ಶ್ರೀ ಲಕ್ಷ್ಮೀ ಹಯಗ್ರೀವ ಸ್ವಾಮಿ ಸನ್ನಿಧಿಯು ಬೆಂಗಳೂರಿನ ಹೃದಯ ಭಾಗವಾದ ಮೆಜೆಸ್ಟಿಕ್ ಬಸ್ ನಿಲ್ದಾಣದ ಹತ್ತಿರವಿದೆ.ಈ ದಿವ್ಯ ಸನ್ನಿಧಿಯ ಮುಖ್ಯ ದೇವರು ಶ್ರೀ ಲಕ್ಷ್ಮೀ ಹಯಗ್ರೀವ ದೇವರು.ಇಲ್ಲಿ ಹಯಗ್ರೀವ ದೇವರು ತನ್ನ ಎಡ ತೊಡೆಯ ಮೇಲೆ ಮಹಾಲಕ್ಷ್ಮಿ ದೇವಿಯನ್ನು ಕೂಡಿಸಿಕೊಂಡಿದ್ದಾರೆ ಮತ್ತು ದೇವರಿಗೆ ನಾಲ್ಕು ಕೈಗಳು ಇದ್ದು ಬಲಗೈಯಲ್ಲಿ ಜಪಮಾಲೆ ಹಾಗೂ ಚಕ್ರ ಮತ್ತು ತನ್ನ ಎಡಗೈಯಲ್ಲಿ ವೇದಗಳು ಹಾಗೂ ಶಂಖವನ್ನು ಹಿಡಿದಿದ್ದಾರೆ.
"ಜ್ಞಾನಾನಂದಂ ಮಯಂ ದೇವಂ ನಿರ್ಮಲ ಸ್ಪಟಿಕಾಕೃತಿಂ ಆಧಾರಂ ಸರ್ವ ವಿದ್ಯಾನಾಂ ಹಯಗ್ರೀವಂ ಉಪಾಸ್ಮಹೆ" ಎಂಬ ಶ್ಲೋಕವನ್ನು ದಿನದಲ್ಲಿ ಒಂದು ಹತ್ತು ನಿಮಿಷ ಹೇಳಿಕೊಂಡು ಧ್ಯಾನ ಮಾರ್ಗದಲ್ಲಿ ನಡೆದರೆ ದೇವರು ವಿದ್ಯಾ ಬುದ್ಧಿ ಕೊಡುತ್ತಾರೆ. ಪರೀಕ್ಷಾ ಸಮಯದಲ್ಲಿ ಮಕ್ಕಳ ಹಾಲ್ ಟಿಕೇಟ್, ಪುಸ್ತಕ, ಪೆನ್ನು ಪೆನ್ಸಿಲ್ ಮುಂತಾದ ವಿದ್ಯಾಭ್ಯಾಸಕ್ಕೆ ಸಂಬಂಧಿತ ಸಾಮಗ್ರಿಗಳನ್ನು ತಂದು ಪೂಜೆ ಮಾಡಿಸಿಕೊಂಡು ಹೋಗುವ ಪದ್ಧತಿ ಇದೆ. ಸರ್ವರ ಬದುಕಿಗೆ ಅವಶ್ಯಕವಾದ ಸಂಸ್ಕಾರ ಶಿಕ್ಷಣವನ್ನು ಮಕ್ಕಳಿಗೆ ತಂದೆ ತಾಯಿಯರು ನೀಡಬೇಕು.ದೇವರಲ್ಲಿ ಭಯ ಭಕ್ತಿ ಆಚಾರ ವಿಚಾರ ಮೌಲ್ಯಗಳ ಬಗ್ಗೆ ತಿಳಿಸಬೇಕು.ಆಗ ಮಕ್ಕಳು ವಿದ್ಯಾವಂತರಾಗಿ ಸತ್ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ.
ಶ್ರೀ ಲಕ್ಷ್ಮೀ ಹಯಗ್ರೀವರ ಸನ್ನಿಧಿಯಲ್ಲಿ ವರ್ಷದಲ್ಲಿ ಒಂದು ದಿನ ಮಕ್ಕಳ ವಿದ್ಯಾಭಿವೃದ್ಧಿಗೆ ಸಹಾಯಕವಾಗುವ ಹೋಮ ನಡೆಸುತ್ತಾರೆ. ದೇವರಿಗೆ ಅಭಿಷೇಕ ಮಾಡಿದ ಜೇನು ತುಪ್ಪವನ್ನು ಪ್ರತಿ ದಿನ ಸೇವಿಸುತ್ತಾ ಬಂದರೆ ಜ್ಞಾನ ಮಾರ್ಗವು ತೆರೆದುಕೊಳ್ಳುತ್ತದೆ.ಧನಾತ್ಮಕ ಚಿಂತನೆಗಳಿಂದ ವ್ಯಕ್ತಿತ್ವ ಸಂಸ್ಕಾರಯುತಗೊಳ್ಳುತ್ತದೆ. ಪುರಾಣ ಪ್ರಸಿದ್ಧವಾದ ಈ ದೇವಾಲಯಕ್ಕೆ ಸಾಕಷ್ಟು ಇತಿಹಾಸವಿದೆ. ಭಕ್ತಿ ಶ್ರದ್ಧೆಗಳಿಂದ ದೇವಸ್ಥಾನಕ್ಕೆ ಭೇಟಿ ನೀಡಿ ಅನುಗ್ರಹ ಆಶೀರ್ವಾದ ಪಡೆದು ಸರ್ವರೂ ಸಂಸ್ಕಾರ ಶಿಕ್ಷಣ ಪಡೆಯಲು ಬಹಳ ಅನುಕೂಲವಾದ ಸ್ಥಳದಲ್ಲಿ ಈ ದೇವಸ್ಥಾನವಿದೆ. ಅದು ನಮ್ಮೆಲ್ಲರ ಭಾಗ್ಯ.
-C.N. RAMESH