ಶಿಕ್ಷಣದಲ್ಲಿ ಶಿಕ್ಷಕರ ಬೋಧನೆಯ ಸಾರ್ಥಕವಾಗಬೇಕಾದರೆ ಅದರ ಅನ್ವಯವನ್ನು ಶಿಕ್ಷಕರು ಸೇರಿ ಮಕ್ಕಳನ್ನು ತೊಡಗಿಸಿಕೊಂಡು ವಿನೂತನ ಪ್ರಯೋಗ ಗಳನ್ನು , ಚಟುವಟಿಕೆಗಳನ್ನು ಕೈಗೊಂಡಾಗ ಅದು ವಿದ್ಯಾರ್ಥಿಗಳಲ್ಲಿ ಅಚ್ಚಳಿಯದಂತೆ ನೆನಪಿನಲ್ಲಿ ಉಳಿಯುತ್ತದೆ. ಪಾಠ ಪ್ರವಚನಗಳ ಸಂದೇಶ ವಿದ್ಯಾರ್ಥಿಗಳಿಗೆ ತಿಳಿಯುತ್ತದೆ. ಅದು ಅವರಲ್ಲಿ ವಿವಿಧ ಕೌಶಲ್ಯಗಳನ್ನು ವಿಕಸನ ಮಾಡುತ್ತದೆ.
ಶಾಲಾ ಶಿಕ್ಷಣದಲ್ಲಿ ಎಲ್ಲಾ ವಿಷಯಗಳಂತೆ ಸಮಾಜ ವಿಜ್ಞಾನ ವಿಷಯದಲ್ಲಿ ವಿದ್ಯಾರ್ಥಿಗಳು ಓದುವ ಪಾಠಗಳು, ಮಾಡುವ ಚಟುವಟಿಕೆಗಳು ಮಕ್ಕಳನ್ನು ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನಾಗಿ ಸುತ್ತದೆ.
ಬೆಂಗಳೂರು ನಗರ ದಕ್ಷಿಣ ಜಿಲ್ಲೆಯ ಮಾಗಡಿ ರಸ್ತೆ ದಕ್ಷಿಣ ವಲಯ 2ರ ವ್ಯಾಪ್ತಿಯಲ್ಲಿ ಬರುವ ಶ್ರೀ ಸಿದ್ದಲಿಂಗೇಶ್ವರ ಪ್ರೌಢಶಾಲೆಯು ಸಮಾಜ ವಿಜ್ಞಾನ ವಿಷಯದಲ್ಲಿ ಇಂತಹ ಹಲವಾರು ವಿನೂತನ ಪ್ರಯೋಗ ಗಳನ್ನು, ಸಂಶೋಧನೆಗಳನ್ನು ವಿದ್ಯಾರ್ಥಿಗಳಿಂದ ಮಾಡಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವಾರು ಕಾರ್ಯಕ್ರಮ ಮಾಡುವ ಮೂಲಕ ಎಲ್ಲಾ ಶಾಲೆಗಳಿಗೂ ಮಾದರಿ ಶಾಲೆಯಾಗಿದೆ.
ಅಲ್ಲಿನ ಸಮಾಜ ವಿಜ್ಞಾನ ಅಧ್ಯಾಪಕರಾದ ಶ್ರೀ ಸುರೇಂದ್ರ ಸಮಗಾರ ಗುಡ್ಡೆಹೋಟೆಲ್ ಅವರು ಸಾಹಿತ್ಯ, ಕಲೆ, ಕೌಶಲ್ಯ ಮಕ್ಕಳ ನಾಟಕ ಮುಂತಾದವುಗಳನ್ನು ಅಳವಡಿಸಿಕೊಂಡು ಪಾಠಪ್ರವಚನಗಳನ್ನು ಮಾಡುವ ಮೂಲಕ ಮಕ್ಕಳಲ್ಲಿ ಕಲಿಕೆ ಕುತೂಹಲ, ಆಸಕ್ತಿ ಮೂಡಿಸುವಂತೆ ಮಾಡುತ್ತಿದ್ದಾರೆ.
ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಮುಂತಾದ ವಿಷಯಗಳಲ್ಲಿ ಬರುವ ಕಲಿಕಾಂಶಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥೈಸಲು ವಿವಿಧ ವಿನೂತನ ಕಲಾ ಪ್ರಯೋಗಗಳ ಚಟುವಟಿಕೆಗಳನ್ನು ನೀಡುತ್ತಿರುತ್ತಾರೆ. ಮಕ್ಕಳಿಂದ ಸಣ್ಣ ಸಣ್ಣ ನಾಟಕ, ಅಭಿನಯ ಪ್ರದರ್ಶನಗಳನ್ನು ಮಾಡಿಸುತ್ತಾರೆ. ಮಕ್ಕಳ ಸುಂದರವಾದ ಸುಪ್ತ ಪ್ರತಿಭೆಯನ್ನು ಗಮನಿಸಿದ ಅಧ್ಯಾಪಕರು ಮಕ್ಕಳಲ್ಲಿರುವ ಕಲಾಕೌಶಲ್ಯ ನಮ್ಮ ಶಾಲೆಗೆ, ನಮ್ಮ ತರಗತಿ ಮಾತ್ರ ಸೀಮಿತವಾಗಬಾರದು ಮಕ್ಕಳ ಮೂಲಕ ಸಮಾಜಕ್ಕೆ , ಯುವ ಜನತೆಗೆ ಜಾಗೃತಿ, ಉತ್ತಮ ಸಂದೇಶಗಳನ್ನು ಸಾರಬೇಕು ಎಂಬ ಆಶಯದಂತೆ ಅವರ ಪ್ರಾಂಶುಪಾಲರಾದ ಶ್ರೀಮತಿ ಸರೋಜಮ್ಮ ಶಿವ ಮೂರ್ತಿಯವರ ಮಾರ್ಗದರ್ಶನದಂತೆ, ಅಲ್ಲಿನ ಅಧ್ಯಾಪಕ ವೃಂದದವರ ಸಹಕಾರ ಪಡೆದು, ಶಾಲಾ ಮಕ್ಕಳಿಂದ ಸಮಾಜಕ್ಕೆ ಸಂದೇಶ ಸಾರುವ ಶಾಲಾ ಮಕ್ಕಳ ಬೀದಿನಾಟಕ
ಚಿಣ್ಣರ ಬಯಲಾಟ ಮಕ್ಕಳ ಬೀದಿ ನಾಟಕ ತಂಡವನ್ನು ಕಟ್ಟಿರುತ್ತಾರೆ. ಇದು ದೇಶದಲ್ಲಿಯೇ ಮೊಟ್ಟಮೊದಲ ಶಾಲಾಮಕ್ಕಳ ಬೀದಿನಾಟಕ ತಂಡವಾಗಿದೆ.ಸೇವಾ ಮನೋಭಾವನೆಯಿಂದ ಸಮಾಜವಿಜ್ಞಾನದ ವಿಷಯಗಳಲ್ಲಿ ಬರುವ ಪರಿಕಲ್ಪನೆಗಳಾದ ಸ್ವಚ್ಛ ಭಾರತ, ಪ್ರಕೃತಿ ಸಂಸ್ಕೃತಿ, ಮಾಡಿ ಮಾಡಿ ಮತದಾನ, ಪ್ಲಾಸ್ಟಿಕ್ ನಿಷೇಧ, ಗಿಡಮರಗಳನ್ನು ಕಡಿಯಬೇಡಿ, ತಂಬಾಕು ನಿಷೇಧ, ಬನ್ನಿ ಬನ್ನಿ ಶಾಲೆಗೆ ಇನ್ನು ಮುಂತಾದ ಬೀದಿನಾಟಕಗಳನ್ನು ಅವರೇ ಸ್ವತಹ ರಚಿಸಿ, ಮಕ್ಕಳಿಗೆ ನಿರ್ದೇಶನ ನೀಡಿ ಮಕ್ಕಳೊಂದಿಗೆ ಅವರೂ ಸಹ ವೇಷಭೂಷಣಗಳೊಂದಿಗೆ ತಮ್ಮ ಬಿಡುವಿನ ವೇಳೆಯಲ್ಲಿ, ರಜಾದಿನಗಳಂದು, ರಾಷ್ಟ್ರೀಯ ಹಬ್ಬಗಳಂದು ಬೆಂಗಳೂರಿನ ಸ್ಲಂ ಪ್ರದೇಶಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ಮಾರುಕಟ್ಟೆಗಳಲ್ಲಿ, ಸರ್ಕಲ್ ಗಳಲ್ಲಿ, ಮಾಲ್ ಗಳ ಎದುರು, ಪಾರ್ಕುಗಳಲ್ಲಿ ಇಲ್ಲಿಯವರೆಗೂ ಸುಮಾರು 70 ಬೀದಿನಾಟಕಗಳ ದಾಖಲೆ ಪ್ರದರ್ಶನಗಳನ್ನು ಮಾಡಿಸಿರುತ್ತಾರೆ. ಪ್ರತಿ ಬೀದಿ ನಾಟಕದಲ್ಲಿ ಮಕ್ಕಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಾರೆ. ಅವರ ಶಾಲೆಯ ಮತದಾರರ ಸಾಕ್ಷರತಾ ಸಂಘದ ಅಡಿಯಲ್ಲಿ ಅವರ ನಿರ್ದೇಶನದ
ಮಾಡಿ ಮಾಡಿ ಮತದಾನ ಮಕ್ಕಳ ಬೀದಿ ನಾಟಕವನ್ನು ಬೇರೆ ಬೇರೆ ಕಡೆಗಳಲ್ಲಿ ಪ್ರದರ್ಶನ ಮಾಡಿಸಿರುತ್ತಾರೆ. ದೂರದರ್ಶನ ಚಂದನ ವಾಹಿನಿ ಈ ಬೀದಿನಾಟಕಗಳನ್ನು 5 ಬಾರಿ ಪ್ರಸಾರ ಮಾಡಿ ಇಡೀ ದೇಶಕ್ಕೆ ತಲುಪಿರುತ್ತದೆ. ಭಾರತ ಚುನಾವಣಾ ಆಯೋಗ, ಕರ್ನಾಟಕ ಚುನಾವಣಾ ಆಯೋಗದ ಚುನಾವಣಾ ಆಯೋಗ ರಾಷ್ಟ್ರೀಯ ಮತದಾರರ ದಿನ 2020 ರಲ್ಲಿ ಅತ್ಯುತ್ತಮ ELC ಪ್ರೌಢಶಾಲೆ ಹಾಗೂ ಅತ್ಯುತ್ತಮ ELC ಸಂಚಾಲಕ ಶಿಕ್ಷಕರು ಪ್ರಶಸ್ತಿಯನ್ನು ನೀಡಿ ಅವರ ಮಕ್ಕಳ ಬೀದಿ ನಾಟಕ ತಂಡವನ್ನು ಗೌರವಿಸಿರುತ್ತಾರೆ. ಬೆಂಗಳೂರು ನಗರ ಜಿಲ್ಲಾ ಪಂಚಾಯತ್ SVEEP ಸಮಿತಿಯ ಅಡಿಯಲ್ಲಿ ನಡೆಸಿದ ಈ ಚಟುವಟಿಕೆಗಳ ವರದಿಯು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಆಗಿದೆ.
ರಾಷ್ಟ್ರಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡ ರಾಷ್ಟ್ರದಲ್ಲಿಯೇ ಮೊಟ್ಟಮೊದಲ ಶಾಲಾ ಮಕ್ಕಳಿಂದ ಸಮಾಜಕ್ಕೆ ಸಂದೇಶ ಸಾರುವ ಈ
ಚಿಣ್ಣರ ಬಯಲಾಟ ಬೀದಿನಾಟಕ ತಂಡದಂತೆ ಎಲ್ಲಾ ಶಾಲೆಗಳಲ್ಲಿ ಮಕ್ಕಳಲ್ಲಿ ಕಲೆಗಳ ಮೂಲಕ ಕಲಿಕೆಯನ್ನು ಸಂತೋಷ ಗಳಿಸುವ, ಕುತೂಹಲ ಮೂಡಿಸುವ, ಜನಜಾಗೃತಿ ಮೂಡಿಸುವ ನಾಟಕ ತಂಡಗಳನ್ನು ಪ್ರತಿ ಊರುಗಳಲ್ಲಿ ಬಿಡುವಿನ ವೇಳೆ, ರಜಾದಿನಗಳಂದು, ರಾಷ್ಟ್ರೀಯ ಹಬ್ಬಗಳಂದು ಶಾಲಾ ಮಕ್ಕಳಿಂದ ಮಾಡಿಸಿದಾಗ ಖಂಡಿತವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ. ಮಕ್ಕಳ ಕಲಿಕೆ ಪರಿಣಾಮಕಾರಿಯಾಗುತ್ತದೆ. ಹಲವಾರು ಸಮಸ್ಯೆಗಳು ಮಕ್ಕಳ ಮೂಲಕ ಪರಿಹಾರವಾಗಬಹುದು.
ಕರ್ನಾಟಕ ರಾಜ್ಯದ ರಾಜಧಾನಿ ನಗರದಲ್ಲಿರುವ ಶಾಲಾ ಮಕ್ಕಳ ಬೀದಿನಾಟಕ ತಂಡ ರಾಷ್ಟ್ರಕ್ಕೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಈ ನಾಟಕ ತಂಡ ಪ್ರದರ್ಶನ ಮಾಡುವಂತಾಗಲಿ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜನಜಾಗೃತಿ ಸೇವೆ ಈ ಮಕ್ಕಳ ಬೀದಿನಾಟಕ ತಂಡದಿಂದ ಹೀಗೆ ಮುಂದುವರೆಯಲಿ ಎಂದು ಶಿಕ್ಷಣ ರತ್ನ ಪತ್ರಿಕಾ ಬಳಗದವರು ಶುಭ ಹಾರೈಸುತ್ತೇವೆ.