ಸಂವತ್ಸರಗಳಲ್ಲಿ ಐದು ವಿಧ. ಅವುಗಳು 1)ಚಾಂದ್ರಮಾನ 2) ಸೌರಮಾನ 3)ಸಾವನ,4)ನಾಕ್ಷತ್ರಮಾನ ಮತ್ತು 5) ಬಾರ್ಹಸ್ಪತ್ಯಮಾನ. ಶುಕ್ಲ ಪಾಡ್ಯದಿಂದ ಆರಂಭಿಸಿ ಅಮಾವಾಸ್ಯೆಯವರೆಗೆ ಒಂದು ಮಾಸದಂತೆ ಚೈತ್ರದಿ ಸಂಙೆಗಳುಳ್ಳ 12 ಮಾಸಗಳಿಗೆ ಚಾಂದ್ರಮಾನ ಸಂವತ್ಸರ ಎಂದು ಹೆಸರು.
2))ಸೌರ ಸಂವತ್ಸರ ಎಂದರೆ ಸೂರ್ಯನು ಮೇಷಾದಿ ರಾಶಿಗಳಲ್ಲಿ ಸಂಚರಿಸುವ ಕಾಲ. ಸುಮಾರು 365 ದಿನಗಳು. 3)ಸಾವನ ಸಂವತ್ಸರ ಎಂದರೆ ಸೂರ್ಯೋದಯದಿಂದ ಸೂರ್ಯೋದಯದವರೆಗೆ ಇರುವ ಅವಧಿ ಇದರ ಕಾಲ ಅವಧಿ 360 ದಿನ. 4)ಚಂದ್ರನು ಅಶ್ವಿನ್ಯಾದಿ ಇಪ್ಪತ್ತೇಳು ನಕ್ಷತ್ರಗಳಲ್ಲಿ ಸಂಚರಿಸುವ ಕಾಲ ಸುಮಾರು 324 ದಿನಗಳು. 5)ಮೇಷಾದಿ ರಾಶಿಗಳಲ್ಲಿ ಯಾವುದಾದರೊಂದು ರಾಶಿಯಲ್ಲಿ ಗುರು ಇರುವ ಅವಧಿಯು ಬಾರ್ಹಸ್ಪತ್ಯ ಸಂವತ್ಸರ 361 ದಿನಗಳು.
ಶ್ರೌತ ಸ್ಮಾರ್ತ ಕರ್ಮಗಳನ್ನು ಆಚರಿಸಲು ಚಾಂದ್ರಮಾನ ಸಂವತ್ಸರವನ್ನೇ ಆಚರಿಸಬೇಕು.
ಸೂರ್ಯನು ಕರ್ಕಾಟಕ ರಾಶಿ ಯಿಂದ ಮಕರದ ವರೆಗೆ ಸಂಚರಿಸುವದನ್ನು ದಕ್ಷಿಣಾಯಣ ಎನಿಸಿದರೆ, ಮಕರ ದಿಂದ ಕಾರ್ಕಾಟಕ ರಾಶಿಯ
ವರೆಗೆ ಸೂರ್ಯನು ಸಂಚರಿಸುವ ಕಾಲವನ್ನು ಉತ್ತರಾಯಣ ಎನ್ನಲಾಗುತ್ತದೆ.
ಮಕರ ಸಂಕ್ರಾಂತಿ ಪದಗಳ ಅರ್ಥವೇನು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ಮಕರ ಎಂಬುದು ರಾಶಿಗಳಲ್ಲಿ ಒಂದು ಮತ್ತು ಸಂಕ್ರಮಣ ಎಂದರೆ ಶ್ರೀಸೂರ್ಯನ ಚಲನೆ ಎಂದು ಅರ್ಥ. ಅಂದರೆ ಸೂರ್ಯ ಧನುರ್ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಭಾರತೀಯ ಸಂಸ್ಕೃತಿಯ ಪ್ರಕಾರ ಸೂರ್ಯೋದಯ ಸಮಯದಲ್ಲಿ ಏನಾದರೂ ಸಂಭವಿಸಿದಲ್ಲಿ ಮಾತ್ರ ನಾವು ಅದನ್ನು ಶುಭ ಸಂದರ್ಭವೆಂದು ಪರಿಗಣಿಸುತ್ತೇವೆ. ಈ ವರ್ಷ ಸೂರ್ಯನು ಮಕರ ರಾಶಿಯನ್ನು ರಾತ್ರಿಯ ಸಮಯದಲ್ಲಿ ಪ್ರವೇಶಿಸುತ್ತಾನೆ. ಆದ್ದರಿಂದ 15ನೇ ತಾರೀಕು ಶನಿವಾರ ಸೂರ್ಯೋದಯದಿಂದ ಮಧ್ಯಾಹ್ನದವರೆಗೆ ಪರ್ವಕಾಲ ಎನಿಸುತ್ತದೆ. ಆದ್ದರಿಂದ ಸಂಕ್ರಾಂತಿ ಹಬ್ಬವನ್ನು 15ನೇ ತಾರೀಕು ಹಬ್ಬವನ್ನು ಆಚರಿಸಬೇಕು.
ಮೂಲತಹ ಸಂಕ್ರಾಂತಿಯ ದಿನದಂದು ಇಲ್ಲಿ ಏನಾಗುತ್ತದೆ ಅಂದರೆ ಭೂಮಿಯು ಸೂರ್ಯನನ್ನು ಪರಿಭ್ರಮಿಸುತ್ತಿದ್ದಂತೆ ಸೂರ್ಯನಿಂದ ದೂರವಿದ್ದ ಭೂಮಿಯ ಅರ್ಧಭಾಗವು ಈಗ ಸೂರ್ಯನ ಕಡೆಗೆ ಮುಖ ಮಾಡುತ್ತದೆ ಮತ್ತು ಬೇಸಿಗೆಯ ಆರಂಭವನ್ನು ಸೂಚಿಸುತ್ತದೆ. ರೈತರಿಗೆ ಇದು ಮಹತ್ವಪೂರ್ಣವಾದ ಸಮಯ ಏಕೆಂದರೆ ಇದು ದೀರ್ಘ ಚಳಿಗಾಲದ ಅಂತ್ಯ ಮತ್ತು ಹೊಸ ಸುಗ್ಗಿಯ ಕಾಲ.
ಮಕರ ಸಂಕ್ರಾಂತಿಯ ದಿನದಂದು ದೇವತೆಗಳಿಗೆ ಹಗಲು ಪ್ರಾರಂಭವಾಗುತ್ತದೆ. ದೇವತೆಗಳಿಗೆ ಉತ್ತರಾಯಣ ಹಗಲಿನ ಸಮಯವಾಗಿರುತ್ತದೆ. ಮತ್ತು ದಕ್ಷಿಣಾಯನ ರಾತ್ರಿಯ ಸಮಯವಾಗಿರುತ್ತದೆ.
ಭೂಲೋಕದ ಪ್ರತ್ಯಕ್ಷ ದೇವರು ಎಂದರೆ ಸೂರ್ಯ. ಸೂರ್ಯನನ್ನು ಜಾತಿಮತ ಭೇದವಿಲ್ಲದೆ ಪ್ರಪಂಚದ ಎಲ್ಲ ಜನರು ಆರಾಧಿಸುತ್ತಾರೆ. ಈ ಸೂರ್ಯ ನಮಗೆ ಬೆಳಕು ನೀಡುವುದಲ್ಲದೆ ಈ ಜಗತ್ತಿನ ಅಂಧಕಾರವನ್ನು ಹೋಗಲಾಡಿಸುವವನು. ಸೂರ್ಯ ಜ್ಞಾನದ ಸಂಕೇತವಾಗಿದ್ದಾನೆ ಹಾಗೆಯೇ ನಮ್ಮೊಳಗಿನ ಅಜ್ಞಾನದ ಕತ್ತಲನ್ನು ಕಳೆದು ನಮಗೂ ಜ್ಞಾನದ ಬೆಳಕನ್ನು ಮತ್ತು ಆರೋಗ್ಯವನ್ನು ಕೊಡಲಿ ಎಂದು ಸೂರ್ಯಾಂತರ್ಗತ ಸವಿತೃ ನಾಮಕ ಪರಮಾತ್ಮನನ್ನು ಪ್ರಾರ್ಥಿಸಬೇಕು. ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂದು ನಂಬಿಕೆ ಇದೆ. ಆತನು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭಿಸುತ್ತಾನೆ. ಈ ಸಮಯದಲ್ಲಿ ಹಗಲು ಹೆಚ್ಚಾಗಿರುತ್ತದೆ.
ಸಂಕ್ರಾಂತಿಯ ದಿನದಂದು ಆಚರಿಸಬೇಕಾದ ನಿಯಮಗಳು. ಷಟ್ತಿಲಾಚರಣೆ . ಅಂದರೆ ತಿಲಸ್ನಾನ, ತಿಲ ದೀಪ, ತಿಲತರ್ಪಣ, ತಿಲಹೋಮ, ತಿಲದಾನ ಮತ್ತು ತಿಲ ಭಕ್ಷಣ. ಇವುಗಳನ್ನು ಅವಶ್ಯವಾಗಿ ಮಾಡಬೇಕು. ಇದರಿಂದ ನಮ್ಮ ಪಾಪವು ನಾಶವಾಗುತ್ತದೆ. ಪಿತೃಗಳಿಗೆ ಪರ್ವಕಾಲದ ಪ್ರಯುಕ್ತ ಅಧಿಕಾರಿಗಳು (ತಂದೆ ಇಲ್ಲದವರು) ತಿಲತರ್ಪಣ ಅವಶ್ಯವಾಗಿ ಕೊಡಬೇಕು. ಇದರಿಂದ ಪಿತೃಗಳು ಸಂತೃಪ್ತರಾಗಿ ಸಂತಾನಾಭಿವೃದ್ಧಿ ಆಗುವಂತೆ ಅನುಗ್ರಹ ಮಾಡುತ್ತಾರೆ.
ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು ಎಳ್ಳು ಬೆಲ್ಲ ಮತ್ತು ಸಕ್ಕರೆ ಅಚ್ಚನ್ನು ಬಂಧುಗಳಿಗೆ ಮತ್ತು ನೆರೆ-ಹೊರೆಯವರಿಗೆ ಬೀರು (ಕೊಡು)ವುದು ವಾಡಿಕೆ ಆಗಿದೆ. ಈ ದಿನ ಸಂಜೆ ಮಕ್ಕಳಿಗೆ ಮಕ್ಕಳನ್ನು ಕೂಡಿಸಿ ಎಳ್ಳು ಬೆಲ್ಲ ಕಬ್ಬು ಮತ್ತು ಬೋರೆಹಣ್ಣು ಇವುಗಳನ್ನು ಸೇರಿಸಿ ತಲೆಯ ಮೇಲಿಂದ ಎರೆಯುವುದರಿಂದ ಬಾಲಾರಿಷ್ಟ ನಾಶವಾಗುತ್ತದೆ ಎಂಬ ನಂಬಿಕೆ ಇದೆ.
ತಮಿಳುನಾಡಿನಲ್ಲಿ ಈ ಹಬ್ಬವನ್ನು ಪೊಂಗಲ್ ಹಬ್ಬವೆಂದು ವಿಜೃಂಭಣೆಯಿಂದ ಆಚರಿಸುತ್ತಾರೆ.
ಇದು ಅತ್ಯಂತ ಪುಣ್ಯಕರ ಕಾಲವಾದ್ದರಿಂದ ಸರ್ವರೋಗ ನಿವೃತ್ತಿಗಾಗಿ ಎಲ್ಲ ಅಭೀಷ್ಟ ಸಿದ್ಧಿಗಾಗಿ ಸ್ನಾನವನ್ನು ಮಾಡಿ ವಿಶೇಷ ಧ್ಯಾನ ಪೂಜಾದಿಗಳನ್ನು ಮಾಡಬೇಕು. ಒಟ್ಟಿನಲ್ಲಿ ಮಕರ ಸಂಕ್ರಮಣದಂದು ಸೂರ್ಯಾಂತರ್ಗತ ನಾರಾಯಣನನ್ನು ವಿಶೇಷವಾಗಿ ಅರ್ಚಿಸು ವುದರ ಮೂಲಕ ಆಯುಷ್ಯ ಆರೋಗ್ಯ ಐಶ್ವರ್ಯವನ್ನು ಪಡೆಯಬಹುದು.
ಲೇಖಕರು : ಹೇಮಾ ಶ್ರೀಧರ್