“ಗಾಂಧಿ ಜಯಂತಿ ಅಮೃತ ಮಹೋತ್ಸವ”ಕ್ಕೆ ರಾಜ್ಯಪಾಲರಿಂದ ಚಾಲನೆ
ಬೆಂಗಳೂರು (ಕರ್ನಾಟಕ ವಾರ್ತೆ) ಅ.02: ರಾಷ್ಟ್ರಪಿತ ಮೋಹನ್ ದಾಸ್ ಕರ್ಮ್ ಚಂದ್ ಗಾಂಧೀಜಿ ರವರ ಜನ್ಮದಿನದ ಅಂಗವಾಗಿ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದ ಅಂಗಳದಲ್ಲಿರುವ ಗಾಂಧಿ ಪ್ರತಿಮೆಗೆ ಶನಿವಾರ ಪುಷ್ಪಾರ್ಚನೆ ಮಾಡಿ, ನಮನ ಸಲ್ಲಿಸಿದರು.
ನಂತರ ರಾಜಭವನದ ಗಾಜಿನಮನೆಯಲ್ಲಿ ರಾಜಭವನ, ದೂರದರ್ಶನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್ವೋದಯ ಟ್ರಸ್ಟ್ ಹಾಗೂ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರೀಲೇಶನ್ಸ್, ಬೆಂಗಳೂರು, ಬೆಂಗಳೂರಿನ ನ್ಯಾಷನಲ್ ಗ್ಯಾಲರಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ “ಗಾಂಧಿ ಜಯಂತಿ ಅಮೃತ ಮಹೋತ್ಸವ”ದಲ್ಲಿ ನೃತ್ಯ ಹಾಗೂ ಗೀತೆಗಳ ಮೂಲಕ ಮಹಾತ್ಮ ಗಾಂಧೀಜಿಗೆ ನಮನ ಸಲ್ಲಿಸಲಾಯಿತು.
ಘನತೆವೆತ್ತ ರಾಜ್ಯಪಾಲರು ಸೇರಿದಂತೆ ಗಣ್ಯರು ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ವರ್ಣರಂಜಿತ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಮೊದಲಿಗೆ ರಾಷ್ಟ್ರಗೀತೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಸತ್ಯ ಮತ್ತು ಅಂಹಿಸೆ ಕುರಿತು ಗಾಂಧೀಜಿಯ ನಿಲುವನ್ನು ನಿರೂಪಕರು ಸ್ಮರಿಸಿದರು. ನಂತರ ಗಾಂಧೀಜಿಯವರ ಇಷ್ಟದ ಭಜನೆ “ ವೈಷ್ಣವ ಜನತೋ...” ಮತ್ತು ರಘಪತಿ ರಾಘವ ರಾಜ ರಾಮ್ “ವನ್ನು ದೀಪಿಕಾ ಶ್ರೀಕಾಂತ್ ಅವರ ತಂಡ ಪ್ರಸ್ತುತ ಪಡಿಸಿತು. ಡಿಆರ್ ಆರ್ ಟಿ ಜೀವನೋತ್ಸವ ತಂಡವು ಮಹಾತ್ಮನಿಗೆ ನೃತ್ಯಗೌರವ ಸಲ್ಲಿಸಿದರು. ಕಲಾ ಶ್ರೀ ಡಾ.ಪದ್ಮಜಾ ಸುರೇಶ್ ನೇತೃತ್ವದ ವಿದ್ಯಾರ್ಥಿಗಳು ತಂಡ ‘ವಸುದೈವ ಕುಟುಂಬಕಂ’ (ವಿಶ್ವವೇ ಒಂದು ಕುಟುಂಬ) ಎಂಬ ಶೀರ್ಷಿಕೆಯಲ್ಲಿ ಸಮೂಹ ಭರತನಾಟ್ಯ ಪ್ರದರ್ಶಿಸಿ ಪ್ರಪಂಚವೆಲ್ಲಾ ನಮ್ಮ ಕುಟುಂಬದವರು ಎಂಬ ಸಂದೇಶ ಸಾರಿದರು.ನಗರದಲ್ಲಿರುವ ನೇಪಾಳದ ವಿದ್ಯಾರ್ಥಿಗಳು ಗ್ರಾಮೀಣ ಜೀವನ ಜಾನಪದವನ್ನು ಪ್ರತಿಬಿಂಬಿಸುವ ನೃತ್ಯವನ್ನು ಪ್ರದರ್ಶಿಸಿದರು. “ಸತ್ಯಮೇವ ಜಯತೇ” “ಸತ್ಯಂ ವದ , ಧರ್ಮಂ ಚರ" ಎಂಬುದು ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಎಂದು ನೆಲಸೊಗಡು ಮತ್ತು ಸೃಷ್ಟಿ ಕಲಾ ವಿದ್ಯಾಲಯದ ತಂಡ ವಿಶೇಷ ನೃತ್ಯ ಪ್ರದರ್ಶಿಸಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದರು. ಸತ್ಯ, ಅಹಿಂಸೆ ಮತ್ತು ಶಾಂತಿಯನ್ನು ಅಸ್ತ್ರವಾಗಿ ಬಳಸಿ ಹೋರಾಟ ನಡೆಸಿದ ಗಾಂಧೀಜಿಯವರಿಗೆ ಆನಂದಿ ಆರ್ಟ್ಸ್ ಫೌಂಡೇಶನ್ ವತಿಯಿಂದ “ಸತ್ಯ ಅಂಹಿಸಾ ಮೂರ್ತಿ” ನೃತ್ಯ ಪ್ರದರ್ಶನ ನೆರೆದವರ ಮನ ಗೆದ್ದಿತು.
ವಿ ನಾರಾಯಣ ಸ್ವಾಮಿ ನಿರ್ದೇಶನದಲ್ಲಿ ಫ್ರ್ಯಾಂಕ್ ಆಂಟೋನಿ ಪಬ್ಲಿಕ್ ಶಾಲೆ ಬ್ಯಾಂಡ್ ವತಿಯಿಂದ ಗಾಂಧೀಜಿಯವರ ನೆಚ್ಚಿನ ಗೀತೆಗಳನ್ನು ಹಾಗೂ ಗಾಂಧೀ ಕುರಿತು ಗೀತೆಗಳನ್ನು ಅರ್ಪಿಸಿ ಮೆರಗು ನೀಡಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಕಾರ್ಯಕ್ರಮದಲ್ಲಿ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರ್ ರಿಲೇಶನ್ಸ್ ನ ಹಿರಿಯ ವಲಯ ನಿರ್ದೇಶಕ ಪಿ ವೇಣುಗೋಪಾಲ್, ಸರ್ವೋದಯ ಇಂಟರ್ ನ್ಯಾಷನಲ್ ಟ್ರಸ್ಟ್ ಪಿ ಎ ನಜರತ್, ಬೆಂಗಳೂರಿನ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ ನ ನಿರ್ದೇಶಕರಾದ ಶ್ರೀಮತಿ ನಜನೀನ್ ಬಾನು, ರಾಜಭವನದ ವಿಶೇಷ ಕಾರ್ಯದರ್ಶಿಗಳಾದ ಶ್ರೀ ಆರ್ ಪ್ರಭುಶಂಕರ್, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಎಸ್ ರಂಗಪ್ಪ, ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋ ದಕ್ಷಿಣ ವಲಯದ ಹೆಚ್ಚುವರಿ ಪ್ರಧಾನ ನಿರ್ದೇಶಕ ವಿ ರಮಾಕಾಂತ್, ಪ್ರಸಾರ ಭಾರತಿ ಉಪನಿರ್ದೇಶಕರಾದ ಎನ್ ಮಾಧವ ರೆಡ್ಡಿ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.