SSLC ಪರೀಕ್ಷೆ ರದ್ದು ಮಾಡಿ: ಕರ್ನಾಟಕ ಜನಾಧಿಕಾರ ಪಕ್ಷ ಆಗ್ರಹ

varthajala
0
ಕೊರೋನಾ ಸಂಕಷ್ಟ ಕಾಲದಲ್ಲಿ ಎಸ್ಎಸ್ ಎಲ್ ಸಿ ಪರೀಕ್ಷೆ ನಡೆಸುವ ಶಿಕ್ಷಣ ಸಚಿವರ ಅಮಾನವೀಯ ನಿರ್ಧಾರವು ಸಮಾನ ಶಿಕ್ಷಣ ಮತ್ತು ಮಕ್ಕಳ ಹಕ್ಕುಗಳ ಕಾಯ್ದೆಗಳನ್ನು ಉಲ್ಲಂಘಿಸುವಂತದ್ದು ಎಂದು ಕರ್ನಾಟಕ ಜನಾಧಿಕಾರ ಪಕ್ಷ ಅಭಿಪ್ರಾಯಪಡುತ್ತದೆ. 


ಮಕ್ಕಳ ಹಕ್ಕುಗಳ ಕಾನೂನು ಉಲ್ಲಂಘನೆ : 18 ವರ್ಷದೊಳಗಿನ ಎಲ್ಲಾ ಮಕ್ಕಳು ಭಯಮುಕ್ತವಾದ ಶಿಕ್ಷಣ ಪಡೆಯಬೇಕು ಎಂದು ಬಾಲನ್ಯಾಯ ಕಾಯ್ದೆ ಸೇರಿದಂತೆ ಹಲವು ರೀತಿಯ ಮಕ್ಕಳ ಹಕ್ಕುಗಳ ಸಂಬಂಧಿ ಕಾಯ್ದೆಗಳು ಸ್ಪಷ್ಟಪಡಿಸಿವೆ. ಈಗಾಗಲೇ ಕೊರೋನಾ ಸಾಂಕ್ರಾಮಿಕ ರೋಗದಿಂದ ಹಲವು ಮನೆಗಳಲ್ಲಿ ಮಕ್ಕಳ ಪೋಷಕರು ಇಲ್ಲದಂತಾಗಿದೆ. 

ತಂದೆ ತಾಯಿ ಕಳೆದು ಕೊಂಡ ಮಕ್ಕಳ ಪೋಷಣೆಗಾಗಿಯೇ ಸರ್ಕಾರ ಯೋಜನೆ ರೂಪಿಸಿದೆ ಎಂದರೆ ಅದರ ಗಂಭೀರತೆ ಎಷ್ಟು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಶಾಲೆಗಳಲ್ಲಿ "ಸಾಮೂಹಿಕ ಪರೀಕ್ಷೆ" ಏರ್ಪಡಿಸುವುದು ಮಕ್ಕಳಲ್ಲಿ ಪ್ರಾಣಭಯ, ಆತಂಕಕ್ಕೆ ಕಾರಣವಾಗುತ್ತದೆ. 

ತಮ್ಮ‌ ಕಣ್ಣೆದುರುರೇ ಸಾವು ನೋವುಗಳನ್ನು ಕಂಡ ಮಕ್ಕಳು ಅದೇ ಸಾಂಕ್ರಾಮಿಕ ರೋಗದ ಮಧ್ಯೆಯೇ ಪರೀಕ್ಷೆ ನಡೆಸುವುದು ಮಕ್ಕಳ ಮಾನಸಿಕತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. 

ಮಕ್ಕಳ ಶಿಕ್ಷಣ ಎಂಬುದು ಭಯಮುಕ್ತ ವಾತಾವರಣದಲ್ಲಿ ಇರಬೇಕು ಎಂದು ಬಾಲನ್ಯಾಯ ಕಾಯ್ದೆ ಹೇಳುತ್ತದೆ. ಆದರೆ ಪ್ರಾಣ ಭಯದ ವಾತಾವರಣದಲ್ಲಿ ಮಕ್ಕಳು ಪರೀಕ್ಷೆ ಎದುರಿಸುವ ಸ್ಥಿತಿಯನ್ನು ಶಿಕ್ಷಣ ಇಲಾಖೆ ಮತ್ತು ಸಚಿವರು ತಂದಿಟ್ಟಿರುವುದು ಅಘಾತಕಾರಿಯಾಗಿದೆ.

ಸಮಾನ ಶಿಕ್ಷಣ ವಿರೋಧಿ ನಿಲುವು : ರಾಜ್ಯ ಕಂಡ ಅತ್ಯಂತ ಕಡು ಆರ್ಥಿಕ ಸಂಕಷ್ಟದ ಕಾಲದಲ್ಲೂ ಮಕ್ಕಳನ್ನು ಶಿಕ್ಷಣಕ್ಕಾಗಿ ಪರೀಕ್ಷೆಗೆ ಒಡ್ಡುವುದು ಸಮಾನ ಶಿಕ್ಷಣ ಆಶಯಕ್ಕೆ ವಿರುದ್ದವಾದ ನಿಲುವಾಗಿದೆ. ಈಗಾಗಲೇ ಉದ್ಯೋಗವಿಲ್ಲದೆ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಿಲ್ಲದೆ, ಕೂಲಿಯಿಲ್ಲದೆ, ವ್ಯಾಪಾರ ವಹಿವಾಟುಗಳಿಲ್ಲದೆ ಬಡ ಮತ್ತು ಮಧ್ಯಮ ವರ್ಗಗಳು ಆರ್ಥಿಕ ಸಂಕಷ್ಟದಲ್ಲಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಎಂಬುದು ಮಕ್ಕಳಿಗೆ ಅಗ್ನಿ ಪರೀಕ್ಷೆಯಂತೆ ಎದುರಾಗಿದ್ದು, ಊಟಕ್ಕೇ ಪರದಾಡುವ ಕುಟುಂಬಗಳ ಮಕ್ಕಳು ದೂರ ಪರೀಕ್ಷಾ ಕೇಂದ್ರಕ್ಕೆ ಪ್ರಯಾಣಿಸಿ ಪರೀಕ್ಷೆ ಬರೆಯಬೇಕಿದೆ. 

ಇದಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿ/ವಿದ್ಯಾರ್ಥಿನಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದ ಶೇಕಡಾವಾರು ಅಂಕಗಳನ್ನು ನೋಡಿ ಖಾಸಾಗಿ ಪಿಯು ಕಾಲೇಜುಗಳು ಡೊನೇಷನ್ ನಿಗಧಿ ಮಾಡುತ್ತವೆ. ಎಸ್ ಎಸ್ ಎಲ್ ಸಿಯನ್ನು ಪರೀಕ್ಷೆ ನಡೆಸದೇ, ಶೇಕಡಾವಾರ ಅಂಕಗಳಿಲ್ಲದೆ ಸಾಮೂಹಿಕ ಉತ್ತೀರ್ಣ ಮಾಡಿದರೆ ಡೋನೇಷನ್, ಫೀಸ್ ಗಳಲ್ಲಿ ಯಾವುದೇ ಏರಿಳಿತಗಳನ್ನು ಮಾಡಲು ಖಾಸಗಿ ಕಾಲೇಜುಗಳಿಗೆ ಸಾಧ್ಯವಾಗುವುದಿಲ್ಲ. 

ಈಗಾಗಲೇ ಅರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ದುಬಾರಿ ಡೊನೇಷನ್ ಹೇರುವ ಖಾಸಗಿ ಕಾಲೇಜುಗಳ ಮೆಟ್ಟಿಲು ಹತ್ತಲು ಸಾಧ್ಯವೇ ಇಲ್ಲ. ಇದು ಸಮಾನ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸುತ್ತದೆ. ಕರ್ನಾಟಕ ರಣಧೀರ ಪಡೆಯು ಹಲವು ಜನಪರ ಸಂಘಟನೆಗಳ ಜೊತೆಗೂಡಿ ಸಮಾನ ಶಿಕ್ಷಣಕ್ಕಾಗಿ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದೆ. ಸಮಾನ ಶಿಕ್ಷಣ ಆಶಯದ ವಿರೋಧಿ ನಿಲುವನ್ನು ಕರ್ನಾಟಕ ಜನಾಧಿಕಾರ ಪಕ್ಷವೂ ವಿರೋಧಿಸುತ್ತದೆ.

ಖಾಸಗಿ ಕಾಲೇಜು ಮಾಫಿಯಾ ಒತ್ತಡ :- 
ಶಿಕ್ಷಣ ಸಚಿವರು ಖಾಸಗಿ ಕಾಲೇಜುಗಳ ಮಾಫಿಯಾಗೆ ಒಳಗಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ ಎಂದು ಕರ್ನಾಟಕ ಜನಾಧಿಕಾರ ಪಕ್ಷ ಗಂಭೀರ ಆರೋಪ ಮಾಡುತ್ತದೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಎಂಬುದು ರಾಕೇಟ್ ಸಯನ್ಸ್ ಅಲ್ಲ. ಎಸ್ ಎಸ್ ಎಲ್ ಸಿ ಪರೀಕ್ಷೆ ಎಂಬುದು ಪಿಯುಸಿಗೆ ಸೇರ್ಪಡೆಗೊಳಿಸಲು ಮಾನದಂಡವಷ್ಟೆ. 
ಅದರ ಹೊರತಾಗಿ ಎಸ್ ಎಸ್ ಎಲ್ ಸಿಗೆ ಈಗಿನ ಕಾಲಮಾನದಲ್ಲಿ ಹೇಳಿಕೊಳ್ಳುವಂತಹ ಉದ್ಯೋಗ ಭರವಸೆಯಾಗಲೀ, ಸಾಮಾಜಿಕ ಸ್ಥಾನಮಾನವಾಗಲೀ ಇಲ್ಲ. ಕೇವಲ ಪಿಯುಸಿ ತರಗತಿಗೆ ಮೆಟ್ಟಿಲಾಗಿರುವ ಎಸ್ ಎಸ್ ಎಲ್ ಸಿಯಿಂದ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಿದರೆ ಆಗುವ ನಷ್ಟವೇನು ? 
ಡಿಗ್ರಿ ತರಗತಿಗಳಿಗೆ ಪ್ರವೇಶ ಪಡೆಯುವ ಪಿಯುಸಿ ಪರೀಕ್ಷೆಯನ್ನೇ ರದ್ದು ಮಾಡಿರುವಾಗ ಪಿಯುಸಿಗೆ ಪ್ರವೇಶ ನೀಡುವ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಯಾಕೆ ರದ್ದು ಮಾಡಬಾರದು ? ಖಾಸಗಿ ಶಾಲೆಗಳ ಡೊನೇಷನ್ ಮಾಫೀಯಾಗೆ ಮಾತ್ರ ಲಾಭದಾಯಕವಾಗಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಮಕ್ಕಳ ಪ್ರಾಣ ಒತ್ತೆ ಇಟ್ಟು ಮಾಡುವ ಉತ್ಸಾಹ ಬಗ್ಗೆ ಹಲವು ಅನುಮಾನಗಳು ಬರುತ್ತದೆ. 
ಆದ್ದರಿಂದ ಸಮಾನ ಶಿಕ್ಷಣದ ವಿರೋಧಿ, ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುವ, ಡೊನೇಷನ್ ಮಾಫಿಯಾಗೆ ಪೂರಕವಾಗಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ರದ್ದುಗೊಳಿಸಬೇಕು. ಲಕ್ಷಾಂತರ ಮಕ್ಕಳ ಪ್ರಾಣವನ್ನು ಒತ್ತೆಯಿಡುವ ಕೃತ್ಯವನ್ನು ಸರ್ಕಾರ ನಿಲ್ಲಿಸಬೇಕು ಎಂದು ಕರ್ನಾಟಕ ಜನಾಧಿಕಾರ ಪಕ್ಷ ಆಗ್ರಹಿಸುತ್ತದೆ.

Tags

Post a Comment

0Comments

Post a Comment (0)