯವಸ್ಥೆ ಮಾಡಿದ್ದರು, ಮಧ್ಯಾಹ್ನದ ಸಮಯ - ಭಕ್ತಸ್ತೋಮ ಊಟಕ್ಕೆ ಕುಳಿತಿದೆ. ದಾಸರೇ ಸ್ವತಃ ತುಪ್ಪ ಬಡಿಸುತ್ತಿದ್ದಾರೆ. ಕೆಲವು ಸಾಲಿನಲ್ಲಿದ್ದವರಿಗೆ ತುಪ್ಪ ಸಾಲದೆ ಬಂದಾಗ ಅಪ್ಪಣ್ಣದಾಸರಿಗೆ ಬೇಗ ತುಪ್ಪ ತಂದು ಬಡಿಸಲು ಹೇಳಿದರು. ಅಪ್ಪಣ್ಣ ಬಂದು ಬಡಿಸಿದ್ದಾಯಿತು. ಆದರೆ ಬರುವುದು ತಡವಾದಾಗ ಅಪ್ಪಣ್ಣನನ್ನು ತುಪ್ಪ ತರಲು ತಡವೇಕಾಯಿತೆಂದಾಗ, ತನಗೆ ವಿಷಯವೇ ಗೊತ್ತಿಲ್ಲವೆಂದು, ತಾನು ಬಡಿಸೇ ಇಲ್ಲವೆಂದು ಕೇಳಿದ, ದಾಸರು ಕಣ್ಣುಮುಚ್ಚಿ ನೋಡಿದರು. ವಿಠಲನ ಮೂರ್ತಿ ನಗುತ್ತಿತ್ತು. ದಾಸರಿಗೆ ಅವನ ಕಾರುಣ್ಯದ ಪರಮಾವಧಿ ನೆನೆನೆನೆದು ಹಿಗ್ಗಿದರು.
ಇದೇ ರೀತಿಯ ಮತ್ತೊಂದು ಪ್ರಸಂಗ. ದಾಸರು ನೀರು ತರಬೇಕೆಂದು ಅಪ್ಪಣ್ಣನಿಗೆ ಹೇಳಿ ಕಳುಹಿಸಿದರು. ಆ ಬರಲೂ ಇಲ್ಲ, ನೀರು ತರಲೂ ಇಲ್ಲ, ಕಡೆಗೆ ತಡವಾಗಿ ನೀರು ತಂದಿಟ್ಟಾಗ ಸಿಟ್ಟು ಬಂದಿದ್ದ ದಾಸರು ಆ ನೀರಿನ ತಂಬಿಗೆಯನ್ನೇ ಎತ್ತಿ ಅಪ್ಪಣ್ಣನ ತಲೆಯ ಮೇಲೆ ಗಟ್ಟಿಸಿದರಂತೆ. ದಾಸರು ದೇವರ ಗುಡಿಗೆ ಬಂದು ನೋಡಲು ಮೂರ್ತಿಯ ಹಣೆಯ ಮೇಲೆ ಊದಿಕೊಂಡಿದೆ. ಮೂರ್ತಿಯ ಕಣ್ಣಿಂದ ಕಣ್ಣೀರು ಹರಿಯುತ್ತಿತ್ತು. ದಾಸರು ಗರ್ಭಗುಡಿಯೊಳಗೆ ಹೋಗಿ ಮೃದುವಾಗಿ ಹಣಿಯನ್ನು ಊತದ ಮೇಲೆ, ಕೆನ್ನೆಯ ಮೇಲೆ ಪ್ರೀತಿಯಿಂದ ಕೈಯಾಡಿಸಿದಾಗ ಊತ ಇಳಿದು ಕಣ್ಣೀರು ನಿಂತಿತು, ಅಪ್ಪಣ್ಣನನ್ನು ಕೇಳಿದಾಗ ಅವನು ತಾನು ನೀರೂ ತರಲಿಲ್ಲ, ಅವರಿಂದ ಪೆಟ್ಟು ತಿನ್ನಲಿಲ್ಲ ಎಂದು ಒಪ್ಪಿಕೊಂಡ.
ಪುರಂದರದಾಸರ ಸ್ಥಾನ, ಸಚ್ಚಾರಿತ್ರ, ಕೀರ್ತಿ ಎಲ್ಲರಿಗೂ ತಿಳಿದಿತ್ತು. ಅದು ಎಷ್ಟರ ಮಟ್ಟಿಗೆ ವ್ಯಾಪಕವಾಗಿತ್ತೆಂದರೆ, ಪಂಢರಾಪುರದಲ್ಲಿದ್ದ ಒಬ್ಬ ವೇಶ್ಯೆಗೂ ತಿಳಿದಿತ್ತು. ಒಮ್ಮೆ ಮಹಾತ್ಮರಾದ ಪುರಂದರದಾಸರೇ ತನ್ನ ಮನೆಗೆ ಬಂದುದನ್ನು ಕಂಡ ಅವರಿಗೆ ನಮಸ್ಕರಿಸಿದಳು. ಅವಳ ಗಾನ, ನರ್ತನವನ್ನು ಪ್ರಶಂಸಿಸಿ ದಾಸರು ಅಮೂಲ್ಯ ಕಡಗವೊಂದನ್ನು ಅವಳಿಗೆ ಮೆಚ್ಚುಗೆಯೊಡನೆ ನೀಡಿದರು. ಅದು ವಿಠಲದೇವರ ಅಲಂಕಾರದ ಅಮೂಲ್ಯ ಆಭರಣವಾಗಿತ್ತು. ಮರುದಿನ ಬೆಳಗ್ಗೆ ಅಲಂಕಾರದ ವೇಳೆ ಅದು ಕಳುವಾಗಿದ್ದು, ಅರ್ಚಕರ ಗಮನಕ್ಕೆ ಬಂದಿತು. ಅದನ್ನು ಹುಡುಕಲು ಎಷ್ಟು ಪ್ರಯತ್ನಿಸಿದರೂ ಸಿಗಲಿಲ್ಲ. ಕೆಲದಿನಗಳಲ್ಲೇ ಆ ವೇಶ್ಯ ದೇವಾಲಯಕ್ಕೆ ಬಂದಾಗ ಆ ಕಡಗ ಅವಳ ಕೈಯಲ್ಲಿದ್ದುದು ತಿಳಿದು, ಅವಳನ್ನು ವಿಚಾರಣೆಗೆ ಗುರಿಪಡಿಸಲಾಯಿತು. ಆಗ ಅವಳು ತನಗೆ ಅದನ್ನು ದಾಸರು ನೀಡಿದರೆಂದೇ ಹೇಳಿದಳು. ಊರೆಲ್ಲ ಕೋಲಾಹಲವಾಯಿತು. ದಾರರನ್ನು ಕರೆಸಿ ಮೃದುವಾಗಿ, ಒಳ್ಳೆಯ ಮಾತುಗಳೆಲ್ಲ ಕೇಳಿದಾಗ ಈ ವಿಚಾರ ತಮಗೇನೂ ತಿಳಿಯದೆಂದರು. ಕಡೆಗೆ ಸಾಮದಾನಗಳು ಫಲನೀಡದಿದ್ದಾಗ ದಂಡಪ್ರಯತ್ನಕ್ಕಾಗಿ ದಾಸರನ್ನು ದೇವಾಲಯದಲ್ಲಿ ದೇವರ ಮುಂದಿದ್ದ ಕಂಬಕ್ಕೆ ಕಟ್ಟಿ ಹಾಕಿ ಹೊಡೆಸುವುದೂ ಆಯಿತು. ದಾಸರು ಕಣ್ಣುಮುಚ್ಚಿ `ವಿಠಲಾವಿಠಲಾ' ಎಂದಷ್ಟೇ ಭಕ್ತಿಪರವಶರಾಗಿ ಜಪಿಸುತ್ತಿದ್ದಾಗ ಮೈಮೇಲೆ ಬೀಳುತ್ತಿದ್ದ ಒಂದೊ0ದು ಏಟುಗಳು ಗರ್ಭಗುಡಿಯಲ್ಲಿ ಬಿಸಿಯುಂಟು ಮಾಡಿ, ಕಡೆಗೆ ಗರ್ಭಗುಡಿಯಿಂದ ಒಂದು ದೇವಧ್ವನಿ ಕೇಳಿಸಿತು. `ದಾಸರು ನಿರಪರಾಧಿಗಳು ಅವರಿಗೆ ಹೊಡೆಯಬೇಡಿ' ಎಂದು. ದಾಸರಿಗೆ ಅರಿವಾಯಿತು. ತಾನು ಆ ದಿನ ನೀರಿನ ತಂಬಿಗೆಯನ್ನು ವಿಠಲನ ತಲೆಗೆ ಬಡಿದು ನೀಡಿದ ಪೆಟ್ಟಿಗೆ ವಿಠಲ ಇಂದು ತಮ್ಮ ಮೇಲೆ ಮುಯ್ಯ ತೀರಿಸಿಕೊಂಡಿದ್ದಾನೆ0ದು. ಆ ಘಟನೆಯ ಸ್ಪುರಣವಾಗಿ ಮೂಡಿದ ದಾಸರ ಮುಖವಾಣಿಯಿಂದ ಬಂದ ಕೃತಿಯೇ `ಮುಯ್ಯಕ್ಕೆ ಮುಯ್ಯ ತೀರಿತು, ಜಗದಯ್ಯ ವಿಜಯ್ಯ'. ಭಗವಂತನೊ0ದಿಗೆ ಅಂತಹ ಹತ್ತಿರದ ನಂಟನ್ನು ಹೊಂದಿದ್ದ ಅಪರೋಕ್ಷ ಜ್ಞಾನಿಗಳಾದ ತಾವಿದ್ದ ಪರಿಸರದಲ್ಲಿ ಭಕ್ತಿರಸ ಪಲ್ಲವಿಸುವಂತೆ ಮಾಡಿ, ವಿಶ್ವಾಸ, ವಾತ್ಸಲ್ಯ, ಭಕ್ತಿ, ಪುಳಕಗಳ ವಿಠಲೋಪಾಸನೆಯನ್ನು ಆ ಮೂಲಕ ಮಾಡಿದ ನಾದಮಹರ್ಷಿಗಳ ಅಂಶವೇ ಪುರಂದರದಾಸರು.