ಧನ್ವಂತರಿ ಭಾರತದ ಮೊದಲ ವೈದ್ಯನೆಂಬ ಪ್ರತೀತಿ ಹಾಗು ನಂಬಿಕೆ ಇದೆ. ವೈದಿಕ ಸಂಪ್ರದಾಯದ ಪ್ರಕಾರ ಧನ್ವಂತರಿ ಆಯುರ್ವೇದದ ಹರಿಕಾರ. ಹಿಂದೂ ಸಂಪ್ರದಾಯದಲ್ಲಿ ಹಲವು ಸಸ್ಯಗಳ, ಗಿಡಮೂಲಿಕೆಗಳ ಪಾರಿಸರಿಕ ಬಳಕೆಯಿಂದ ಔಷಧ ತಯಾರಿಸಿದ ಗೌರವ ಧನ್ವಂತರಿಗೆ ಸಲ್ಲುತ್ತದೆ.
ಕ್ಷೀರೋದಮಥನೋದ್ಭೂತಂ ದಿವ್ಯ ಗಂಧಾನುಲೇಪಿತಂ ಸುಧಾಕಲಶಹಸ್ತಂ ತಂ ವಂದೇ ಧನ್ವಂತರಿಂ ಹರಿಂ
ಎಂಬ ಶ್ಲೋಕದಂತೆ ಕ್ಷೀರ ಸಮುದ್ರ ಮಥನ ಕಾಲದಲ್ಲಿ ದಿವ್ಯ ಗಂಧಾನುಲೇಪಿತನಾಗಿ ಅಮೃತ ಕಲಶ ಕೈಯಲ್ಲಿ ಹಿಡಿದು ಮಹಾವಿಷ್ಣು ಧನ್ವಂತರಿಯ ಅವತಾರ ತಾಳಿದನು ಎಂದು ಪುರಾಣಗಳಲ್ಲಿ ವರ್ಣಿತವಾಗಿದೆ.ದೇವತೆಗಳು ರಾಕ್ಷಸರೊಂದಿಗೆ ಹೋರಾಡುವ ಸಂದರ್ಭಗಳಲ್ಲಿ ಗುಣಪಡಿಸಲಾರದ ನೋವು ವ್ಯಾಧಿಗಳಿಗೆ ತುತ್ತಾಗುವುದನ್ನು ಕಂಡು ವೈದ್ಯನಾಗಿ ಚಿಕಿತ್ಸೆ ನೀಡಲು ಧನ್ವಂತರಿ ರೂಪಧಾರಿಯಾಗಿ ವಿಷ್ಣು ಅವತರಿಸಿದನೆಂದು ನಂಬಲಾಗಿದೆ ) ಧನು+ಏವ+ಅಂತಃ+ಅರಿ=ಧನ್ವಂತರಿ(ಸರ್ಜನ್), ೨)ಧನುಷಾ+ತರತೇ+ತಾರಯತೇ+ಪಾಪಾತ್=ಧನ್ವಂತರಿ(ಪಾಪ ವಿಮುಕ್ತಿ) ಎಂಬುದು ಧನ್ವಂತರಿ ಪದದ ನಿಷ್ಪತ್ತಿಯಾಗಿದೆ.
ನಮಾಮಿ ಧನ್ವಂತರಿಯಾದಿದೇವಂ ಸುರಾಸುರೈರ್ವಂದಿತ ಪಾದಪದ್ಮಂ ಲೋಕೇಜರಾಋಗ್ವಯ ಮೃತ್ಯುನಾಶಂ ದಾತಾರಮೀಶಂ ವಿವಿಧೌಷಧೀನಾಂ
ಎಂಬ ಶ್ಲೋಕದೊಂದಿಗೆ ಧನ್ವಂತರಿಯನ್ನು ನಿತ್ಯ ಪ್ರಾರ್ಥಿಸಿ ಕಾರ್ಯ ಆರಂಭಿಸಿದರೆ ದಿನವಿಡೀ ಚೈತನ್ಯಪೂರ್ಣತೆ ಉಳಿಯುತ್ತದೆ ಎನ್ನಲಾಗಿದೆ.