ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ- ಬಿಟಿ ಮತ್ತು ಎಸ್ ಅಂಡ್ ಟಿ ಇಲಾಖೆ ಹಾಗೂ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ನಗರದಲ್ಲಿ ನವೆಂಬರ್ 17ರಿಂದ 19 ರವರೆಗೆ ಬೆಂಗಳೂರು ತಾಂತ್ರಿಕ ಸಭೆ ಆಯೋಜಿಸಲಾಗಿದೆ. ಬೆಂಗಳೂರು ಟೆಕ್ ಸಮಾವೇಶ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು, ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡುರನ್ನು ಆಹ್ವಾನಿಸಲಾಗಿದೆ. ಅವರೇ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವರು.
30ಕ್ಕೂ ಹೆಚ್ಚು ದೇಶಗಳು ಭಾಗವಹಿಸುವ ಸಾಧ್ಯತೆಯಿದ್ದು, ಕೇವಲ ಟೆಕ್ ಸಂಸ್ಥೆಗಳಲ್ಲದೇ, ಸ್ಟಾರ್ಟ್ಅಪ್ ಹಾಗೂ ಬಯೋ ಟೆಕ್ನಾಲಜಿ ಕಂಪನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. ಬಿಟಿಎಸ್ 2021 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥೆ ಸೌಮ್ಯ ಸ್ವಾಮಿನಾಥಾನ್ ಮಾತನಾಡಲಿದ್ದಾರೆ.
ಭಾರತ- ಅಮೆರಿಕ ರಾಷ್ಟ್ರಗಳ ಪ್ರತ್ಯೇಕ ಸಮಾವೇಶ ನಡೆಯಲಿದ್ದು, ಐಟಿ, ಬಿಟಿ ಹಾಗೂ ಸ್ಟಾರ್ಟಪ್?ಗಳ ಕುರಿತು ಪಶ್ಚಿಮ, ಉತ್ತರ, ಮಧ್ಯ ಅಮೆರಿಕ ಪ್ರಾಂತ್ಯ- ಭಾರತದ ಸಮನ್ವಯತೆ ಹಾಗೂ ನೂತನ ಅವಕಾಶಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಲಾಗಿದೆ. ನೊಬೆಲ್ ಪ್ರಶಸ್ತಿ ವಿಜೇತ ಡಾ. ವೆಂಕಟ್ ರಾಮನ್, ರಾಮಾಕೃಷ್ಣನ್, ಮೈಕ್ರೋಸಾಫ್ಟ್ ಅಧ್ಯಕ್ಷ ಅನಂತ್ ಮಹೇಶ್ವರಿ, ಆ್ಯಪಲ್ ಸಂಸ್ಥೆ ಉಪಾಧ್ಯಕ್ಷೆ ಪ್ರಿಯ ಬಾಲಾಸುಬ್ರಮಣ್ಯಂ, ಭಾರತದ ಲೇಖಕ ಚೇತನ್ ಭಗತ್ ಸೇರಿದಂತೆ ಹಲವು ಗಣ್ಯರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.