ಬೆಂಗಳೂರು, ಜುಲೈ 19 (ಕರ್ನಾಟಕ ವಾರ್ತೆ): ಕೇಂದ್ರ ಶಿಕ್ಷಣ ಸಚಿವಾಲಯದ ಶಾಸನಬದ್ಧ ಅಂಗವಾದ ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ನಿರ್ವಹಣಾ ವಿಭಾಗದಡಿ ಸ್ನಾತಕೋತ್ತರ ವ್ಯವಹಾರ ನಿರ್ವಹಣಾ ಕೋರ್ಸ್ ನಡೆಸಲು (ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್) ಅನುಮತಿ ನೀಡಿದೆ.
ಮುಕ್ತ ಹಾಗೂ ದೂರ ಶಿಕ್ಷಣ ಮಾದರಿಯಡಿ ಎಂಬಿಎ ಕೋರ್ಸ್ ನಡೆಸಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾನ್ಯತೆ ಪಡೆದಿರುವ ದೇಶದ ಏಕೈಕ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, 2021-22ನೇ ಸಾಲಿಗೆ ಮುಕ್ತ ಹಾಗೂ ದೂರ ಶಿಕ್ಷಣ ಕಲಿಕಾ ವಿಧಾನದಡಿ ಎಂಬಿಎ ಕೋರ್ಸ್‍ಗೆ (ಜನರಲ್ ಅಡ್ಮಿನಿಸ್ಟ್ರೇಷನ್) 10,000 ಸೀಟುಗಳಿಗೆ ಪ್ರವೇಶಾತಿ ಕಲ್ಪಿಸಲು AICTE ಅನುಮತಿಸಿದೆ.