ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರಿಗೆ ಕನಿಷ್ಠ ವೇತನ 21 ಸಾವಿರ ರೂಪಾಯಿ ನೀಡುವಂತೆ ಇದೇ 22ರಂದು ವಿಧಾನ ಸೌಧ ಮುತ್ತಿಗೆ ಹಾಗೂ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕಂದಾಯ ಇಲಾಖೆ ಸಹಾಯಕರ ಸಂಘದ ಅಧ್ಯಕ್ಷ ಹೆಚ್.ಎನ್.ದೇವರಾಜ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ ಹದಿಮೂರರಿಂದ ಪ್ರಾರಂಭವಾಗುವ ಅಧಿವೇಶನದಲ್ಲಿ ಗ್ರಾಮ ಸಹಾಯಕರ ಕನಿಷ್ಟ ವೇತನ 21ಸಾವಿರ ರೂಪಾಯಿ ಘೋಷಣೆ ಮಾಡಬೇಕು, ಅಡ್ವೋಕೇಟ್ ಜನರಲ್ ವರದಿಯಂತೆ ಡಿ ದರ್ಜೆ ನೌಕರರೆಂದು ಘೋಷಣೆ ಮಾಡ ಬೇಕು ಎಂದು ಹೇಳಿದರು.
ಕೊರಾನಾ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರು ಮೃತ ಪಟ್ಟಿದ್ದಾರೆ. ರಾಜ್ಯ ಸರ್ಕಾರದಿಂದ ನೀಡಬೇಕಾಗಿರುವ ಮೂವತ್ತು ಲಕ್ಷ ರೂಪಾಯಿಗಳ ವಿಮಾ ಸೌಲಭ್ಯ ಇನ್ನೂ ಬಾಕಿಯಿದ್ದು, ಅಂಗನವಾಡಿ ಕಾರ್ಯಕರ್ತೆಯರಿಗೆ ನಾಲ್ಕು ಸಾವಿರ ರೂಪಾಯಿ ಹೆಚ್ಚುವರಿ ಭತ್ಯೆ ನೀಡಿದೆ. ಆದರೆ ಗ್ರಾಮ ಸಹಾಯಕ ರಿಗೆ ಇದುವರೆಗೂ ನೀಡಿಲ್ಲ ಎಂದು ಹೇಳಿದರು.
ನಿವೃತ್ತರಾಗಿರುವ ನೌಕರರಿಗೆ ಎರಡು ಲಕ್ಷ ರೂಪಾಯಿ ಇಡಿಗಂಟು ನೀಡಬೇಕು, ಮಾಸಿಕ ಐದು ಸಾವಿರ ರೂಪಾಯಿ ವಿಶ್ರಾಂತಿ ವೇತನ ನೀಡಬೇಕು. ಕೋವಿಡ್ ನಿಂದ ಸಾವಿಗೀಡಾದ ಸಹಾಯಕರಿಗೆ ಮೂವತ್ತು ಲಕ್ಷ ರೂಪಾಯಿ ವಿಮಾ ಸೌಲಭ್ಯ ಹಣಕಾಸು ಇಲಾಖೆಯಿಂದ ಅನುಮೋದನೆಯಾಗಬೇಕು ಎಂದು ಆಗ್ರಹಿಸಿದರು.
ಗ್ರಾಮ ಸಹಾಯಕರನ್ನು ಸರ್ಕಾರಿ ಕಛೇರಿಗಳಲ್ಲಿ ರಾತ್ರಿ ಕಾವಲು, ಚೆಕ್ ಪೋಸ್ಟ್, ಕಚೇರಿ ಗೇಟ್ ಕಾವಲುಗಳಿಗೆ ನೇಮಿಸದಂತೆ ಜಿಲ್ಲಾಧಿಕಾರಿ ಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡ ಬೇಕು ಎಂದು ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ಬಿ.ಶಿವರುದ್ರಪ್ಪ, ಉಪಾಧ್ಯಕ್ಷ ಹೊನ್ನೇಶ್, ಪ್ರಕಾಶ್ ಅಂತಣ್ಣನವರ, ಆರ್.ವಿ.ಮಂಜುನಾಥ್ ಅನೇಕರು ಹಾಜರಿದ್ದರು.