ಶಾಲೆಗಳು ಆರಂಭವಾಗಿ ಆರು ತಿಂಗಳಾದರೂ ಪಠ್ಯ ಪುಸ್ತಕ ವಿತರಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗದಿರುವುದು ನಾಚಿಕಗೇಡಿನ ಸಂಗತಿ ಎಂದು ಎಎಪಿಯ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷರಾದ ಕುಶಲಸ್ವಾಮಿ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಶಲಸ್ವಾಮಿಯವರು, “ಕಲಿಕೆಯು ಸುಗಮವಾಗಿ ಸಾಗಲು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಅವಶ್ಯಕವಾಗಿದೆ. ತರಗತಿಗಳು ಆರಂಭವಾಗಿ ಆರು ತಿಂಗಳು ಕಳೆದರೂ ಶಿಕ್ಷಣ ಇಲಾಖೆಯು ಪಠ್ಯಪುಸ್ತಕ ವಿತರಿಸಿಲ್ಲ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ರವರ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇನ್ನಾದರೂ ಸಚಿವರು ಎಚ್ಚೆತ್ತುಕೊಂಡು ಪಠ್ಯಪುಸ್ತಕ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಸಾಧ್ಯವಾಗದಿದ್ದರೆ ಅವರು ಸಚಿವ ಸ್ಥಾನವನ್ನು ಸಮರ್ಥರಿಗೆ ಬಿಟ್ಟುಕೊಡಲಿ” ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಹಿರಿಯ ಮುಖಂಡರಾದ ರಮೇಶ್ ಬೆಳ್ಳಕೊಂಡರವರು ಮಾತನಾಡಿ, “ಪಠ್ಯಪುಸ್ತಕ ವಿತರಣೆಗೆ ಸಂಬಂಧಿಸಿ ಸಚಿವ ಬಿ.ಸಿ.ನಾಗೇಶ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರುತ್ಸಾಹದಿಂದಾಗಿ 1.2 ಕೋಟಿ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಪಠ್ಯಪುಸ್ತಕ ಇಲ್ಲದಿರುವುದರಿಂದ ಮಕ್ಕಳಿಗೆ ಪಾಠವನ್ನು ಅರ್ಥ ಮಾಡಿಸಲು ಶಿಕ್ಷಕರಿಗೆ ಸಾಧ್ಯವಾಗುತ್ತಿಲ್ಲ. ಪಠ್ಯಪುಸ್ತಕ ಮುದ್ರಣವಾಗದಿರುವುದು ಈವರೆಗೆ ಗಮನಕ್ಕೆ ಬಂದಿರಲಿಲ್ಲ ಎಂಬ ಅರ್ಥದಲ್ಲಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಸೆಲ್ವ ಕುಮಾರ್ ಹೇಳಿಕೆ ನೀಡಿರುವುದು ಖಂಡನೀಯ. ಎರಡು ಜೊತೆ ಸಮವಸ್ತ್ರ ವಿತರಣೆ ಕೂಡ ಶಿಕ್ಷಣ ಸಚಿವರಿಗೆ ಸಾಧ್ಯವಾಗಿಲ್ಲ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸಂಬಂಧಿಸಿ ಶಿಕ್ಷಣ ಸಚಿವರು ಜಾಣಕುರುಡು ತೋರುತ್ತಿದ್ದಾರೆ” ಎಂದು ಟೀಕಿಸಿದರು.