ಬೆಂಗಳೂರು, ಸೆಪ್ಟೆಂಬರ್ 22 (ಕರ್ನಾಟಕ ವಾರ್ತೆ): ಮನರೇಗಾ ಯೋಜನೆಯಡಿ ರೈತರು ತಮ್ಮ ಬೆಳೆಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬಹುದಾಗಿದೆ. ಇದಲ್ಲದೇ ಶಾಲೆ, ಅಂಗನವಾಡಿ, ಆಟದ ಮೈದಾನ, ನೀರಿನ ಮರುಪೂರಣ ಕೆಲಸಗಳನ್ನು ಕೈಗೊಳ್ಳಬಹುದಾಗಿದೆ ಎಂದು ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವರಾದ ಗಿರಿರಾಜ್ ಸಿಂಗ್ ಅವರು ತಿಳಿಸಿದರು.
ಅವರು ಇಂದು ಮಾಗಡಿ ತಾಲ್ಲೂಕಿನ ಮೋಟಗೊಂಡನಹಳ್ಳಿಯಲ್ಲಿ ಕಲ್ಯಾಣಿ ಅಭಿವೃದ್ಧಿ ಕೆಲಸ, ಪೆಮ್ಮನಹಳ್ಳಿಯಲ್ಲಿ ಶಾಲಾ ಹಾಗೂ ಅಂಗನವಾಡಿ ಕಟ್ಟಡ ಅಭಿವೃದ್ಧಿ, ಸೋಲೂರಿನ ರೈತರ ಜಮೀನಿನಲ್ಲಿ ಶ್ರೀ ಗಂಧದ ಬೆಳೆ, ರಾಮನಗರ ತಾಲ್ಲೂಕಿನ ಹಾಗಲಹಳ್ಳಿಯಲ್ಲಿ ರೇಷ್ಮೆ ಬೆಳೆ ಹಾಗೂ ರೇಷ್ಮೆ ಚಟುವಟಿಕೆ, ಚನ್ನಪಟ್ಟಣ ತಾಲ್ಲೂಕಿನ ಮಾಕಳಿಯಲ್ಲಿ ಜಲನಯನ ಅಭಿವೃದ್ಧಿ ಕೆಲಸಗಳನ್ನು ವೀಕ್ಷಿಸಿದರು.
ಕೋಳಿ ಸಾಕಾಣಿಕೆ ಅಳವಡಿಸಿಕೊಂಡು ಹೆಚ್ಚು ಆದಾಯಗಳಿಸಿ : ಸೋಲೂರಿನಲ್ಲಿ ಶ್ರೀಗಂಧದ ಬೆಳೆ ವೀಕ್ಷಿಸಿದ ಕೇಂದ್ರ ಸಚಿವರು ರೈತರೊಂದಿಗೆ ಮಾತನಾಡಿ ಒಂದು ಎಕರೆ ಜಮೀನು ಇರುವ ರೈತರು ಸಹ ಹೆಚ್ಚಿನ ಆದಾಯಗಳಿಸಿ ಜೀವನ ನಡೆಸುವಂತಾಗಬೇಕು. ೧೦ ಚದರ ಅಡಿಯಲ್ಲಿ ಒಂದು ಕೋಳಿ ಸಾಕಾಣಿಕೆ ಮಾಡಬಹುದು. ಕೋಳಿ ಮಾರಾಟದಿಂದ ರೈತನಿಗೆ ಆದಾಯವಾದರೆ ಸಾಕಾಣಿಕೆಯಿಂದ ಬೆಳೆಗಳಿಗೆ ಗೊಬ್ಬರ ದೊರೆಯುತ್ತದೆ ಎಂದರು.
ಶ್ರೀಗಂಧದ ಗಿಡಗಳ ನಡುವೆ ಇರುವ ಸ್ಥಳಗಳಲ್ಲಿ ರೈತರು ಅರಿಶಿಣ, ಶುಂಠಿ ಮುಂತಾದ ಬೆಳೆಗಳನ್ನು ಬೆಳೆಯುವುದರಿಂದ ಹೆಚ್ಚಿನ ಆದಾಯ ದೊರೆಯುತ್ತದೆ. ಮನರೇಗಾ ವ್ಯಾಪ್ತಿಗೆ ಶ್ರೀಗಂಧದ ಬೆಳೆಯನ್ನು ತಂದಿರುವುದರಿಂದ ಮುಂದಿನ ದಿನಗಳಲ್ಲಿ ಗಂಧದ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಬಹುದು ಎಂದರು.
ರಾಮನಗರ ತಾಲ್ಲೂಕಿನ ಸುಗ್ಗನಹಳ್ಳಿಯ ಗ್ರಾಮ ಪಂಚಾಯತಿಯ ಹಾಗಲಹಳ್ಳಿಯಲ್ಲಿ ಶಿವರಾಮಯ್ಯ ಅವರ ತೋಟಕ್ಕೆ ಭೇಟಿ ನೀಡಿ ಒಂದು ಎಕರೆ ರೇಷ್ಮೆ ಬೆಳೆಯಲ್ಲಿ ರೈತರು ಎಷ್ಟು ಅದಾಯ ಗಳಿಸಬಹುದು ಎಂದು ಮಾಹಿತಿ ಪಡೆದರು. ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಪುಟ್ಟಸ್ವಾಮಿ ಅವರು ೨೦೨೧-೨೨ ನೇ ಸಾಲಿನಲ್ಲಿ ಮನರೇಗಾ ಯೋಜನೆಯಡಿ ೨೦೭೦ ಕಾಮಗಾರಿಗಳನ್ನು ಕೈಗೊಂಡು ೧೭೨೧ ಎಕರೆ ಹಿಪ್ಪುನೇರಳೆ ಬೆಳೆಯನ್ನು ವಿಸ್ತರಿಸಲಾಗಿದೆ. ೩೨೦೫೭೦ ಮಾನವ ದಿನ ಸೃಷ್ಟಿಸಿ ೯ ಕೋಟಿ ಖರ್ಚು ಮಾಡಲಾಗಿದೆ ಎಂದ ಅವರು ವಿವಿಧ ರೀತಿಯ ರೇಷ್ಮೆ ಹುಳು, ರೇಷ್ಮೆ ಸಾಕಾಣಿಕೆ, ರೇಷ್ಮೆ ಬೆಳೆ, ರೇಷ್ಮೆ ಉತ್ಪಾದನೆ ಕುರಿತು ಸಚಿವರಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಲೋಕಸಭಾ ಸಂಸದರಾದ ಡಿ.ಕೆ ಸುರೇಶ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಅತೀಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.