ವ್ಯಾಸ ಮಹರ್ಷಿಗಳು, ಮಹಾಭಾರತವನ್ನು ಆಧಾರವಾಗಿಟ್ಟುಕೊಂಡು ರಚಿತವಾಗಿರುವ ಕಾದಂಬರಿ “ಪರ್ವ”. ಇದೊಂದು ಮರು ಸೃಷ್ಠಿ. ಕಾವ್ಯ ಇತಿಹಾಸ ಪುರಾಣಗಳ ಮಿಶ್ರಣವಾದ ಪ್ರಾಚೀನ ಮಹಾಕೃತಿಯನ್ನು ಆಧುನಿಕ ಸಾಹಿತ್ಯ ಪ್ರಕಾರವಾದ ಕಾದಂಬರಿಯನ್ನಾಗಿ ನಿರ್ಮಿಸುವ ಪ್ರಕ್ರಿಯೆಯಲ್ಲಿ ಶ್ರೇಷ್ಠ ಕಾದಂಬರಿಕಾರನೊಬ್ಬನ ಪಕ್ವವಾದ ಮನಸ್ಸು, ಕಾಲ ದೇಶಗಳನ್ನು ದಾಟಿ ಹೇಗೆ ಕೆಲಸ ಮಾಡಿದೆ ಎಂಬುದನ್ನು “ಪರ್ವ” ಕಾದಂಬರಿಯಲ್ಲಿ ನೋಡಬಹುದು. ಡಾ. ಎಸ್.ಎಲ್. ಭೈರಪ್ಪರಂತಹ ಸೃಜನಶೀಲ ಪ್ರತಿಭೆಯ ಸಾಹಸ ಈ ಬೃಹತ್‍ಕಾದಂಬರಿಯ ಪುಟ ಪುಟಗಳಲ್ಲಿ ಸ್ಫುಟಗೊಂಡಿದೆ. ಮೂಲ ಕೃತಿಯ ಅಲೌಖಿಕ ಅಂಶಗಳಿಂದ ಪಾರಾಗಿ, ಸಾಮಾನ್ಯರನ್ನೂ, ಅಸಾಮಾನ್ಯರನ್ನು ಒಂದೇ ದೃಷ್ಠಿಯಿಂದ ನೋಡಿ ಆದರ್ಶ, ವಾಸ್ತವತೆಗಳನ್ನು ಮೇಳವಿಸಿ, ಯಾವುದೋ ಕಾಲದ ವ್ಯಕ್ತಿ ಸಂಗತಿಗಳು ನಮ್ಮ ಕಾಲದವಾಗಿ, ನಮಗೆ ತೀರಾ ಹತ್ತಿರವಾಗಿ ಮಾರ್ಪಡುವ ಕಲಾ ಕೌಶಲ್ಯವನ್ನು ಈ ಮಹಾಕೃತಿ ತೋರಿಸುತ್ತದೆ. ಕಾದಂಬರಿಕಾರರಿಗಿರುವ ಮಾನವ ಸ್ವಭಾವದ ನಿಕಟ ಪರಿಚಯ. ಈ ಪರಿಚಯವನ್ನು ತೋರುವಲ್ಲಿ ಅವರು ಮೆರೆಯುವ ಸಂಯಮ ಹಾಗೂ ಅಲಿಪ್ತತೆಗಳು ವ್ಯಾಸ ಗುಣಗಳೇ ಆಗಿವೆ. ಫಲವಾಗಿ “ಪರ್ವ” ನಮ್ಮ ಕಾಲದ ಒಂದು ಶ್ರೇಷ್ಠ ಕಲಾಕೃತಿಯಾಗಿದೆ. ಇದೀಗ ಈ ಕೃತಿ ವಿಶ್ವ ಮನ್ನಣೆ ಪಡೆದಿದೆ. ಶೃಂಗರಾಷ್ಟ್ರಗಳ ಆಶಯದಂತೆ ಪರ್ವ ಕಾದಂಬರಿ ವಿಶ್ವದ ಅನೇಕ ಭಾಷೆಗಳಲ್ಲಿ ಅನುವಾದಗೊಳ್ಳುತ್ತಿದೆ. ಪ್ರಸ್ತುತ ರಷ್ಯನ್, ಮ್ಯಾಂಡರಿನ್ ಭಾಷೆಗಳಲ್ಲಿ ಅನುವಾದಗೊಂಡಿದೆ. ಈಗಾಗಲೇ ಭಾರತದ ಅನೇಕ ಭಾಷೆಗಳಲ್ಲಿ ಅನುವಾದಗೊಂಡು ಇದೊಂದು ಸಾರ್ವಕಾಲಿ ಕೃತಿಯಾಗಿ ವಿಜೃಂಭಿಸಿದೆ.
“ಪರ್ವ” – ವಿರಾಟ್ ದರ್ಶನ
October 17, 2021
0
600 ಪುಟಗಳ ಈ ಬೃಹತ್ ಕೃತಿಗೆ ಯಾವುದೇ ಕೋಪವಾಗದಂತೆ ಅಷ್ಟೇ ಗಟ್ಟಿಯಾಗಿ ವಸ್ತುನಿಷ್ಠವಾಗಿ ಆಧುನಿಕ ರಂಗ ಪರಿಕಲ್ಪನೆಗೆ ಹೊಸ ಆಯಾಮ ಕೊಡುವ ನಿಟ್ಟಿನಲ್ಲಿ ಖ್ಯಾತ ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿಯವರು ರಂಗಪಠ್ಯ ರೂಪಿಸಿ, ಈ ಮಹಾ ರಂಗ ಪ್ರಯೋಗವನ್ನು ನಿರ್ದೇಶನ ಮಾಡಿದ್ದಾರೆ. ಕಲಾವಿದರು – ತಂತ್ರಜ್ಞರು ಸೇರಿ, ಸರಿ ಸುಮಾರು 50 ಜನರ ತಂಡ ನಿರಂತರ ಆರು ತಿಂಗಳ ಪರಿಶ್ರಮದಿಂದ ಈ ಮಹಾ ರಂಗಪ್ರಯೋಗವನ್ನು ಕಟ್ಟಿದೆ. ಕನ್ನಡ ಕಾಯಕ ವರ್ಷದಲ್ಲಿ “ಕನ್ನಡ ರಂಗಭೂಮಿ” ವಿಶ್ವದ ಮತ್ತು ಭಾರತೀಯ ರಂಗಭೂಮಿಯಲ್ಲಿ ಒಂದು ಮೈಲಿಗಲ್ಲಾಗಿ ನಿಲ್ಲಬೇಕೆಂಬುದು ಮೈಸೂರು ರಂಗಾಯಣದ ಕನಸು. ಈ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕೋವಿಡ್ – 19 ಎಂಬ ಮಹಾಮಾರಿಯ ಸಂಕಷ್ಟದ ಈ ದುರಂತದ ಕಾಲದಲ್ಲೇ ಇಂತಹದೊಂದು ಮಹಾ ರಂಗಪ್ರಯೋಗ ಘಟಿಸಿದೆ.
ನಮ್ಮ ರಂಗಭೂಮಿ ಸಾಹಸಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆರ್ಥಿಕ ನೆರವು ನೀಡಿ ಸಹಕರಿಸಿದೆ. ನಾಟಕದ ಸಿದ್ದತೆಗೆ ರೂ. 50.00 ಲಕ್ಷಗಳನ್ನು ಬಿಡುಗಡೆ ಮಾಡಿದೆ. ಈ ಹಣದಲ್ಲಿ ಕಳೆದ ಒಂದು ವರ್ಷದಿಂದ ಪರ್ವಕ್ಕಾಗಿ ಆಯ್ಕೆ ಮಾಡಿಕೊಂಡ ಸರಿ ಸುಮಾರು 35ಕ್ಕೂ ಹೆಚ್ಚು ಕಲಾವಿದರಿಗೆ ಮಾಸಿಕ ಸಂಭಾವನೆ ನೀಡುತ್ತಾ ಬಂದಿದ್ದೇವೆ. ರೂ.38.00 ಲಕ್ಷಗಳನ್ನು ಇದಕ್ಕಾಗಿಯೇ ವೆಚ್ಚ ಮಾಡಿದ್ದೇವೆ.
ಈ ಮಹಾ ರಂಗ ಪ್ರಯೋಗ “ಪರ್ವ” ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ, ರಾಷ್ಟ್ರದ ಐದು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶನಗೊಳ್ಳಬೇಕೆಂಬ ಯೋಜನೆಯನ್ನು ರಂಗಾಯಣ ರೂಪಿಸಿದೆ. ನಮ್ಮ ರಂಗಪಯಣದ ಮೊದಲ ಹೆಜ್ಜೆ ಬೆಂಗಳೂರಿನಿಂದ ಆರಂಭಗೊಳ್ಳುತ್ತಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ 2021ನೇ ಅಕ್ಟೋಬರ್ 23 ಮತ್ತು 24ರಂದು ಬೆಳಿಗ್ಗೆ 10.00 ರಿಂದ ಸಚಿಜೆ 6.00 ಗಂಟೆಯವರೆಗೆ ರಂಗ ಪ್ರಯೋಗ ಪ್ರದರ್ಶನಗೊಳ್ಳಲಿದೆ.
ನಾಲ್ಕು ವಿರಾಮಗಳು ಸೇರಿ 8 ತಾಸುಗಳ ನಾಟಕ ಬೆಳಿಗ್ಗೆ 10.00ಕ್ಕೆ ಆರಂಭವಾದರೆ, ಸಂಜೆ 6.00 ಗಂಟೆಗೆ ಮುಗಿಯಲಿದೆ. ಮಧ್ಯಾಹ್ನದ ಊಟಕ್ಕೆ 30 ನಿಮಿಷಗಳ ವಿರಾಮ. ಇನ್ನುಳಿದಂತೆ ತಲಾ 10 ನಿಮಿಷಗಳ ಮೂರು ಚಹಾ ವಿರಾಮ, ಈ ಮಹಾ ರಂಗಪ್ರಯೋಗದ ಖರ್ಚು ವೆಚ್ಚ ದೊಡ್ಡ ಪ್ರಮಾಣದಲ್ಲಿರುವುದು ಮತ್ತು ದೀರ್ಘ ಪ್ರದರ್ಶನ ಶ್ರಮ ಎಲ್ಲವನ್ನು ಪರಿಗಣಸಿ ರೂ. 500/- ಮತ್ತು ರೂ. 250/- ಬೆಲೆಯ ಟಿಕೆಟ್‍ಗಳನ್ನು ಇಡಲಾಗಿದೆ. ಟಿಕೇಟ್‍ಗಳನ್ನು ರವೀಂದ್ರ ಕಲಾಕ್ಷೇತ್ರದ ಕೌಂಟರ್‍ನಲ್ಲಿ ಮತ್ತು ರಂಗಾಯಣದ ವೆಬ್‍ಸೈಟ್ www.rangayana.org ನಲ್ಲಿ ಆನ್‍ಲೈನ್ ಮೂಲಕ ಪಡೆಯಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Tags