ಮುಕ್ತ ವಿವಿಯಲ್ಲಿ ಪ್ರಸಕ್ತ ಸಾಲಿನಿಂದ ಕೌಶಲ ತರಬೇತಿ : ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್

varthajala
0


ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‍ಒಯು)ದಲ್ಲಿ ಪ್ರಸಕ್ತ ಸಾಲಿನಿಂದ ವಿದ್ಯಾರ್ಥಿಗಳಿಗೆ ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮ ಆರಂಭವಾಗಲಿದೆ.


ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾದಂತಹ ಶೈಕ್ಷಣಿಕ ಕಾರ್ಯಕ್ರಮಗಳನ್ನು ನೀಡುತ್ತಿರುವ ಮುಕ್ತ ವಿವಿಯು ವೃತ್ತಿ ನಡೆಸಲು ಅಥವಾ ಸ್ವಯಂ ಉದ್ಯೋಗ ಮೂಲಕ ಸ್ವಾಭಿಮಾನದ ಬದುಕು ನಡೆಸಲು ಸಹಕಾರಿಯಾಗುವಂತೆ ಕೌಶಲ ತರಬೇತಿ ನೀಡಲು ಮುಂದಾಗಿದೆ.
2021-22ನೇ ಸಾಲಿಗೆ ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆ (ಸಿಎಂಕೆವೈಸಿ) ಯಡಿ ತರಬೇತಿ ಕಾರ್ಯಕ್ರಮ ಆರಂಭಿಸಲು ‘ಕರ್ನಾಟಕ ಕೌಶಲಾಭಿವೃದ್ಧಿ ನಿಗಮ’ವು ತರಬೇತಿ ಸಂಸ್ಥೆಯ ಜಾಬ್‍ರೋಲ್‍ಗಳಿಗೆ ಅನುಗುಣವಾಗಿ ಒಡಂಬಡಿಕೆ ಮಾಡಿಕೊಂಡು ಆಗಸ್ಟ್ 25 ರಂದು ‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ’ಕ್ಕೆ ಕಾರ್ಯಾದೇಶ ನೀಡಿದೆ. ಅಭ್ಯರ್ಥಿಗಳು ಮಾರ್ಗಸೂಚಿ ಅನುಸಾರ ಕೋವಿಡ್ ಲಸಿಕೆ ಮೊದಲ ಡೋಸ್ ಪಡೆದಿರುವುದನ್ನು ಖಚಿತಪಡಿಸಿಕೊಂಡು ಪ್ರಸಕ್ತ ಸಾಲಿನಿಂದಲೇ ತರಬೇತಿ ಆರಂಭಿಸುವಂತೆ ಕರ್ನಾಟಕ ಕೌಶಲಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮುಕ್ತ ವಿವಿಗೆ ತಿಳಿಸಿದ್ದಾರೆ.
ಮುಕ್ತ ಗಂಗೋತ್ರಿ ಆವರಣದಲ್ಲಿ ತರಬೇತಿ ಆರಂಭಿಸಲು ಸಿದ್ಧತೆ ಮಾಡಿಕೊಂಡಿರುವ ವಿಶ್ವವಿದ್ಯಾನಿಲಯವು, ಅಧಿಸೂಚನೆ ಮೂಲಕ ಪ್ರವೇಶಾತಿ ಪ್ರಕ್ರಿಯೆ ಆರಂಭಿಸಲಿದೆ. ಈ ಕುರಿತು ಪತ್ರಿಕೆಗಳಿಗೆ ಮಾಹಿತಿಯನ್ನು ಕರಾಮುವಿ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಅವರು ಹಂಚಿಕೊಂಡಿದ್ದಾರೆ.
ದೂರ ಶಿಕ್ಷಣಕ್ಕೆ ಸೀಮಿತವಾಗದೇ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಲು ವಿಶ್ವವಿದ್ಯಾನಿಲಯ ಸಜ್ಜುಗೊಂಡಿದೆ. ಸರ್ಕಾರವು ಸಿಎಂಕೆವೈಸಿಯಡಿ ತರಬೇತಿ ನೀಡಲು ಕಾರ್ಯಾದೇಶ ನೀಡಿರುವುದರಿಂದ ಲಭ್ಯ ಮೂಲ ಸೌಲಭ್ಯಗಳನ್ನು ಬಳಸಿಕೊಂಡು ಪ್ರಸಕ್ತ ಸಾಲಿನಿಂದಲೇ ಕಾರ್ಯಕ್ರಮ ಆರಂಭಿಸಲಾಗುವುದು. ಕೌಶ¯ ಅಭಿವೃದ್ಧಿ ತರಬೇತಿಗೆ ಹೆಚ್ಚು ಬೇಡಿಕೆ ಇರುವುದರಿಂದ ಶೀಘ್ರ ಅಧಿಸೂಚನೆ ಹೊರಡಿಸಿ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಲಾಗುವುದೆಂದು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ತಿಳಿಸಿದ್ದಾರೆ.
Tags

Post a Comment

0Comments

Post a Comment (0)