ಕೃಷಿ ವಿಶ್ವವಿದ್ಯಾಲಯದ ಶಿಕ್ಷಕರ ಕಲ್ಯಾಣ ಸಂಘದ ಬೇಡಿಕೆಗಳನ್ನು ಪರಿಗಣಿಸಿ ,ಕಾನೂನು ಚೌಕಟ್ಟಿನಲ್ಲಿ ಅವುಗಳ ಪರಿಹಾರಕ್ಕೆ ಕ್ರಮವಹಿಸಲಾಗುವುದು.10 ರಿಂದ 12 ದಿನಗಳ ಅವಧಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಈ ಕುರಿತು ಪರಿಹಾರಕ್ಕೆ ಸೂತ್ರ ಒದಗಿಸಲಾಗುವುದು ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಹೇಳಿದರು.
ಕೃಷಿ ವಿಶ್ವವಿದ್ಯಾಲಯದ ಆಡಳಿತ ಭವನದ ಎದುರು ಶಿಕ್ಷಕರ ಕಲ್ಯಾಣ ಸಂಘ ನಡೆಸುತ್ತಿರುವ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿ, ಧರಣಿ ನಿರತರ ಬೇಡಿಕೆಗಳನ್ನು ಸಹಾನುಭೂತಿಯಿಂದ ಆಲಿಸಿದ ಅವರು, 10 ರಿಂದ 12 ದಿನಗಳೊಳಗೆ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ,ಶಿಕ್ಷಕರ ಕಲ್ಯಾಣ ಸಂಘದ ಪ್ರತಿನಿಧಿಗಳು,ರಾಜ್ಯ ಸರ್ಕಾರ ಹಾಗೂ ಯುಜಿಸಿಯ ಅಧಿಕಾರಿಗಳ ಜಂಟಿ ಸಭೆ ಆಯೋಜಿಸಿ ,ಕಾನೂನು ಪರಿಧಿಯೊಳಗೆ ನಿಶ್ಚಿತವಾಗಿ ಈ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು , ಕಳೆದ ತಿಂಗಳು ವಿ.ವಿ.ಗೆ ಭೇಟಿ ನೀಡಿದ ಸಂದರ್ಭದಲ್ಲಿಯೇ ಈ ಕುರಿತು ಮಾಹಿತಿ ನೀಡಿದ್ದರೆ ಈ ಹೊತ್ತಿಗೆ ಸಮಸ್ಯೆಗೆ ಪರಿಹಾರ ದೊರೆತಿರುತ್ತಿತ್ತು. ಸಂಘವು ತಕ್ಷಣ ಮುಷ್ಕರ ಕೈ ಬಿಡಬೇಕು, ಶಿಕ್ಷಕರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದನೆ ಸಿಗಲಿದೆ ಎಂದರು.