ಬೆಂಗಳೂರು : ಪುನೀತ್ ರಾಜ್ ಕುಮಾರ್ ಅವರು ಉತ್ತಮ ಸಾಮಾಜಿಕ ಸಂದೇಶ ನೀಡುವ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಬಿಬಿಎಂಪಿ ಮಾಜಿ ಉಪಮೇಯರ್ ಹೇಮಲತಾ ಕೆ.ಗೋಪಾಲಯ್ಯ ಬಣ್ಣಿಸಿದರು.
ಸೋಮವಾರ ಸಂಜೆ ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾದಿಂದ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್ ಕುಮಾರ್ ಅವರ ಸಮಾದಿ ಬಳಿ ಹಮ್ಮಿಕೊಂಡಿದ್ದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿ ಕರ್ನಾಟಕದ ಮನೆ ಮಾತಾಗಿದ್ದ ಪುನೀತ್ ಅವರ ಅಕಾಲಿಕ ನಿಧನ ಕನ್ನಡಿಗರು ಮತ್ತು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಇದನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದರು.
ಪುನೀತ್ ರಾಜ್ ಕುಮಾರ್ ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತಮ್ಮಕಣ್ಣುಗಳನ್ನು ದಾನಮಾಡುವ ಮೂಲಕ ಮತ್ತೊಬ್ಬರ ಬದುಕಿನಲ್ಲಿ ಬೆಳಕಾಗಿದ್ದಾರೆ. ಅವರು ಬದುಕಿದ್ದಾಗಲೂ ಕೂಡ ಯಾವುದೇ ಪ್ರಚಾರ ಬಯಸದೆ ಸಮಾಜ ಸೇವೆ ಮಾಡಿ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ಅದರಂತೆ ನಾನು ಕೂಡ ನೇತ್ರದಾನ ಮಾಡುವುದಾಗಿ ಘೋಷಿಸಿದರು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ 400 ಹೆಚ್ಚು ಜನ ಪಾಲ್ಗೊಂಡಿದ್ದರು. ಅವರ ಪೈಕಿ 40 ಕ್ಕೂ ಅಧಿಕ ಜನರು ಹೇಮಲತಾ ಕೆ.ಗೋಪಾಲಯ್ಯರವರೊಂದಿಗೆ ಇದೇ ವೇಳೆ ಸ್ಬಯಂಪ್ರೇರಿತರಾಗಿ ತಾವು ನೇತ್ರದಾನ ಮಾಡುವುದಾಗಿ ವಾಗ್ದಾನ ಮಾಡಿದರು. ಉತ್ತರ ಘಟಕದ ಜಿಲ್ಲಾ ಉಪಾಧ್ಯಕ್ಷ ಜಯರಾಮಯ್ಯ, ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ನಾಗರತ್ನ ಲೋಕೇಶ್, ಪದ್ಮಾವತಿ ಶ್ರೀನಿವಾಸ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಉಪಸ್ಥಿತರಿದ್ದರು.