ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಶ್ರೀ ಬಸವರಾಜ ಹೊರಟ್ಟಿಯವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ.ನಾಗೇಶ ಅವರೊಂದಿಗೆ ಸೋಮವಾರ ಬೆಂಗಳೂರಿನ ವಿಧಾನ ಸೌಧದಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ.
1995 ರಿಂದ 2014-15ನೇ ಸಾಲಿನಲ್ಲಿ ಪ್ರಾರಂಭವಾಗಿರುವ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಲ್ಲಿ ಬೋಧಕ/ಬೋಧಕೇತರ ಸಿಬ್ಬಂದಿಗಳನ್ನು ವೇತನಾನುದಾನಕ್ಕೆ ಒಳಪಡಿಸುವದು, ಶ್ರೀ ಬಸವರಾಜ ಹೊರಟ್ಟಿ ಅವರ ನೇತೃತ್ವದ ಕಾಲ್ಪನಿಕ ವೇತನ ಸಮಿತಿಯು ನೀಡಿದ ವರದಿಯನ್ನು ಸರಕಾರ ಒಪ್ಪಿಕೊಂಡು ಅನುಷ್ಠಾನಗೊಳಿಸುವುದು, ಅನುದಾನ ರಹಿತ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಸಿಬ್ಬಂದಿಗೆ ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ಒದಗಿಸುವ ಸರಕಾರಿ ಆದೇಶವನ್ನು ಜಾರಿಗೊಳಿಸುವುದು, ಸರ್ಕಾರಿ ಮತ್ತು ಅನುದಾನಿತ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ 70:1 ರ ಬದಲಾಗಿ 40:1 ರಂತೆ ಅನುಪಾತವನ್ನು ನಿಗದಿಪಡಿಸುವುದು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಮಹತ್ವದ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಲಿದೆ.