ಬೆಂಗಳೂರು ಆಗಸ್ಟ್ 13 (ಕರ್ನಾಟಕ ವಾರ್ತೆ) : ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿಯಾಗಿ ರೂ.300ಕೋಟಿಗಳನ್ನು ಬಿಡುಗಡೆ ಮಾಡಿದ್ದು, ಇದನ್ನು 2019-20ನೇ ಸಾಲಿನ ಬಿಡುಗಡೆಗೆ ಬಾಕಿಯಿರುವ ರೂ. 300 ಕೋಟಿಗಳಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ತಿಳಿಸಿದರು.
ಇಂದು ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಬಿಡುಗಡೆ ಸಂಬಂಧ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 2021-22ನೇ ಸಾಲಿಗೆ 2 ಕೋಟಿ ರೂಗಳಿಗೆ ಕ್ರಿಯಾ ಯೋಜನೆ ತಯಾರಿಸಲು ಅನುಮತಿ ನೀಡಿದೆ ಎಂದರು.
ಕೆಎಲ್‍ಎಲ್‍ಎಡಿಎಸ್ ಮಾರ್ಗಸೂಚಿಗಳ ಅನ್ವಯ ಕ್ರಿಯಾ ಯೋಜನೆಯನ್ನು ಪ್ರತಿ ವರ್ಷ ಜೂನ್ ಅಂತ್ಯದೊಳಗೆ ಅಂತಿಮಗೊಳಿಸಲು ಸೂಚಿಸಿದ್ದು, ಕಾಮಗಾರಿಗಳ ಪ್ರಗತಿಗೆ ಅನುಗುಣವಾಗಿ ಸರ್ಕಾರದಿಂದ ಬಿಡುಗಡೆಯಾಗಿರುವ - ಬಿಡುಗಡೆಯಾಗುವ ಅನುದಾನದಲ್ಲಿ ಭರಿಸಲಾಗುವುದು ಎಂದು ತಿಳಿಸಿದರು.
2018-19 ನೇ ಸಾಲಿಗೆ ಸಂಬಂಧಿಸಿದಂತೆ ಬಾಕಿ ಇರುವ 127.69 ಕೋಟಿ ರೂಗಳನ್ನು ಬಿಡುಗಡೆಗೊಳಿಸಲು ಪ್ರಸಕ್ತ ಲಭ್ಯವಿರುವ ಅನುದಾನ ಪೂರ್ಣವಾಗಿ ವೆಚ್ಚವಾದ ನಂತರ ಪ್ರಸ್ತಾವನೆ ಸಲ್ಲಿಸಲಾಗುವುದು. ಯೋಜನಾ ಇಲಾಖೆಯು ಅನುದಾನವನ್ನು ಕ್ಷೇತ್ರವಾರು ಬಿಡುಗಡೆ ಮಾಡುವ ಬದಲಾಗಿ ಜಿಲ್ಲಾವಾರು ಬಿಡುಗಡೆ ಮಾಡಲು ನಿರ್ಣಯಿಸಲಾಗಿದೆ ಎಂದರು.
ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಉಳಿಕೆಯಾದ ಅನುದಾನವನ್ನು ರಾಜ್ಯ ಮಟ್ಟದ ಕೇಂದ್ರೀಕೃತ ಬ್ಯಾಂಕ್ ಖಾತೆಗೆ ಜಮೆಗೊಳಿಸಲಾಗುವುದು. ಶಾಸಕರು ಕಾಮಗಾರಿಗಳನ್ನು ನೀಡಿದ ನಂತರ ಅದು ವಿಳಂಬವಾದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳಲಾಗುವುದು. ಶಾಸಕರ ಅನುದಾನ ಬಿಡುಗಡೆಯಲ್ಲಿ ಅಡೆತಡೆಯಾಗದಂತೆ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ತಿನ ಸದಸ್ಯರಾದ ಕೆ.ಸಿ.ಕೊಂಡಯ್ಯ, ಎಸ್.ರವಿ, ಅಪ್ಪಾಜಿಗೌಡ, ಹನುಮಂತ ನಿರಾಣಿ ಉಪಸ್ಥಿತರಿದ್ದರು.