ರಾಜ್ಯದ ಶಿಕ್ಷಣ ಕ್ಷೇತ್ರ ಕುಲಗೆಟ್ಟು ಹೋಗುತ್ತಿದ್ದು ರಾಜ್ಯ ಸರಕಾರದ ನಿರ್ಲಕ್ಷ್ಯದಿಂದ ಮಕ್ಕಳ ಭವಿಷ್ಯ ಅಪಾಯದಲ್ಲಿದೆ. ಕೊರೋನ ಸೋಂಕಿನ ಮಧ್ಯೆ ಪೋಷಕರು ಮಕ್ಕಳ ಫೀಸ್ ಭರಿಸಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ತಿಳಿಸಿದರು.
ಆಮ್ ಆದ್ಮಿ ಪಾರ್ಟಿಯ ನಡೆಸುತ್ತಿರುವ "ಫೀಸ್ ಇಳಿಸಿ ಮಕ್ಕಳ ಭವಿಷ್ಯ ಉಳಿಸಿ" ರಾಜ್ಯ ವ್ಯಾಪಿ ಸಹಿ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ ನೀಡಿದ ಇವರು ಪೋಷಕರು ಮಕ್ಕಳ ಫೀಸ್ ಭರಿಸಲಾಗದೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಗೆ ಒಳಗಾಗಿದ್ದಾರೆ. ತಮ್ಮ ಉಳಿತಾಯದ ಹಣ, ಚಿನ್ನ ಎಲ್ಲವನ್ನೂ ಅಡಮಾನ ಇಟ್ಟು ಹಣ ಹೊಂದಿಸಿ ಫೀಸ್ ತುಂಬುತ್ತಿದ್ದಾರೆ. ಶಾಲೆಗಳು ಫೀಸ್ ಭರಿಸಲಾಗದ ಮಕ್ಕಳನ್ನು ಆನ್ಲೈನ್ ತರಗತಿಗಳಿಗೆ ಸೇರಿಸುತ್ತಿಲ್ಲ. ಜನತೆಯ ಜೀವ ಉಳಿಸಬೇಕಾದ ಸರಕಾರ ಖಾಸಗಿ ಶಾಲೆಗಳ ಜೊತೆಗೆ ಕೈಜೋಡಿಸಿ ಪೋಷಕರ ಪ್ರಾಣ ಹಿಂಡುತ್ತಿದೆ. ಜನತೆಯ ಕಷ್ಟ ಆಲಿಸಲು ಆಗದ ತಾಳ್ಮೆ ಇಲ್ಲದ ಶಿಕ್ಷಣ ಸಚಿವರು ರಾಜೀನಾಮೆ ಕೊಟ್ಟು ಮನೆಗೆ ನಡೆಯಲಿ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಸರಕಾರಕ್ಕೆ ಕಣ್ಣಲ್ಲಿ ನೆತ್ತರಿಲ್ಲ. ಪೋಷಕರ ಕಷ್ಟಗಳು ಕಾಣುತ್ತಿಲ್ಲ. ಖಾಸಗಿ ಶಾಲೆಗಳ ಮಕ್ಕಳ ಪೋಷಕರು ಫೀಸ್ ಭರಿಸಲಾಗದೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಗೆ ಒಳಗಾಗಿದ್ದಾರೆ. ಹೀಗೆ ಮುಂದುವರಿದರೆ ರಾಜ್ಯದ ಶಿಕ್ಷಣ ಕ್ಷೇತ್ರದ ಭವಿಷ್ಯ ನೆಲಕ್ಕಚ್ಚಲಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳ ಫೀಸ್ ಬಗ್ಗೆ ಮೌನವಾಗಿದ್ದಾರೆ. ಇವರೇ ಈ ಸಂಸ್ಥೆಗಳ ಜೊತೆಗೆ ಕೈ ಜೋಡಿಸಿದ್ದಾರೆ. ಮಕ್ಕಳ ಕಷ್ಟಕ್ಕೆ ಬಾರದ ಶಿಕ್ಷಣ ಸಚಿವ ಇದ್ದು ಫಲವೇನು? ತಕ್ಷಣ ರಾಜೀನಾಮೆ ನೀಡಿ ಮನೆಗೆ ನಡೆಯಲಿ ಎಂದು ಮೋಹನ್ ದಾಸರಿ ಆಗ್ರಹಿಸಿದರು.
ಅಭಿಯಾನದ ಅಂಗವಾಗಿ ಮನೆ ಮನೆ ಬೇಟಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ನೂರಾರು ಪೋಷಕರು ಮತ್ತು ಆಮ್ ಆದ್ಮಿ ಪಾರ್ಟಿಯ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಅಭಿಯಾನವನ್ನು ಬೆಂಬಲಿಸಿ 7669100500 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಲು ಕರೆ ನೀಡಲಾಯಿತು.